

ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಚಟುವಟಿಕೆಗಳನ್ನು ಜಾಗತೀಕರಣಗೊಳಿಸಲು ಕೋಲಾರ ಸುದ್ಧಿ ಮನೆ ವೆಬ್ ಸೈಟ್ನ್ನು ಜನವರಿ ತಿಂಗಳಿನಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಪ್ರಕಟಿಸಿದರು.
ಶನಿವಾರ ನಗರದ ಪತ್ರಕರ್ತರ ಭವನದಲ್ಲಿ ನಡೆದ ಕಾರ್ಯನಿರತ ಪತ್ರಕರ್ತರ ಸಂಘದ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ವೆಬ್ಸೈಟ್ಗೆ ಕೋಲಾರ ಸುದ್ದಿಮನೆ ಎಂದು ಹೆಸರಿಡಲಾಗಿದೆ ಎಂದು ತಿಳಿಸಿದರು.
ಜನವರಿ ತಿಂಗಳ ಸಂಕ್ರಾಂತಿ ವೇಳೆಗೆ ವೆಬ್ಸೈಟ್ ಲೋಕಾರ್ಪಣೆ ಮಾಡಲಾಗುವುದು. ಅದೇ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಸದಸ್ಯರು ಮತ್ತು ಕುಟುಂಬದವರಿಗಾಗಿ ಕ್ರೀಡಾ ಮತ್ತು ಸಾಂಸ್ಕøತಿಕ ಸ್ಪರ್ಧೆಗಳನ್ನು ಆಯೋಜಿಸಿ ಸಂಕ್ರಾಂತಿ ಸುಗ್ಗಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ತಿಳಿಸಿದರು.
ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಎಸ್.ಗಣೇಶ್ ಮಾತನಾಡಿ, ಮುಂದಿನ ದಿನಗಳಲ್ಲಿ ಸಂಘವನ್ನು ಯಾವ ದಿಕ್ಕಿನಲ್ಲಿ ಕೊಂಡೊಯ್ಯಬೇಕು ಎಂಬ ರೂಪುರೇಶೆಗಳನ್ನು ದೊರಕಿಸುವ ರೀತಿಯಲ್ಲಿ ಸಂಘದ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ ವಾರ್ಷಿಕ ವರದಿ ಮಂಡಿಸಿದರು. ಖಜಾಂಚಿ ಎ.ಜಿ.ಸುರೇಶ್ ಕುಮಾರ್ ವಾರ್ಷಿಕ ಲೆಕ್ಕಪತ್ರಗಳಿಗೆ ಅನುಮೋಧನೆ ಪಡೆದುಕೊಂಡರು.
ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ವಿ.ಮುನಿರಾಜು, ಜಿಲ್ಲಾ ಉಪಾಧ್ಯಕ್ಷರಾದ ಅಪ್ಪಾಜಿಗೌಡ ಹಾಗೂ ಟೇಕಲ್ ಲಕ್ಷ್ಮೀಶ್, ಕಾರ್ಯದರ್ಶಿ ಸಿ.ಜಿ.ಮುರಳಿ ವೇದಿಕೆಯಲ್ಲಿದ್ದರು.
ಬಾಕ್ಸ್ ಕಲ್ಯಾಣಿನಿಧಿ ಸಂಗ್ರಹ

ಜಿಲ್ಲೆಯ ಪತ್ರಕರ್ತರಿಗೆ ಯಾವುದೇ ಅಪತ್ತಿನ ಸಂದರ್ಭದಲ್ಲಿ ಸಂಘದ ವತಿಯಿಂದ ನೆರವಾಗಲು ಅನುಕೂಲವಾಗುವಂತೆ 1 ಕೋಟಿ ರೂ.ಗಳ ಪತ್ರಕರ್ತರ ಕಲ್ಯಾಣ ನಿಧಿಯನ್ನು ಸಂಗ್ರಹಿಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ತಿಳಿಸಿದರು.
ಕಲ್ಯಾಣ ನಿಧಿಗಾಗಿ ಇದುವರೆಗೂ ಸಂಗ್ರಹವಾಗಿರುವ 1 ಲಕ್ಷ 33 ಸಾವಿರ ರೂ.ಗಳನ್ನು ಬ್ಯಾಂಕ್ನಲ್ಲಿ ಠೇವಣಿ ಇರಿಸಲಾಗಿದೆ ಎಂದು ತಿಳಿಸಿದರು.
ಪತ್ರಕರ್ತರ ಸಂಘದ ಸ್ವಾವಲಂಬನೆ ಮತ್ತು ಸ್ವಾಭಿಮಾನ ಹೆಚ್ಚಿಸುವುದು ನಮ್ಮ ಆಡಳಿತ ಮಂಡಳಿ ಉದ್ದೇಶವಾಗಿದೆ. ಹಾಗಾಗಿ ಯಾರ ಬಳಿಯೂ ಸಂಘದ ಕಾರ್ಯಚಟುವಟಿಕೆಗಳಿಗಾಗಿ ಕೈಯೂಡ್ಡದೆ ಸ್ವಂತ ಸಂಪನ್ಮೂಲ ಕ್ರೋಡಿಕರಣಕ್ಕೆ ಮುಂದಾಗಿದ್ದೇವೆ ಎಂದು ಗೋಪಿನಾಥ್ ವಿವರಿಸಿದರು.