

ಕೋಲಾರ; ಆ.11: ಜಿಲ್ಲಾದ್ಯಂತ ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆಯನ್ನು ಸರಿಪಡಿಸಿ ಕೋವಿಡ್ ಅನುದಾನದಲ್ಲಿ ನಡೆದಿರುವ ಹಗರಣ ತನಿಖೆ ಮಾಡುವಂತೆ ರೈತಸಂಘದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್‍ಕುಮಾರ್ ಅವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಜಿಲ್ಲಾದ್ಯಂತ ಸರ್ಕಾರಿ ಆಸ್ಪತ್ರೆಗಳು ಕೋಮಾ ಸ್ಥಿತಿಯಲ್ಲಿದ್ದು, ಲಕ್ಷ ಲಕ್ಷ ಸಂಬಳ ಪಡೆದು ಗ್ರಾಮೀಣ ಆರೋಗ್ಯ ಸೇವೆ ಮಾಡಬೇಕಾದ ವೈದ್ಯರು ಹಾಗೂ ಸಿಬ್ಬಂದಿ ನಿರ್ಲಕ್ಷ್ಯದಿಂದ ಜನಸಾಮಾನ್ಯರು ಆರೋಗ್ಯಕ್ಕಾಗಿ ಲಕ್ಷಲಕ್ಷ ಖರ್ಚು ಮಾಡಿ ಖಾಸಗಿ ಆಸ್ಪತ್ರೆ ಇಲ್ಲವೇ ನಕಲಿ ಕ್ಲಿನಿಕ್‍ಗಳನ್ನು ಅವಲಂಭಿಸಿ ಅಮೂಲ್ಯವಾದ ಪ್ರಾಣವನ್ನು ಕಳೆದುಕೊಳ್ಳುವ ಮಟ್ಟಕ್ಕೆ ಆಸ್ಪತ್ರೆಗಳು ಹದಗೆಟ್ಟಿವೆ ಎಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಆರೋಪಿಸಿದರು.
ಜಿಲ್ಲಾದ್ಯಂತ ನಾಯಿ ಕೊಡೆಗಳಂತೆ 827 ನಕಲಿ ಕ್ಲಿನಿಕ್ ನಡೆಸುವ ವೈದ್ಯರಿದ್ದು, ಜಿಲ್ಲಾಧಿಕಾರಿಗಳ ಒಳಗೊಂಡಂತೆ ಕಮಿಟಿಯಿದ್ದರೂ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಜೊತೆಗೆ 26 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅಭಿವೃದ್ಧಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರದ ಜೊತೆಗೆ ಕೋವಿಡ್ ಅವಧಿಯಲ್ಲಿ ಕೋಟ್ಯಾಂತರ ರೂಪಾಯಿ ಅನುದಾನವಿದ್ದರೂ ಸಮರ್ಪಕವಾಗಿ ನಿಭಾಯಿಸದೇ ಅಮಾಯಕರ ಸಾವಿಗೆ ಕಾರಣವಾಗಿರುವ ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳ ಅಂದಿನ ಅವಧಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೈದ್ಯರು ಮತ್ತು ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕೆಂದು ಒತ್ತಾಯಿಸಿದರು.
ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಜನನ ಪ್ರಮಾಣ ಪತ್ರಗಳಿಂದ ಮರಣ ಪ್ರಮಾಣ ಪತ್ರಗಳವರೆಗೆ ಹೆಜ್ಜೆ ಹೆಜ್ಜೆಗೂ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯವಿಲ್ಲದ ಕಾರಣ ಆಸ್ಪತ್ರೆಗೆ ಬರುವ ರೋಗಿಗಳಿಗೆ ಮತ್ತಷ್ಟು ರೋಗ ಅಂಟಿಸಿಕೊಂಡು ಆಸ್ಪತ್ರೆಯಿಂದ ಹೆಣವನ್ನು ತೆಗೆದುಕೊಂಡು ಹೋಗಬೇಕಾದ ಮಟ್ಟಕ್ಕೆ ಹದಗೆಟ್ಟಿದೆ ಎಂದು ವಿವರಣೆ ನೀಡಿ, ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್‍ಕುಮಾರ್, ಅವ್ಯವಸ್ಥೆಗಳನ್ನು ಕಣ್ಣಾರೆ ನೋಡಿದ್ದೇನೆ. ಸರ್ಕಾರಕ್ಕೆ ವರದಿ ನೀಡಿ ಸಮಸ್ಯೆಯನ್ನು ಬಗೆಹರಿಸುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ಮಂಗಸಂದ್ರ ತಿಮ್ಮಣ್ಣ, ಯಾರಂಗಟ್ಟ ಗಿರೀಶ್, ವಕ್ಕಲೇರಿ ಹನುಮಯ್ಯ, ಪುತ್ತೇರಿ ರಾಜು ಮುಂತಾದವರಿದ್ದರು.
