ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋಲಾರ:- ಕೋವಿಡ್ ಲಾಕ್‍ಡೌನ್ ಹಿನ್ನಲೆಯಲ್ಲಿ ರಸ್ತೆಗಿಳಿದ 300ಕ್ಕೂ ಹೆಚ್ಚು ವಾಹನಗಳು ಸೀಜ್, ಅನಗತ್ಯ ಓಡಾಟ ನಡೆಸಿದವರಿಗೆ ಲಾಠಿ ರುಚಿ, 9-30ಕ್ಕೆ ಅಂಗಡಿ,ಮುಂಗಟ್ಟುಗಳು ಬಂದ್, ಬ್ಯಾರಿಕೇಡ್ ಹಾಕಿ ಎಲ್ಲಾ ಪ್ರಮುಖ ರಸ್ತೆಗಳನ್ನು ಮುಚ್ಚುವ ಮೂಲಕ ಇಡೀ ನಗರ ಸ್ಥಬ್ದವಾಯಿತು.
ನಗರದ ಎಲ್ಲಾ ಪ್ರಮುಖ ರಸ್ತೆ,ವೃತ್ತಗಳಲ್ಲಿ ಬೆಳಗ್ಗೆ 6 ಗಂಟೆಗೆ ಕಾರ್ಯಾಚರಣೆ ಆರಂಭಿಸಿದ ಪೊಲೀಸರು, ತರಕಾರಿ,ಹಾಲು,ದಿನಸಿಗೆ ದ್ವಿಚಕ್ರವಾಹನಗಳಲ್ಲಿ ರಸ್ತೆಗಿಳಿದವರ ವಾಹನಗಳನ್ನು ವಶಕ್ಕೆ ಪಡೆದು ಲಾಠಿ ಬಿಸಿ ಮುಟ್ಟಿಸಿದರು.
ಇದರಿಂದಾಗಿ 9-30 ರ ಸುಮಾರಿಗೆ ನಗರದಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು, ಮೆಡಿಕಲ್‍ಸ್ಟೋರ್ಸ್ ಮತ್ತು ಹಾಲಿನ ಬೂತ್ ಹೊರತುಪಡಿಸಿ ಎಲ್ಲಾ ಅಂಗಡಿಗಳು ಮುಚ್ಚಿ ಇಡೀ ನಗರ ಸ್ಥಬ್ದವಾಯಿತು
ಟೇಕಲ್ ಕ್ರಾಸ್‍ನಲ್ಲಿ ಪಿಸಿಐ ನೇತೃತ್ವ
ನಗರದ ಟೇಕಲ್ ರಸ್ತೆಯಲ್ಲಿ ವೃತ್ತ ನಿರೀಕ್ಷಕ ರಂಗಶಾಮಯ್ಯ ನೇತೃತ್ವದಲ್ಲಿ ಸಂಚಾರಿ ಪಿಎಸ್‍ಐ ನಾರಾಯಣಸ್ವಾಮಿ ಮತ್ತು ಸಿಬ್ಬಂದಿ ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಿಸಿದರು. ಅತ್ಯಗತ್ಯ ಸೇವೆಗಳನ್ನು ಹೊರತು ಪಡಿಸಿ ಉಳಿದೆಲ್ಲಾ ವಾಹನಗಳನ್ನು ವಶಕ್ಕೆ ಪಡೆಯಲಾಯಿತು.
ಕೆಲವು ಕಡೆ ತರಕಾರಿ, ದಿನಸಿಗೆ ವಾಹನಗಳಲ್ಲಿ ಬಂದವರೂ ಸಿಕ್ಕಿಹಾಕಿಕೊಂಡು ಹೆಣಗಾಡುತ್ತಿದ್ದುದು ಕಂಡು ಬಂತು. ಒಟ್ಟಾರೆ ನಗರದಲ್ಲಿ 300ಕ್ಕೂ ಹೆಚ್ಚು ದ್ವಿಚಕ್ರವಾಹನ ಮತ್ತು ಕಾರುಗಳನ್ನು ವಶಕ್ಕೆ ಪಡೆಯಲಾಗಿದ್ದು, ನಗರದ ಕವಾಯತು ಮೈದಾನದಲ್ಲಿ ತಂದು ನಿಲ್ಲಿಸಲಾಯಿತು.
ಹೋಟೆಲ್-ಪಾರ್ಸಲ್ಲ ಸಿಕೆಗೆ ಅವಕಾಶ
ಹೋಟೆಲ್‍ಗಳಲ್ಲಿ ಬೆಳಗ್ಗೆ 10 ಗಂಟೆವರೆಗೂ ಪಾರ್ಸಲ್‍ಗೆ ಅವಕಾಶ ಕಲ್ಪಿಸಲಾಗಿದ್ದು, ನಂತದ ಅವು ಬಂದ್ ಆದವು. ಹಣ್ಣು, ತರಕಾರಿ, ದಿನಸಿ ಅಂಗಡಿಗಳು 10 ಗಂಟೆ ಸುಮಾರಿಗೆ ಇಡೀ ನಗರದಲ್ಲಿ ಸಂಪೂರ್ಣ ಬಂದ್ ಆದವು.
ಜಿಲ್ಲಾಸ್ಪತ್ರೆಯಲ್ಲಿ ಇಂದಿನಿಂದ 18ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುತ್ತಿರುವ ಹಿನ್ನಲೆಯಲ್ಲಿ ಲಸಿಕೆ ಪಡೆಯಲು ಬರುವವರು ನಡೆದುಕೊಂಡು ಬಂದರೆ ಅವರಿಗೆ ಪೊಲೀಸರು ಅವಕಾಶ ಮಾಡಿಕೊಟ್ಟರು. ಕೆಲವು ಕಡೆಗಳಲ್ಲಿ ರೋಗಿಗಳನ್ನು ಸಾಗಿಸುತ್ತಿದ್ದ ಆಟೋಗಳು, ದ್ವಿಚಕ್ರವಾಹನಗಳಿಗೂ ಅವಕಾಶ ಕಲ್ಪಿಸಲಾಯಿತು.
ಎಲ್ಲೆಡೆ ಚೆಕ್ ಪೋಸ್ಟ್ಗಡಿಗಳು ಬಂದ್
ಜಿಲ್ಲೆಗೆ ಪ್ರವೇಶಿಸುವ ಎಲ್ಲಾ ಗಡಿಗಳನ್ನು ಜಿಲ್ಲಾಡಳಿತ ಬಂದ್ ಮಾಡಿದ್ದು, ಎಲ್ಲಾ ಕಡೆಗಳಲ್ಲಿ ಚೆಕ್ ಪೋಸ್ಟ್ ಹಾಕಲಾಗಿದೆ, ಬರುವ ವಾಹನಗಳನ್ನು ಪರೀಶೀಲಿಸಿದ ನಂತರವೇ ಒಳಗೆ ಬಿಡಲಾಗುತ್ತಿದೆ. ಜತೆಗೆ ರಾಷ್ಟ್ರೀಯ ಹೆದ್ದಾರಿಯಲ್ಲೂ ವಾಹನಗಳ ನಿಲುಗಡೆಯಾದವು.
ಅಂತರ ಜಿಲ್ಲಾ ಚೆಕ್‍ಪೋಸ್ಟ್‍ಗಳಿರುವ ಕ್ಯಾಲನೂರು, ಬೆಂಗಳೂರು ರಸ್ತೆಯ ರಾಮಸಂದ್ರಗಳಲ್ಲೂ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಯಾವುದೇ ಜನಸಾಗಾಣೆ ವಾಹನಗಳಿಗೆ ಅವಕಾಶ ನೀಡಲಿಲ್ಲ. ನಿಯಮಾನುಸಾರ ಸರಕು ಸಾಗಾಣೆ ವಾಹನಗಳ ಓಡಾಟಕ್ಕೆ ಅನುಮತಿ ನೀಡಲಾಗಿತ್ತು.
ಸಾರಿಗೆ ಸಂಸ್ಥೆ ಬಸ್ಸುಗಳು ಮೊದಲೇ ನಿಲುಗಡೆಯಾಗಿರುವುದರಿಂದ ಬಸ್ಸುಗಳ ಓಡಾಟವೂ ಇಲ್ಲ, ಜನರ ಪ್ರಯಾಣವೂ ಇಲ್ಲ. ಇಡೀ ನಿಲ್ದಾಣ ಬಣಗುಡುತ್ತಿತ್ತು.
ಹಳ್ಳಿಗಾಡಿನಲ್ಲೂ ಲಾಕ್‍ಡೌನ್
ನಗರ ಮಾತ್ರವಲ್ಲದೇ ಜಿಲ್ಲೆಯ ಎಲ್ಲಾ ಪ್ರಮುಖ ಹೋಬಳಿ ಕೇಂದ್ರಗಳು, ಹಳ್ಳಿಗಳಲ್ಲೂ ಲಾಕ್ ಡೌನ್ ಮಾಡಲಾಗಿತ್ತು. ಹಳ್ಳಿಗಳಲ್ಲಿನ ಅಂಗಡಿ ಮುಂಗಟ್ಟುಗಳನ್ನು ಬೆಳಗ್ಗೆ 10 ಗಂಟೆಗೆ ಬಂದ್ ಮಾಡಿಸಲಾಗಿತ್ತು.
ಕೋವಿಡ್ ಮಹಾಮಾರಿ ಹಳ್ಳಿಗಳಿಗೂ ಹೆಚ್ಚು ಪಸರಿಸಿರುವುದರಿಂದ ಗ್ರಾಮ ಪಂಚಾಯಿತಿಗಳು ಹೆಚ್ಚಿನ ಮುತುವರ್ಜಿ ವಹಿಸಿ ಲಾಕ್‍ಡೌನ್ ಯಶಸ್ವಿಗೊಳಿಸಲು ಶ್ರಮಿಸಿದವು.
ಒಟ್ಟಾರೆ ಇಡೀ ಜಿಲ್ಲೆ ಮೊದಲ ದಿನ ಲಾಕ್‍ಡೌನ್‍ಗೆ ಸ್ಪಂದಿಸಿದ್ದು, ಬೆಳಗ್ಗೆ 10 ಗಂಟೆ ನಂತರ ಸಂಪೂರ್ಣ ಸ್ಥಬ್ದವಾಯಿತು.