ಕೋಲಾರದಲ್ಲಿ ಸಾರ್ವಜನಿಕರು ಹಾಗೂ ಸರಕಾರದ ಸಹಭಾಗಿತ್ವದಲ್ಲಿ ಸುಮಾರು 200 ಹಾಸಿಗೆಗಳ ಕೋವಿಡ್ ಆಸ್ಪತ್ರೆ – ಸರಕಾರದ ಸಹಕಾರಕ್ಕೆ ಮನವಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ,ಮೇ.15: ಕೋಲಾರದಲ್ಲಿ ಸಾರ್ವಜನಿಕರು ಹಾಗೂ ಸರಕಾರದ ಸಹಭಾಗಿತ್ವದಲ್ಲಿ ಸುಮಾರು 200 ಹಾಸಿಗೆಗಳ ಕೋವಿಡ್ ಆಸ್ಪತ್ರೆ ನಿರ್ಮಿಸಲು ತೀರ್ಮಾನಿಸಿದ್ದು, ಸಹಕಾರ ನೀಡಬೇಕೆಂದು ಆಗ್ರಹಿಸಿ ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಇಂಚರ ಗೋವಿಂದರಾಜು, ಕೋವಿಡ್-19 2ನೇ ಅಲೆಯಲ್ಲಿ ಸಾರ್ವಜನಿಕರು ಆರೋಗ್ಯ, ಸೌಲಭ್ಯಕ್ಕೆ ಪರಿತಪಿಸಿದ ರೀತಿಯು
ಎಂತಹವರ ಮನಸ್ಸನ್ನೂ ಸಹ ಕಲಕುವಂತಾಗಿದ್ದು, ನಾನೊಬ್ಬ ಸರಕಾರದ ಪ್ರತಿನಿಧಿಯಾಗಿ ಒಬ್ಬ ಕೊರೊನಾ ಸೋಂಕಿತನಿಗೂ ಕನಿಷ್ಟಪಕ್ಷ ಒಂದು ಆಕ್ಸಿಜನ್ ಬೆಡ್,
ವೆಂಟಿಲೇಟರ್‍ಅನ್ನು ಕೊಡಿಸಲು ಸಾಧ್ಯವಾಗಲಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು. ನನ್ನ ಕಣ್ಣ ಮುಂದೆಯೇ ರೋಗಿಗಳು ಆಕ್ಸಿಜನ್ ಇಲ್ಲದೇ ಸಾಯುವುದು ಹಾಗೂ
ಅವರ ಸಂಬಂಧಿಕರ ಅಳಲನ್ನು ನೋಡಿ ನನಗೆ ಅಪಾರ ನೋವುಂಟಾಗಿದೆ. ಇದರಿಂದಾಗಿ ಅನೇಕ ನನ್ನ ಸ್ನೇಹಿತರು ಕರೆ ಮಾಡಿ ನಾವು ನಿಮ್ಮೊಂದಿಗೆ ಇರುತ್ತೇವೆ ಆರೋಗ್ಯ
ಸಂಕಷ್ಟದಲ್ಲಿ ಕೋಲಾರದ ಜನತೆಗೆ ಒಂದು ಸುಸಜ್ಜಿತವಾಗಿ 175 ಆಕ್ಸಿಜನ್ ಹಾಸಿಗೆಗಳ ಸಾಮಾನ್ಯ ವಾರ್ಡ್‍ಗಳು, 25 ಹಾಸಿಗೆಗಳ ಐಸಿಯು ವೆಂಟಿಲೇಟರ್ ಸಹತ
ವಾರ್ಡ್ ಹಾಗೂ 25 ವಿಶೇಷ ವಾರ್ಡ್‍ಗಳನ್ನು ನಿರ್ಮಿಸಲು ಟ್ರಸ್ಟ್ ಸ್ಥಾಪಿಸಿ, ಸುಸಜ್ಜಿತ ಕೋವಿಡ್ ಆಸ್ಪತ್ರೆ ನಿರ್ಮಿಸಿ ಕೊಡಲು ಸಲಹೆ ನೀಡಿದ್ದು, ನಾವು ಸಿದ್ಧರಿದ್ದೇವೆ ಎಂದು ಹೇಳಿದರು.
ಆಸ್ಪತ್ರೆ ನಿರ್ಮಿಸುವುದರಿಂದ ಮುಂದಿನ ದಿನಗಳಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಿದಾಗ ಸೇರಿದಂತೆ ಕೋಲಾರಕ್ಕೆ ಸರ್ವ ರೀತಿಯಲ್ಲಿಯೂ ಇದರಿಂದ
ಅನುಕೂಲಕರವಾಗಲಿದೆ. ಹಾಗಾಗಿ ಸೂಕ್ತ ಸ್ಥಳವನ್ನು ನೀಡಿ ಕಟ್ಟಡ ಕಾಮಗಾರಿಯನ್ನು ಆರಂಭಿಸಬೇಕಿದೆ. ಆ ಬಳಿಕ ವೈದ್ಯಕೀಯ ಸಿಬ್ಬಂದಿ, ಅರೆ ವೈದ್ಯಕೀತ ಸಿಬ್ಬದಿ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಡಬೇಕಿದ್ದು, ಇದಕ್ಕಾಗಿ ಎಂಎಲ್‍ಸಿ ಅನುದಾನದಲ್ಲಿ 2 ಕೋಟಿರೂ, ನಾನು ವೈಯಕ್ತಿಕವಾಗಿ 3 ಕೋಟಿರೂ ನೀಡುವ ಜತೆಗೆ ಗೆಳೆಯರ ಸಹಕಾರವನ್ನು ಪಡೆದುಕೊಳ್ಳುವುದಾಗಿ ತಿಳಿಸಿ, ಮುಖ್ಯಮಂತ್ರಿಗಳು ಕೂಡಲೇ ಇದಕ್ಕೆ ಸ್ಪಂದಿಸಬೇಕೆಂದು ಮನವಿ ಮಾಡಿದರು
.