![](https://jananudi.com/wp-content/uploads/2025/02/Screenshot-946-6.png)
![](https://jananudi.com/wp-content/uploads/2025/02/WhatsApp-Image-2025-02-05-at-6.59.08-PM-1.jpg)
ಕೋಲಾರ,ಫೆ.05: ಕೋಲಾರ ಪ್ರಾದೇಶಿಕ ಮತ್ತು ಜಿಲ್ಲಾ ಮಟ್ಟದ ಪತ್ರಿಕೆಗಳ ಸಂಪಾದಕರ ಸಭೆಯನ್ನು ಫೆಬ್ರವರಿ 23 ರಂದು ಬೆಂಗಳೂರಿನ ಕಸಾಪ ಕೇಂದ್ರ ಕಚೇರಿಯಲ್ಲಿ ಕರೆದು, ಸಂಪಾದಕರ ಸಮಸ್ಯೆಗಳ ಸಾಧಕ ಬಾದಕಗಳನ್ನು ಚರ್ಚಿಸಿ, ಸರ್ಕಾರದ ಗಮನಕ್ಕೆ ತರುವ ಮೂಲಕ ಮುಂದಿನ ದಿನಗಳಲ್ಲಿ ಬಗೆಹರಿಸುವ ಕೆಲಸ ಮಾಡಬೇಕು ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ತಿಪ್ಪೇಸ್ವಾಮಿ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಪ್ರಾದೇಶಿಕ ಮತ್ತು ಜಿಲ್ಲಾಮಟ್ಟದ ಪತ್ರಿಕೆಗಳ ಸಂಪಾದಕರ ಸಭೆಯಲ್ಲಿ ಮಾತನಾಡಿ, ಕರ್ನಾಟಕ ರಾಜ್ಯ ಕಾರ್ಯನಿರತ ಸಂಪಾದಕರ ಸಂಘಕ್ಕೆ ಸದಸ್ಯರಾಗುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕೈ ಜೋಡಿಸುವಂತೆ ಮನವಿ ಮಾಡಿದರು.
ಒಂದು ವೇಳೆ ಸಂಪಾದಕರ ನಾನಾ ಬೇಡಿಕೆಗಳು ಈಡೇರದ ಪಕ್ಷದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅನಿರ್ದಿಷ್ಟಾವಧಿ ಧರಣಿಯನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಪ್ರತ್ಯೇಕ ಸಚಿವರಿಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಇಲಾಖೆಯ ಹುದ್ದೆಯನ್ನು ತಮ್ಮೊಂದಿಗೆ ಇಟ್ಟುಕೊಂಡಿದ್ದು, ಈ ನಿಟ್ಟಿನಲ್ಲಿ ಅವರನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ, ಮುಂದೆ ಇಲಾಖೆಯ ಅಪರ ಕಾರ್ಯದರ್ಶಿಗಳ ಮೂಲಕ ಸಿಎಂ ಬೇಟಿಗೆ ದಿನಾಂಕ ನಿಗದಿಪಡಿಸಿ, ಪ್ರಾದೇಶಿಕ ಮತ್ತು ಜಿಲ್ಲಾಮಟ್ಟದ ಸಂಪಾದಕರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುತ್ತದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಕಾರ್ಯನಿರತ ಸಂಪಾದಕರ ಸಂಘದ ಉಪಾಧ್ಯಕ್ಷ ಭೀಮರಾವ್ ಅಂಡ್ಯನಾಳ್ ಮಾತನಾಡಿ, ಸರಕಾರದ ಪತ್ರಿಕಾ ಜಾಹೀರಾತುಗಳನ್ನು ಖಾಸಗಿ ಏಜೆನ್ಸಿಗಳ ಮೂಲಕ ತಡವಾಗಿ ಬಿಲ್ ಗಳನ್ನು ನೀಡುತ್ತಿದ್ದು, ಇದರಿಂದ ಪತ್ರಿಕಾ ಸಂಪಾದಕರಿಗೆ ಸಮಸ್ಯೆಯಾಗುತ್ತಿದೆ. ಜಾಹಿರಾತಿನ ಹಣವನ್ನು ಖಾಸಗಿ ಏಜೆನ್ಸಿಗಳು ರಿಯಲ್ ಎಸ್ಟೇಟ್ ಉದ್ದಿಮೆಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ವಾರ್ತಾ ಇಲಾಖೆಯ ಮೂಲಕ ಪತ್ರಿಕೆಗಳಿಗೆ ಜಾಹೀರಾತುಗಳನ್ನು ನೀಡುವ ಕೆಲಸ ಮಾಡಬೇಕಾಗಿದೆ ಎಂದು ಒತ್ತಾಯಿಸಿದರು.
ಪ್ರಾದೇಶಿಕ ಮತ್ತು ಜಿಲ್ಲಾ ಮಟ್ಟದ ಪತ್ರಿಕೆಗಳ ಉಳಿವಿಗಾಗಿ ಕರ್ನಾಟಕ ರಾಜ್ಯ ಕಾರ್ಯನಿರತ ಸಂಪಾದಕರ ಸಂಘದಿಂದ ರಾಜ್ಯದ ಕೊಪ್ಪಳ ಜಿಲ್ಲೆಯಲ್ಲಿ ಕಾರ್ಯಕಾರಿಣಿ ಸಭೆಯನ್ನು ಮಾರ್ಚ್ ತಿಂಗಳಿನಲ್ಲಿ ಹಮ್ಮಿಕೊಳ್ಳಲಾಗಿದೆ. ಪರ್ಯಾಯವಾಗಿ ಎಲ್ಲಾ ಸಂಘಗಳೊಂದಿಗೆ ಸೇರಿಕೊಂಡು ಪ್ರಾದೇಶಿಕ ಮತ್ತು ಜಿಲ್ಲಾ ಮಟ್ಟದ ಪತ್ರಿಕೆಗಳ ಉಳಿವಿಗೆ ಒತ್ತಾಯವಾಗಿದೆ ಎಂದರು.
ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಪ್ರಾದೇಶಿಕ ಮತ್ತು ಜಿಲ್ಲಾಮಟ್ಟದ ಪತ್ರಿಕೆ ಸಂಪಾದಕರಿಗೆ ಎದುರಾಗುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಒಗ್ಗಟಿನ ಹೋರಾಟದ ಮೂಲಕ ಬೇಡಿಕೆಗಳನ್ನು ಈಡೇರಿಸಿಕೊಳ್ಳಣ ಎಂದರು.
ಮುಂದಿನ ದಿನಗಳಲ್ಲಿ ಸಂಪಾದಕರು ಒಗ್ಗಟ್ಟಿನಿಂದ ಸಭೆಗಳನ್ನು ನಡೆಸಿ ಒಮ್ಮತದಿಂದ ನಿರ್ಣಯಗಳನ್ನು ತೆಗೆದುಕೊಂಡು ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳಬೇಕು ಎಂದರು.
ಟೆಂಡರ್ ಜಾಹೀರಾತುಗಳನ್ನು ವಾರ್ತಾ ಮತ್ತು ಸಾರ್ವಜನಿಕ ಇಲಾಖೆಯಿಂದ ಕಳುಹಿಸುವ ಸುದ್ದಿಯ ರೂಪದಲ್ಲಿ ಕಳುಹಿಸುತ್ತಿದ್ದು, ಪ್ರಾದೇಶಿಕ ಮತ್ತು ಜಿಲ್ಲಾ ಪತ್ರಿಕೆಯ ಸಂಪಾದಕರು ಗಮನವನ್ನು ಹರಿಸಬೇಕಿದೆ, ಸಣ್ಣ ಪತ್ರಿಕೆಗಳ ಮಹತ್ವ ಅಪಾರವಾಗಿದ್ದು, ಶಕ್ತಿ ತುಂಬಬೇಕೆಂದರು..
ಸಂಯುಕ್ತ ವಿಜಯ ಪ್ರಾದೇಶಿಕ ದಿನಪತ್ರಿಕೆಯ ಸಂಪಾದಕ ವಿ.ಮುನಿರಾಜು ಮಾತನಾಡಿ, ಕಳೆದ ಏಳು ತಿಂಗಳಿನಿಂದ ಸರ್ಕಾರ ಜಾಹೀರಾತು ಹಣ ಬಾಕಿ ಇದ್ದು, ಈ ಕೂಡಲೇ ಜಾಹೀರಾತಿನ ಹಣವನ್ನು ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಪತ್ರಿಕೆಗಳಂತೆ ಜಾಹಿರಾತು ಸೇರಿದಂತೆ ಇತರೆ ಅಂಶಗಳನ್ನು ಸಹ ಪ್ರಾದೇಶಿಕ ಮತ್ತು ಜಿಲ್ಲಾ ಮಟ್ಟದ ಪತ್ರಿಕೆಗಳಿಗೂ ಆದ್ಯತೆ ನೀಡಬೇಕು ಎಂದರೆಲ್ಲದೆ, ಹೊಸ ಜಾಹೀರಾತು ನಿಯಮಗಳನ್ನು ರಾಜ್ಯ ಸರ್ಕಾರ ಷರತ್ತುಗಳನ್ನು ರದ್ದುಗೊಳಿಸುವ ಶಕ್ತಿಯ ಪ್ರದರ್ಶನವನ್ನು ಮಾಡಬೇಕಾಗಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಕಾರ್ಯನಿರತ ಸಂಪಾದಕರ ಸಂಘದ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ಇದು ಯಾವುದೇ ಸಂಘಕ್ಕೆ ಪರ್ಯಾಯವಲ್ಲ, ಈಗಾಗಲೇ ರಾಜ್ಯದಲ್ಲಿ ಅನೇಕ ಸಂಘಗಳು ಇದ್ದಾವೆ. ಸಣ್ಣ ಪತ್ರಿಕೆಗಳ ಉಳಿವಿಗಾಗಿ ಹೋರಾಟದ ಮೂಲಕ ನಮ್ಮ ಬೇಡಿಕೆಗಳನ್ನು ಬಗೆಹರಿಸಿಕೊಳ್ಳಬೇಕೆಂದರು.
ಸಭೆಯಲ್ಲಿ ಸಂಪಾದಕರ ಸಂಘದ ಉಪಾಧ್ಯಕ್ಷರಾದ ಮಹಮದ್ ಯೂನುಸ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಎಸ್.ಗಣೇಶ್, ಹೆಚ್.ಎನ್.ಮುರಳೀಧರ, ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ ಸೇರಿದಂತೆ ಸಂಪಾದಕರುಗಳು ಇದ್ದರು.