ಶ್ರೀನಿವಾಸಪುರದಲ್ಲಿ ಕೋಲಾರ ಪತ್ರಿಕೆ ಸುವರ್ಣ ಮಹೋತ್ಸವದ ಅಂಗವಾಗಿ ಶನಿವಾರ ಏರ್ಪಡಿಸಲಾಗಿದ್ದ ಹಾಸ್ಯ ಕವಿಗೋಷ್ಠಿಯನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಯಾ ಬಾಲಚಂದ್ರ ಉದ್ಘಾಟನೆ – ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಿ- ಮಾಯಾ ಬಾಲಚಂದ್ರ
ಶ್ರೀನಿವಾಸಪುರ: ವಿದ್ಯಾರ್ಥಿಗಳು ವಾರ್ತಾ ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಸತ್ಯನಿಷ್ಠ ವಿಚಾರಗಳನ್ನು ಅರಿತುಕೊಳ್ಳಬೇಕು ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಯಾ ಬಾಲಚಂದ್ರ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಕೋಲಾರ ಪತ್ರಿಕೆ ಸುವರ್ಣ ಮಹೋತ್ಸವದ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಹಾಸ್ಯ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೋಲಾರ ಪತ್ರಿಕೆ ಪತ್ರಿಕಾ ಧರ್ಮ ಪಾಲನೆಗೆ ಉತ್ತಮ ನಿದರ್ಶನವಾಗಿದೆ. ಪತ್ರಿಕೆ 50 ವರ್ಷ ಸಾರ್ಥಕ ಸೇವೆ ಸಲ್ಲಿಸಿ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದು ಹೇಳಿದರು.
ಬೇರೆ ಸುದ್ದಿ ಮೂಲಗಳಿಗೆ ಹೋಲಿಸಿದರೆ ಇಂದಿಗೂ ಪತ್ರಿಕೆಗಳು ಅತ್ಯಂತ ವಿಶ್ವಾಸಾರ್ಹವಾಗಿವೆ. ನಂಬಲರ್ಹ ಮಾಹಿತಿ ಒದಗಿಸುವುದರಲ್ಲಿ ಮುಂಚೂಣಿಯಲ್ಲಿವೆ. ಕೋಲಾರ ಪತ್ರಿಕೆ ಈ ನಿಟ್ಟಿನಲ್ಲಿ ತನ್ನದೇ ಆದ ಹಾದಿಯಲ್ಲಿ ಜಿಲ್ಲೆಯ ಸರ್ವತೋಮುಖ ಪ್ರಗತಿಗೆ ದೊಡ್ಡ ಕೊಡುಗೆ ನೀಡಿದೆ ಎಂದು ಹೇಳಿದರು.
ಕಾಲೇಜಿನ ಉಪ ಪ್ರಾಂಶುಪಾಲ ಎನ್.ಶ್ರೀಧರ್ ಮಾತನಾಡಿ, ವೃತ್ತಿಧರ್ಮ ಗೌರವಿಸಿ ಕಾರ್ಯನಿರ್ವಹಿಸಿದಾಗ ಮಾತ್ರ ಯಶಸ್ಸು ಪಡೆಯಲು ಸಾಧ್ಯ. ಪತ್ರಿಕೆಯ ಸಂಪಾದಕರು ಹಾಗೂ ಸಿಬ್ಬಂದಿಯ ಪರಿಶ್ರಮ ಹಾಗೂ ಓದುಗರ ಬೆಂಬಲದಿಂದಾಗಿ ಪತ್ರಕೆ ಹೆಮ್ಮರವಾಗಿ ಬೆಳೆದಿದೆ. ಜಿಲ್ಲೆಗೆ ವರದಾನವಾಗಿ ಪರಿಣಮಿಸಿದೆ ಎಂದು ಹೇಳಿದರು.
ಕೋಲಾರ ಪತ್ರಿಕೆ ಸಂಪಾದಕ ಸುಹಾಸ್ ಪ್ರಹ್ಲಾದರಾವ್ ಮಾತನಾಡಿ, ಪತ್ರಿಕೆಯನ್ನು ಸುವರ್ಣ ಮಹೋತ್ಸವದ ಹಂತಕ್ಕೆ ಕೊಂಡೊಯ್ದ ಓದಗರು ಹಾಗೂ ಸಿಬ್ಬಂದಿ ವರ್ಗವನ್ನು ಅಭಿನಂದಿಸಿದರು. ಬದಲಾದ ಅಗತ್ಯಕ್ಕೆ ತಕ್ಕಂತೆ ಪತ್ರಿಕೆಯಲ್ಲಿ ವಿವಿಧ ಅಂಕಣಗಳನ್ನು ಪ್ರಾರಂಭಿಸಲಾಗುವುದು. ವಿಶೇಷವಾಗಿ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಲೇಖನಗಳನ್ನು ಪ್ರಕಟಿಸಲಾಗುವುದು. ಸಂಪನ್ಮೂಲ ವ್ಯಕ್ತಿಗಳಿಂದ ಬರಹಗಳನ್ನು ಪಡೆದು ಓದುಗರಿಗೆ ನೀಡಲಾಗುವುವುದು ಎಂದು ಹೇಳಿದರು.
ಸಾಹಿತಿ ಆರ್.ಚೌಡರೆಡ್ಡಿ ಹಾಸ್ಯ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಪರಂಪರೆಯಲ್ಲಿ ಹಾಸ್ಯ ಹಾಸುಹೊಕ್ಕಾಗಿದೆ. ಜಾನಪದ ಸಾಹಿತ್ಯ, ನಾಟಕ, ಸಿನೆಮಾ, ಕೇಳಿಕೆ ಮುಂತಾದ ಕ್ಷೇತ್ರಗಳಲ್ಲಿ ಹಾಸ್ಯಕ್ಕೆ ಪ್ರಧಾನ ಸ್ಥಾನ ನೀಡಲಾಗಿದೆ. ಆದರೆ ಮನುಷ್ಯ ದುಡಿಯುವ ಹಾಗೂ ಗಳಿಸುವ ಧಾವಂತದಲ್ಲಿ ನಗುವುದನ್ನೇ ಮರೆತಂತಿದೆ ಎಂದು ಹೇಳಿದರು.
ಹಾಸ್ಯ ಮನಸ್ಸನ್ನು ಪ್ರಫುಲ್ಲಗೊಳಿಸುತ್ತದೆ. ಮಾನಸಿಕ ಆರೋಗ್ಯ ವೃದ್ಧಿಗೆ ಹಾಸ್ಯ ಸಾಹಿತ್ಯ ಪೂರಕವಾಗಿ ಪರಿಣಮಿಸಿದೆ. ಹಾಸ್ಯಕ್ಕೆ ಸಂಬಂಧಿಸಿದಂತೆ ಅನುಭವ ಜನ್ಯ ಕವಿತೆಗಳು ಹೆಚ್ಚು ಪರಿಣಾಮಕಾರಿ ಎಂಬುದರಲ್ಲಿ ಎರಡು ಮಾತಿಲ್ಲ. ಇಂದು ಹಾಸ್ಯ ಸಾಹಿತಿಗಳು ವಿದೇಶಗಳಿಗೆ ಹಾರಿ ಕಾರ್ಯಕ್ರಮ ನೀಡುವ ಮಟ್ಟಕ್ಕೆ ಏರಿದ್ದಾರೆ ಎಂದು ಹೇಳಿದರು.
ಕವಿಗಳಾದ ಚಾಂಪಲ್ಲಿ ಚಂದ್ರಶೇಖರಯ್ಯ, ಎನ್.ಶಂಕರೇಗೌಡ, ಎಂ.ಅರುಣ್ ಕುಮಾರ್, ವಿ.ರಾಧಾಕೃಷ್ಣ, ಮಮತಾರಾಣಿ ಚಂದ್ರಶೇಖರ್, ಕೆ.ಎನ್.ವೇಣುಗೋಪಾಲ್, ಜಿ.ಕೆ.ನಾರಾಯಣಸ್ವಾಮಿ, ವಿ.ಆಂಜನೇಯ ಮತ್ತಿತರರು ಸ್ವರಚಿತ ಕವಿತೆಗಳನ್ನು ವಾಚಿಸಿದರು.
ಈ ಸಂದರ್ಭದಲ್ಲಿ ಅತಿಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿನಿಯರು ಹಾಗೂ ಕವಿಗಳಿಗೆ ಪುಸ್ತಕ ಕೊಡುಗೆ ನೀಡಲಾಯಿತು.
ಪ್ರಾಂಶುಪಾಲ ಪ್ರಾಣೇಶ್, ಜಿಲ್ಲಾ ವಿಶ್ವ ಹಿಂದೂ ಪರಿಷತ್ತಿನ ಉಪಾಧ್ಯಕ್ಷ ಎಂ.ವೇಮಣ್ಣ, ಕೋಲಾರ ಪತ್ರಿಕೆ ತಾಲ್ಲೂಕು ವರದಿಗಾರ ಎಸ್.ಲಕ್ಷ್ಮಣಬಾಬು, ಗ್ರಾಮೀಣ ವರದಿಗಾರ ಎಸ್.ಎಚ್.ನಾರಾಯಣ ಮೂರ್ತಿ ಇದ್ದರು