ಕೋಲಾರ ನಗರಸಭೆ ಉಪಾಧ್ಯಕ್ಷ ಎನ್.ಎನ್. ಪ್ರವೀಣ್ ವಿರುದ್ದ ಕಾಂಗ್ರೆಸ್ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಣೆ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ,ಮಾ.24- ಕೋಲಾರ ನಗರಸಭೆ ಉಪಾಧ್ಯಕ್ಷ ಎನ್.ಎನ್. ಪ್ರವೀಣ್ ವಿರುದ್ದ ಕಾಂಗ್ರೆಸ್ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ. ಏ.7ರಂದು ನಡೆಯುವ ಸಭೆಯಲ್ಲಿ ಅವಿಶ್ವಾಸ ನಿರ್ಣಯದ ವಿರುದ್ದವಾಗಿ ಮತ ಅಥವಾ ಕೈ ಎತ್ತುವುದರ ಮೂಲಕ ಮತ ಚಲಾಯಿಸಬೇಕೆಂದು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಅವರು ನಗರಸಭೆ ಎಲ್ಲಾ 8 ಮಂದಿ ಜೆಡಿಎಸ್ ಸದಸ್ಯರಿಗೆ ಮಾ.24ರಂದು ಸಚೇತನ(ವಿಪ್) ಜಾರಿ ಮಾಡಿದ್ದಾರೆ.
ಕೋಲಾರ ನಗರಸಭೆ ಉಪಾಧ್ಯಕ್ಷ ಎನ್.ಎಸ್.ಪ್ರವೀಣ್ ಅವರ ವಿರುದ್ದ ಕಾಂಗ್ರೆಸ್ ಸದಸ್ಯರ ಜೊತೆಗೂಡಿ ಬಿಜೆಪಿಯ ಓರ್ವ, ಜೆಡಿಎಸ್‍ನ ನಾಲ್ವರು ಸದಸ್ಯರು ಸಹಿ ಮಾಡಿದ್ದಾರೆ. ಕೋಲಾರ ತಾಲೂಕು ಜೆಡಿಎಸ್ ಅಧ್ಯಕ್ಷೆ ಕೆ.ಆರ್.ರಾಜರಾಜೇಶ್ವರಿ ಅವರು ನಗರಸಭೆ ಉಪಾಧ್ಯಕ್ಷ ಎನ್.ಎಸ್. ಪ್ರವೀಣ್ ವಿರುದ್ದವಾಗಿ ಸಹಿ ಮಾಡಿರುವ ನಾಲ್ವರು ಜೆಡಿಎಸ್ ಸದಸ್ಯರು ಸೇರಿ ಒಟ್ಟು 8ಮಂದಿ ಸದಸ್ಯರು ಮಾ.23ರಂದು ತಾಲೂಕು ಕಚೇರಿಗೆÀ ಬಂದು ಹೇಳಿಕೆ ನೀಡುವಂತೆ ನೋಟೀಸ್ ಜಾರಿ ಮಾಡಿದ್ದರು.
ಸಭೆಗೆ ಬಂದಿದ್ದ ಆರು ಸದಸ್ಯರು ತಮ್ಮ ತಮ್ಮ ಅಭಿಪ್ರಾಯಗಳನ್ನ ಅಧ್ಯಕ್ಷೆ ಕೆ.ಆರ್.ರಾಜೇಶ್ವರಿ ಅವರ ಮುಂದೆ ಮಂಡಿಸಿದ್ದರು. ಆದರೆ ಅಧ್ಯಕ್ಷೆ ಶ್ವೇತ ಶಬರೀಶ್, ಕೆ.ಮಂಜುನಾಥ್ ಗೈರು ಹಾಜರಾಗಿದ್ದರು. ಇದೇ ಸಂದರ್ಭದಲ್ಲಿ ವಕೀಲರಾದ ರತ್ನಮ್ಮ ಅವರು ಒಬ್ಬೊಬ್ಬ ಜೆಡಿಎಸ್ ಸದಸ್ಯರ ಹೇಳಿಕೆಯನ್ನ ದಾಖಲು ಮಾಡಿಕೊಂಡಿದ್ದರು.
ಉಪಾಧ್ಯಕ್ಷ ಎನ್.ಎಸ್.ಪ್ರವೀಣ್ ಮಾತನಾಡಿ ನಾನು ಯಾವುದೇ ರೀತಿ ಪಕ್ಷಕ್ಕೆ ಕಳಂಕವಾಗುವಂತೆ ನಡೆದುಕೊಂಡಿಲ್ಲ, ಭ್ರಷ್ಟಚಾರ ನಡೆಸಿಲ್ಲ. ಹಗರಣಗಳು ನಡೆಸಿಲ್ಲ. ನಮಗೆ ಬಹುಮತ ಇಲ್ಲದಿದ್ದರೂ ಪಕ್ಷೇತರರು ಹಾಗೂ ವಿಪಕ್ಷದವರ ಬೆಂಬಲದಿಂದ ಅಧಿಕಾರವನ್ನು ಪಡೆದಿದ್ದೇವೆ. ಪಕ್ಷಾತೀತವಾಗಿ ಹಾಗೂ ಜಾತ್ಯತೀತವಾಗಿ ಆಡಳಿತವನ್ನು ನಡೆಸಲಾಗುತ್ತಿದೆ.
ವಿನಾಕಾರಣ ಅಧ್ಯಕ್ಷೆ ಶ್ವೇತಶಬರೀಶ್ ಅವರು ಕಾಂಗ್ರೆಸ್ ಬಿ.ಎಂ.ಮುಬಾರಕ್ ಅವರೊಂದಿಗೆ ಪರೋಕ್ಷವಾಗಿ ಕೈ ಜೋಡಿಸಿ ನನ್ನ ವಿರುದ್ದ ವೈಯುಕ್ತವಾಗಿ ಹಗೆ ಸಾಧಿಸುತ್ತಿದ್ದಾರೆ. ಕಳೆದ 7 ತಿಂಗಳಿಂದಲೂ ನನ್ನನ್ನು ಅಧಿಕಾರದಿಂದ ಇಳಿಸುವ ಪ್ರಯತ್ನ ನಡೆಸಲಾಗುತ್ತಿದೆ. ಈ ಬಗ್ಗೆ ತಾವುಗಳು ಆಗಲೇ ಶಿಸ್ತು ಕ್ರಮಕ್ಕೆ ಮುಂದಾಗಿದ್ದರೆ ಇಂದು ಈ ಪರಿಸ್ಥಿತಿ ಉದ್ಬವಿಸುತ್ತಿರಲಿಲ್ಲ ಎಂದು ಸಭೆಯಲ್ಲಿ ಅತೃಪ್ತಿ ವ್ಯಕ್ತಪಡಿಸಿದ್ದರು.
ಹೆಚ್.ಡಿ.ಕುಮಾರಸ್ವಾಮಿ ಜೊತೆ ಚರ್ಚೆ
ಬುಧವಾರ ಕೋಲಾರ ತಾಲೂಕು ಜೆಡಿಎಸ್ ಕಚೇರಿಯಲ್ಲಿ ಆರು ಮಂದಿ ಜೆಡಿಎಸ್ ಸದಸ್ಯರ ಅಭಿಪ್ರಾಯ ಹಾಗೂ ಅವರು ಕೊಟ್ಟಿರುವ ಹೇಳಿಕೆಯನ್ನು ತೆಗೆದುಕೊಂಡು ಪೋಟೋ ಮತ್ತು ವಿಡಿಯೋ ಸಮೇತ ಮಾ.24ರಂದು ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನ ತಾಲೂಕು ಅಧ್ಯಕ್ಷೆ ಕೆ.ಆರ್.ರಾಜರಾಜೇಶ್ವರಿ ನೇತೃತ್ವದಲ್ಲಿ ನಗರಸಭೆ ಉಪಾಧ್ಯಕ್ಷ ಎನ್.ಎಸ್. ಪ್ರವೀಣ್ ಮತ್ತಿತರ ಸದಸ್ಯರುಗಳು ಭೇಟಿ ಮಾಡಿ ಚರ್ಚಿಸಿದರು.
ಕೋಲಾರ ನಗರಸಭೆಯಲ್ಲಿ ನಡೆಯುತ್ತಿರುವ ಬೆಳವಣಿಗೆ ಹಾಗೂ ಅಧ್ಯಕ್ಷೆ ಶ್ವೇತಶಬರೀಶ್ ಅವರು ಕಾಂಗ್ರೆಸ್ ಸದಸ್ಯರೊಂದಿಗೆ ಶಾಮೀಲಾಗಿ ಉಪಾಧ್ಯಕ್ಷರ ವಿರುದ್ದ ಪರೋಕ್ಷವಾಗಿ ಅವಿಶ್ವಾಸ ಮಂಡನೆಗೆ ಮುಂದಾಗಿರುವುದನ್ನ ಉಪಾಧ್ಯಕ್ಷ ಎನ್.ಎಸ್.ಪ್ರವೀಣ್ ಅವರು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಗಮನಕ್ಕೆ ತಂದಿದ್ದಾರೆ.
ನಂತರ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಅವರನ್ನ ಭೇಟಿ ಮಾಡಿ ಕೋಲಾರ ನಗರಸಭೆ ಉಪಾಧ್ಯಕ್ಷ ಎನ್.ಎನ್. ಪ್ರವೀಣ್ ವಿರುದ್ದ ಕಾಂಗ್ರೆಸ್ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಿರು ಬಗ್ಗೆ ಅವರ ಗಮನಕ್ಕೆ ತಂದರು. ಅಲ್ಲದೆ ಅವಿಶ್ವಾಸ ನಿರ್ಣಯಕ್ಕೆ ಜೆಡಿಎಸ್‍ನ ನಾಲ್ವರು ಸದಸ್ಯರು ಕೂಡ ಸಹಿ ಮಾಡಿದ್ದಾರೆ ಅನ್ನೋದನ್ನ ದಾಖಲೆಗಳ ಸಮೇತ ಅವರಿಗೆ ಮನವರಿಕೆ ಮಾಡಿಕೊಟ್ಟರು. ಮಾ.23ರಂದು ಕೋಲಾರ ತಾಲೂಕು ಜೆಡಿಎಸ್ ಕಚೇರಿಯಲ್ಲಿ ಜೆಡಿಎಸ್ ಸದಸ್ಯರು ಕೊಟ್ಟಿರುವ ಹೇಳಿಕೆಗಳ ದಾಖಲೆಗಳನ್ನು ರಾಜ್ಯಾಧ್ಯಕ್ಷರಿಗೆ ತಲುಪಿಸಿದರು.
ವಿಪ್ ಜಾರಿ: ಕೋಲಾರ ನಗರಸಭೆಯಲ್ಲಿ ಏ.7ರಂದು ನಡೆಯುವ ಸಭೆಯಲ್ಲಿ ಪ್ರವೀಣ್ ಎನ್.ಎಸ್. ಉಪಾಧ್ಯಕ್ಷರು ಕೋಲಾರ ನಗರಸಭೆ ಇವರ ವಿರುದ್ದ ಮಂಡಿಸಲಾಗಿರುವ ಅವಿಶ್ವಾಸ ನಿರ್ಣಯದ ವಿರುದ್ದವಾಗಿ ಮತ ಅಥವಾ ಕೈ ಎತ್ತುವುದರ ಮೂಲಕ ಮತ ಚಲಾಯಿಸಬೇಕೆಂದು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ ಅವರು ಕೋಲಾರ ನಗರಸಭೆ ಎಲ್ಲಾ 8 ಮಂದಿ ಜೆಡಿಎಸ್ ಸದಸ್ಯರಿಗೆ ಮಾ.24ರಂದು ಸಚೇತನ(ವಿಪ್) ಜಾರಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್, ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ದಿಂಬ ನಾಗರಾಜ್, ಕಾರ್ಯಾಧ್ಯಕ್ಷ ಜನಪನಹಳ್ಳಿ ಆನಂದ್, ನಗರಸಭೆ ಮಾಜಿ ಸದಸ್ಯ ರಾಕೇಶ್ ಹಾಜರಿದ್ದರು.