ಕೋಲಾರ ಲೋಕಸಭಾ ಚುನಾವಣೆ-2024 ಲೋಕಸಭಾ ಚುನಾವಣೆ: ಮತ ಎಣಿಕೆ ಸುಸೂತ್ರ: ಗೆದ್ದ ಅಭ್ಯರ್ಥಿಗೆ ಜೈಕಾರ ಎಣಿಕೆ ಕೇಂದ್ರದ ಸುತ್ತಮುತ್ತ ಜನಜಂಗುಳಿ
ಕೋಲಾರ : ನಗರದ ಸರ್ಕಾರಿ ಪ್ರಥಮ ಕಾಲೇಜಿನಲ್ಲಿ ಮಂಗಳವಾರ ಲೋಕಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಸುಸೂತ್ರವಾಗಿ ನಡೆಯಿತು.
ಕ್ಷೇತ್ರದ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗೆ ಕಾಲೇಜಿನ ಪ್ರತ್ಯೇಕ ಕೊಠಡಿಗಳಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಒಟ್ಟಾರೆ 21 ಸುತ್ತುಗಳಲ್ಲಿ ಮತ ಎಣಿಕೆ ನಡೆಯಿತು.
ಬೆಳಿಗ್ಗೆ 7 ಗಂಟೆ ಸುಮಾರಿಗೆ ಕೇಂದ್ರದ ಬಳಿ ಬೆರಳೆಣಿಕೆ ಜನರಿದ್ದರು. ಸಮಯ ಕಳೆದಂತೆ ಜನಜಂಗುಳಿ ಹೆಚ್ಚುತ್ತಾ ಹೋಯಿತು. ಮೊದಲಿಗೆ ಅಂಚೆ ಮತಗಳ ಎಣಿಕೆ ಕಾರ್ಯ ನಡೆಯಿತು. ನಂತರ ವಿದ್ಯುನ್ಮಾನ ಮತ ಯಂತ್ರಗಳಲ್ಲಿನ ಮತ ಎಣಿಕೆ ಪ್ರಕ್ರಿಯೆ ಆರಂಭಗೊಂಡಿತು.
ಮತ ಎಣಿಕೆ ಮುಂದುವರಿದಂತೆ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರ ಎದೆಯಲ್ಲಿ ಸೋಲು ಗೆಲುವಿನ ಢವ ಢವ ಶುರುವಾಯಿತು. ಪ್ರತಿ ವಿಧಾನಸಭಾ ಕ್ಷೇತ್ರದ ತಲಾ 5 ಬೂತ್ನ ಮತ ಖಾತ್ರಿ ಉಪಕರಣಗಳನ್ನು (ವಿ.ವಿ ಪ್ಯಾಟ್) ಲಾಟರಿ ಮೂಲಕ ಆಯ್ಕೆ ಮಾಡಿ ಮತ ಎಣಿಕೆ ಮಾಡಲಾಯಿತು. ನಂತರ ಇವಿಎಂ ಮತಗಳೊಂದಿಗೆ ತಾಳೆ ಹಾಕಲಾಯಿತು.
ಅಂತಿಮ ಕಣದಲ್ಲಿದ್ದ 18 ಅಭ್ಯರ್ಥಿಗಳ ಫಲಿತಾಂಶ ಸಂಜೆ 5 ಗಂಟೆ ಸುಮಾರಿಗೆ ಪ್ರಕಟವಾಯಿತು. ಗೆಲುವು ಸಾಧಿಸಿದ ಬಿಜೆಪಿ ಬೆಂಬಲಿತ ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಂ.ಮಲ್ಲೇಶ್ ಬಾಬು ಎಣಿಕೆ ಕೇಂದ್ರದಿಂದ ಹೊರ ಬಂದು ಪಕ್ಷದ ಕಾರ್ಯಕರ್ತರು, ಮುಖಂಡರು ಹಾಗೂ ಬೆಂಬಲಿಗರೊಂದಿಗೆ ಸಂತಸ ಹಂಚಿಕೊಂಡರು.
ಪಕ್ಷಗಳ ಕಾರ್ಯಕರ್ತರು ಮುನಿಸ್ವಾಮಿ ಹಾಗೂ ಮಲ್ಲೇಶ್ ಬಾಬುರನ್ನು ಅವರನ್ನು ಹೆಗಲ ಮೇಲೆ ಹೊತ್ತು ಸಾಗಿದರು. ಬೆಂಬಲಿಗರು ಅಭ್ಯರ್ಥಿಗಳಿಗೆ ಹೂವಿನ ಹಾರ ಹಾಕಿ ಜೈಕಾರ ಕೂಗಿದರು. ಜತೆಗೆ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಸಂಚಾರ ನಿಬರ್ಂಧ: ಮತ ಎಣಿಕೆ ಹಿನ್ನೆಲೆಯಲ್ಲಿ ಕಾಲೇಜಿನ ಅಕ್ಕಪಕ್ಕದ ಬಂಗಾರಪೇಟೆ ರಸ್ತೆ, ಅಂಚೆ ಕಚೇರಿ ರಸ್ತೆ, ರಾಮಕೃಷ್ಣ ಉಡುಪ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿ ಸಂಜೆವರೆಗೆ ವಾಹನ ಸಂಚಾರ ನಿಬರ್ಂಧಿಸಲಾಗಿತ್ತು, ಅಭ್ಯರ್ಥಿಗಳ ಬೆಂಬಲಿಗರು, ಏಜೆಂಟರು ಹಾಗೂ ಪಕ್ಷಗಳ ಕಾರ್ಯಕರ್ತರು ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್ಟಿಒ) ಕಚೇರಿ ಆವರಣ, ಸಿ.ಬೈರೇಗೌಡ ನಗರ, ಜಿಲ್ಲಾ ಪಂಚಾಯಿತಿ ಮುಂಭಾಗದ ಲಾರಿ ನಿಲ್ದಾಣ, ಮಣಿಘಟ್ಟ ರಸ್ತೆ, ನಚಿಕೇತನ ವಿದ್ಯಾರ್ಥಿನಿಲಯದ ಆವರಣ, ಕೋಲಾರಮ್ಮ ದೇವಸ್ಥಾನದ ಮುಂಭಾಗ, ಇಟಿಸಿಎಂ ವೃತ್ತ, ಕೆಇಬಿ ಕಚೇರಿ ಮುಂದೆ, ಮೆಥೋಡಿಸ್ಟ್ ಶಾಲೆ ಬಳಿ ತಮ್ಮ ವಾಹನಗಳನ್ನು ನಿಲ್ಲಿಸಿ ಕೇಂದ್ರಕ್ಕೆ ನಡೆದು ಬಂದರು.
ಗುರುತಿನ ಚೀಟಿ ಹೊಂದಿದ್ದವರಿಗೆ ಮಾತ್ರ ಕೇಂದ್ರಕ್ಕೆ ಪ್ರವೇಶ ನೀಡಲಾಯಿತು. ಪೊಲೀಸರು ಪ್ರತಿ ವ್ಯಕ್ತಿಯನ್ನು ಪ್ರವೇಶ ದ್ವಾರದಲ್ಲಿ ತಪಾಸಣೆ ಮಾಡಿದ ನಂತರವಷ್ಟೇ ಕೇಂದ್ರದೊಳಗೆ ಹೋಗಲು ಅವಕಾಶ ನೀಡಿದರು.
ಕೇಂದ್ರದಿಂದ ನಿರ್ಗಮನ: 16ನೇ ಸುತ್ತಿನ ಮತ ಎಣಿಕೆ ಮುಗಿಯುತ್ತಿದ್ದಂತೆ ಸೋಲಿನ ಸುಳಿವರಿತ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಅವರ ಬೆಂಬಲಿಗರು ಮತ ಎಣಿಕೆ ಕೇಂದ್ರದಿಂದ ನಿರ್ಗಮಿಸಿದರು. ಇತರ ಪಕ್ಷಗಳ ಹಾಗೂ ಪಕ್ಷೇತರ ಅಭ್ಯರ್ಥಿಗಳು ಸಹ ನಿರಾಶೆಯಿಂದ ಮತ ಎಣಿಕೆ ಮಧ್ಯೆಯೇ ಕೇಂದ್ರದಿಂದ ನಿರ್ಗಮಿಸಿದರು.
ಮತ ಎಣಿಕೆಗೆ ನಿಯೋಜನೆಗೊಂಡಿದ್ದ ಸಿಬ್ಬಂದಿ ಹಾಗೂ ಭದ್ರತಾ ಕಾರ್ಯದಲ್ಲಿದ್ದ ಪೊಲೀಸರಿಗೆ ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು. ಕೇಂದ್ರದ ಸುತ್ತಮುತ್ತ ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಪೊಲೀಸರು ಹಾಗೂ ಗೃಹರಕ್ಷಕದಳ ಸಿಬ್ಬಂದಿ
ಸೇರಿದಂತೆ 414 ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು.
ಗಳಿಸಿದ ಮತಗಳ ವಿವರ : ಎಂ.ಮಲ್ಲೇಶ ಬಾಬು ಜನತಾದಳ (ಜಾತ್ಯಾತೀತ) ಅಭ್ಯರ್ಥಿಯು-691481 ಮತಗಳನ್ನು ಗಳಿಸಿ ಸಮೀಪದ ಅಭ್ಯರ್ಥಿ ಕೆ.ವಿ.ಗೌತಮ್ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್-620093 ರವರಿಗಿಂತ 71388 ಮತಗಳ ಅಂತರದಲ್ಲಿ ಜಯಶಾಲಿಯಾಗಿರುತ್ತಾರೆ.
ಉಳಿದಂತೆ ಕಣದಲ್ಲಿರುವ ಅಭ್ಯರ್ಥಿಗಳಾದ ಸುರೇಶ್. ಎಸ್.ಬಿ ಬಹುಜನ ಸಮಾಜ ಪಕ್ಷ-4732, ಡಿ. ಗೋಪಾಲಕೃಷ್ಣ ಸೊಷಿಯಲಿಸ್ಟ್ ಪಾರ್ಟಿ (ಐ)-1669, ತಿಮ್ಮರಾಯಪ್ಪ ರಿಪಬ್ಲಿಕ್ ಪಾರ್ಟಿ ಆಪ್ ಇಂಡಿಯಾ- 864(ಕರ್ನಾಟಕ ಪಕ್ಷ), ದೇವರಾಜ ಎ. ಉತ್ತಮ ಪ್ರಜಾಕೀಯ ಪಾರ್ಟಿ-1354, ಕೆ.ಆರ್. ದೇವರಾಜ ದಿಲ್ಲಿ ಜನತಾ ಪಾರ್ಟಿ-4597, ಮಹೇಶ್. ಎ.ವಿ ಕರ್ನಾಟಕ ರಾಷ್ಟ್ರ ಸಮಿತಿ-1065, ಎಂ.ಸಿ ಹಳ್ಳಿ ವೇಣು ವಿಡುತ ಚಿರೈತಗಲ್ ಕಚ್ಚಿ-521, ಕೃಷ್ಣಯ್ಯ ಎನ್. ಪಕ್ಷೇತರರು-443, ಎಸ್.ಎನ್ ನಾರಾಯಣಸ್ವಾಮಿ.ವಿ. ಪಕ್ಷೇತರರು-1985, ಎಂ.ಎಸ್.ಬದರಿನಾರಾಯಣ ಪಕ್ಷೇತರರು-1116, ಎಂ.ಮುನಿಗಂಗಪ್ಪ ಪಕ್ಷೇತರರು-604, ಆರ್.ರಾಜೇಂದ್ರ ಪಕ್ಷೇತರರು-751, ಆರ್. ರಂಜಿತ್ ಕುಮಾರ್ ಪಕ್ಷೇತರರು-2118, ಡಾ. ಎಂ.ವೆಂಕಟಸ್ವಾಮಿ ಪಕ್ಷೇತರರು-3354, ಹೋಳೂರು ಶ್ರೀನಿವಾಸ ಪಕ್ಷೇತರರು-6163, ಸುಮನ್ ಹೆಚ್.ಎನ್ ಪಕ್ಷೇತರರು-6487, ಮತಗಳನ್ನು
ಜಿಲ್ಲಾದ್ಯಾಂತ-5831 ಮತಗಳು ಚಲಾವಣೆಯಾಗಿದೆ. 1206 ಮತಗಳು ಪಡೆದಿರುತ್ತಾರೆ. ನೋಟಾ ಅಡಿ ಜಿಲ್ಲಾದ್ಯಾಂತ-5831 ತಿರಸ್ಕೃತವಾಗಿವೆ. 1349397 ಮತಗಳು ಮಾನ್ಯವಾಗಿವೆ.