ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ, ಮೇ.19, ಮಾನವೀಯತೆಯ ದೃಷ್ಠಿಯಿಂದ ಸಂಕಷ್ಟದಲ್ಲಿರುವ ರೈತರ ರಕ್ಷಣೆಗೆ ಮುಂದಾಗಿ ಹೊರ ರಾಜ್ಯದ ಟೊಮೇಟೊ ಆಮದು ನಿಲ್ಲಿಸುವ ಜೊತೆಗೆ ಮಾರುಕಟ್ಟೆ ಜಾಗದ ಸಮಸ್ಯೆ ಬಗೆಹರಿಸಿ ಅಭಿವೃದ್ಧಿಪಡಿಸಬೇಕು ಹಾಗೂ ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ತನಿಖೆ ಮಾಡಲು ವಿಶೇಷ ತಂಡ ರಚನೆ ಮಾಡಬೇಕೆಂದು ರೈತ ಸಂಘದಿಂದ ಕಾರ್ಯದರ್ಶಿ ವಿಜಯಲಕ್ಷ್ಮಿ ರವರಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ದುಬಾರಿಯಾಗಿರುವ ರಸಗೊಬ್ಬರ, ಬಿತ್ತನೆ ಬೀಜ, ಕೀಟನಾಶಕಗಳ ನಡುವೆಯೂ ಲಕ್ಷಾಂತರ ರೂಪಾಯಿ ಖಾಸಗಿ ಸಾಲ ಮಾಡಿ ಬೆಳೆದಂತಹ ಬೆಳೆಗೆ ಸಾಂಕ್ರಾಮಿಕ ರೋಗಗಳ ಹಾವಳಿ ಹಾಗೂ ಪ್ರಕೃತಿ ವಿಕೋಪದಿಂದ ಸೂಕ್ತವಾದ ಮಾರುಕಟ್ಟೆಯಿಲ್ಲದೆ ಬೆಳೆದ ಬೆಳೆಗೆ ಬೆಲೆಯಿಲ್ಲದೆ ಹಾಕಿದ ಬಂಡವಾಳ ಕೈಗೆ ಸಿಗದೆ 2 ವರ್ಷಗಳ ಕಾಲ ತತ್ತರಿಸಿರುವ ರೈತರಿಗೆ ಈ ವರ್ಷ ಟೊಮೇಟೊ ಬೆಲೆ ಏರಿಕೆಯಿಂದ ಚೇತರಿಸಿಕೊಳ್ಳುವ ಸಮಯದಲ್ಲಿ ಕೆಲವು ಮಂಡಿ ಮಾಲೀಕರು ರೈತರ ಹೆಸರಿನಲ್ಲಿ ನಾಸಿಕ್ ಹಾಗೂ ದೆಹಲಿ ಟೊಮೇಟೊವನ್ನು ತರಿಸಿಕೊಳ್ಳುವ ಮೂಲಕ ಮಾರುಕಟ್ಟೆಯನ್ನು ಏರುಪೇರು ಮಾಡುತ್ತಿದ್ದಾರೆ. ಇದರಿಂದ ರಾಜ್ಯದ ರೈತರಿಗೆ ಹೊಡೆತ ಬೀಳುವ ಜೊತೆಗೆ ಮತ್ತೆ ಬೆಲೆ ಕುಸಿತ ಕಂಡರೆ ಆತ್ಮಹತ್ಯೆಯ ದಾರಿ ಹಿಡಿಯಬೇಕಾಗುತ್ತದೆ. ಮಾನವೀಯತೆ ದೃಷ್ಠಿಯಿಂದ ಕಿಸಾನ್, ಕೆಯು, ಎಎನ್‍ಆರ್ ಫ್ರೆಶ್ ಮಂಡಿ ಮಾಲೀಕರನ್ನು ಕರೆದು ಸಮಸ್ಯೆ ವಿವರವಾಗಿ ತಿಳಿಸಿ ರೈತರ ರಕ್ಷಣೆಗೆ ಅಧಿಕಾರಿಗಳು ನಿಲ್ಲಬೇಕೆಂದು ರೈತ ಸಂಘದ ಮಹಿಳಾ ಜಿಲ್ಲಾಧ್ಯಕ್ಷ ಎ.ನಳಿನಿಗೌಡ ಒತ್ತಾಯ ಮಾಡಿದರು.
ವಿಧಾನಸೌಧದಲ್ಲಿ ದೂಳು ಹಿಡಿಯುತ್ತಿರುವ ಮಾರುಕಟ್ಟೆ ಜಾಗದ ಸಮಸ್ಯೆ ಕಡತಕ್ಕೆ ಮುಕ್ತಿಗೊಳಿಸಿ:
ಏಷ್ಯಾದಲ್ಲೇ ಅತಿ ಎರಡನೇ ಮಾರುಕಟ್ಟೆ ಎಂದು ಹೆಗ್ಗಳಿಕೆ ಪಡೆದಿರುವ ಸಾವಿರಾರು ಕೋಟಿ ವಹಿವಾಟು ನಡೆಯುವ ಮಾರುಕಟ್ಟೆ ಅಭಿವೃದ್ಧಿಗೆ ಅವಶ್ಯಕತೆಯಿರುವ 50 ಎಕರೆ ಜಮೀನಿನ ಕಡತ ಸರ್ಕಾರದ ಮಟ್ಟದಲ್ಲಿ ದೂಳು ಹಿಡಿಯುತ್ತಿದೆ. ಪ್ರತಿ ವರ್ಷ ಟೊಮೇಟೊ ಅವಕ ಪ್ರಾರಂಭವಾದಾಗ ಮಾತ್ರ ಜಾಗದ ಸಮಸ್ಯೆ ಬಗ್ಗೆ ಧ್ವನಿ ಎತ್ತುವ ಜನಪ್ರತಿನಿಧಿಗಳು, ಜಿಲ್ಲಾಡಳಿತ, ಕೃಷಿ ಉತ್ಪನ್ನ ಮಾರುಕಟ್ಟೆ ಆಡಳಿತ ಮಂಡಳಿಗೆ ಯುಗಾದಿ ಹಬ್ಬದಂತೆ ಜ್ಞಾಪಕ ಬಂದು ಆನಂತರ ಅದನ್ನು ಮರೆತು ಬೆವರು ಹನಿ ಸುರಿಸಿ ಬೆಳೆದ ರೈತರಿಗೆ ಮಾರುಕಟ್ಟೆಯ ಜಾಗದ ಸಮಸ್ಯೆಯಿಂದ ದಲ್ಲಾಳರಿಗೆ ಹಾಗೂ ರೈತರಿಗೆ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತಿದೆ. ಇದಕ್ಕೆ ಮುಕ್ತಿ ನೀಡಲು ಆದಷ್ಟು ಬೇಗ ಜಾಗದ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದರೆ ರೈತರ ಟೊಮೇಟೊ ಹೆದ್ದಾರಿಗಳಲ್ಲಿ ಇಳಿಸಬೇಕಾದ ಪರಿಸ್ಥಿತಿ ಬರುತ್ತದೆ ಎಂದು ಮುಂದಿನ ಭವಿಷ್ಯದ ಬಗ್ಗೆ ಅಧಿಕಾರಿಗಳಿಗೆ ವಿವರಣೆ ನೀಡಿದರು.
ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ
ರಾಷ್ಟ್ರೀಯ ಹೆದ್ದಾರಿ 75 ಪಾದಚಾರಿ ರಸ್ತೆ ಕಳಪೆ ಅಭಿವೃದ್ಧಿ ಮಾಡಿರುವ ನಿರ್ಮಿತ ಕೇಂದ್ರದ ವಿರುದ್ಧ ಕ್ರಮ ಕೈಗೊಂಡು 3ನೇ ವ್ಯಕ್ತಿಯಿಂದ ಪರಿಶೀಲನೆ ಮಾಡಿಸಬೇಕು:
ಅನವಶ್ಯಕವಾಗಿ ಕೃಷಿ ಆಡಳಿತ ಮಂಡಳಿ ರೈತರ ತೆರಿಗೆ ಹಣವನ್ನು ತಮಗಿಷ್ಟ ಬಂದ ರೀತಿ ಬೇಡದ ಕಾಮಗಾರಿಗಳಿಗೆ ದುರುಪಯೋಗ ಪಡಿಸಿಕೊಂಡಿದ್ದಾರೆ. ಪಾದಚಾರಿ ರಸ್ತೆ ಅಭಿವೃದ್ಧಿಪಡಿಸಲು 40 ಲಕ್ಷ ನಿರ್ಮಿತಿ ಕೇಂದ್ರಕ್ಕೆ ನೀಡಿ ಕಾಮಗಾರಿಯ ಗುಣಮಟ್ಟ ಸಂಪೂರ್ಣವಾಗಿ ಕಳಪೆಯಾಗಿದೆ. ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದೆ ಮಳೆ ಬಂದಾಗ ನೀರು ನಿಂತು ಕೆರೆ, ಕುಂಟೆಗಳಾಗಿ ಮಾರ್ಪಟ್ಟಿದೆ. ಅಲ್ಲದೆ ಮಾರುಕಟ್ಟೆಯಲ್ಲಿ ವಿವಿಧ ಕಾಮಗಾರಿಗಳು ಇದೇ ಪರಿಸ್ಥಿತಿಯಿದ್ದು, ಎಲ್ಲ ಕಾಮಗಾರಿಗಳನ್ನು ಪರಿಶೀಲನೆ ಮಾಡಲು ವಿಶೇಷ ತಂಡ ರಚನೆ ಮಾಡಿ ಅಕ್ರಮವೆಸಗಿರುವ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ಮಾಡಿದರು.
ಮೂಲಭೂತ ಸೌಕರ್ಯಗಳನ್ನು ಒದಗಿಸಿ:
ಸ್ವಚ್ಛತೆ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ದೀಪಗಳು ಹಾಗೂ ಗುಣಮಟ್ಟದ ಆಹಾರ ಜೊತೆಗೆ ಹದಗೆಟ್ಟಿರುವ ಚರಂಡಿ ವ್ಯವಸ್ಥೆಯನ್ನು ಸರಿಪಡಿಸಿ ಮಾರುಕಟ್ಟೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮುಖಾಂತರ ರೈತ-ಕೂಲಿ ಕಾರ್ಮಿಕರ ಆರೋಗ್ಯವನ್ನು ರಕ್ಷಣೆ ಮಾಡಬೇಕೆಂದು ಒತ್ತಾಯ ಮಾಡಿದರು.
ಸಮಸ್ಯೆಗಳನ್ನು ಒಂದು ವಾರದೊಳಗೆ ಬಗೆಹರಿಸದೇ ಹೋದರೆ ಟೊಮೇಟೊ ಸಮೇತ ಮಾನ್ಯ ಜಿಲ್ಲಾಧಿಕಾರಿಗಳ ನಿವಾಸದ ಮುಂದೆ ನ್ಯಾಯಕ್ಕಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಮನವಿ ನೀಡಿ ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಕಾರ್ಯದರ್ಶಿ ವಿಜಯಲಕ್ಷ್ಮಿ ರವರು ಟೆಮೊಟೋ ಮಾರುಕಟ್ಟೆಯಲ್ಲಿ ಸಮಸ್ಯೆಗಳಿಗೆ ಜಾಗಕ್ಕೆ ಸಂಬಂಧಪಟ್ಟ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಜೊತೆಗೆ ಹೊರ ರಾಜ್ಯದ ಟೆಮೆಟೋ ಅಮದು ಮಾಡಿಕೊಳ್ಳದಂತೆ ದಲ್ಲಾಳರಿಗೆ ಸೂಚನೆ ನೀಡುವ ಜೊತೆಗೆ ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾ ಗೌರವಾಧ್ಯಕ್ಷ ಮಂಗಸಂದ್ರ ತಿಮ್ಮಣ್ಣ, ಜಿಲ್ಲಾಧ್ಯಕ್ಷ ಐತಂಡಹಳ್ಳಿ ಮಂಜುನಾಥ, ಕೋಲಾರ ತಾಲ್ಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ, ಅಶ್ವಥಪ್ಪ, ಕುವಣ್ಣ, ನಾರಾಯಣಗೌಡ, ವೆಂಕಟೇಶಪ್ಪ, ಗೋವಿಂದಪ್ಪ, ಮಾಲೂರು ತಾಲ್ಲೂಕು ಅಧ್ಯಕ್ಷ ಯಲ್ಲಣ್ಣ, ಮುಂತಾದವರು ಇದ್ದರು.
