ಕೋಲಾರ,ಫೆ.19: 20 ವರ್ಷಗಳ ಬೇಡಿಕೆಯಾದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯ ಘೋಷಿಸಲು ಕೋಲಾರ ಪತ್ರಕರ್ತರ ಸಂಘವೇ ಮೂಲ ಕಾರಣ ಎಂದು ಮುಖ್ಯಮಂತ್ರಿಗಳ ಮಾದ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.
ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರಿಗೆ ಹಮ್ಮಿಕೊಂಡಿದ್ದ ಧನ್ಯವಾದ ಸಮರ್ಪಣಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕಳೆದ ವರ್ಷ ಜುಲೈ 1 ರಂದು ನಡೆದ ಪತ್ರಿಕಾ ದಿನಾಚರಣೆಯಲ್ಲಿ ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ನೀಡುವ ಬಗ್ಗೆ ಕ್ರಮ ಕೈಗೊಳ್ಳಲು ಪ್ರಯತ್ನಿಸುವುದಾಗಿ ಘೋಷಿಸಿದ್ದು, ಅದರಂತೆ ಇಂದು ಬಜೆಟ್ ನಲ್ಲಿ ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಘೋಷಿಸಿರುವುದು ಉತ್ತಮ ಬೆಳವಣಿಗೆ ಎಂದರು.
ಯಾವುದೆ ಕೆಲಸ ಕಾರ್ಯಗಳು ಯಶಸ್ವಿಯಾಗಿದೆ ಎಂದರೆ ಅದು ಕೋಲಾರದಿಂದ ಪ್ರಾರಂಭವಾಗುವುದು ಎಂದು ನೆನಸಪಿಸಿದ ಅವರು, ವೃತ್ತಿಯಲ್ಲಿ ಉನ್ನತ ಸ್ಥಾನವನ್ನು ಪಡೆದಾಗ ಹಿಂದಿನ ಶ್ರಮದ ಜೀವನವನ್ನು ನೆನಪಿಸಿಕೊಂಡು ಮುಂದುವರೆದಾಗ ಮಾತ್ರ ಸಮಾಜದಲ್ಲಿ ಗೌರವ ಸ್ಥಾನ ಮಾನಗಳು ಪಡೆಯಲು ಸಾಧ್ಯ ಎಂದರು.
ಕಳೆದ ೨2013 ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರನಾಗಿ ಸೇರ್ಪಡೆಯಾದ ದಿನಾದಿಂದಲೂ ಅವರೊಂದಿಗೆ ಮುಂದುವರೆದು ಬಂದಿರುವೆ, ನಾನು ಈ ವೃತ್ತಿಗೆ ಆಕಸ್ಮಿಕವಾಗಿ ಬಂದವನು. ಪ್ರಾರಂಭದಲ್ಲಿ ಸೈಕಲ್ನಲ್ಲಿ ಪತ್ರಿಕೆ ವಿತರಕನಾಗಿ ಸೇರ್ಪಡೆಯಾಗಿ ಹಲವು ಜಿಲ್ಲಾ ಮತ್ತು ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ವರದಿಗಾರನಾಗಿ ಕಾರ್ಯನಿರ್ವಹಿಸಿದೆ. ಈ ಸಂದಭದಲ್ಲಿ ನನಗೆ ಹಿರಿಯ ಪತ್ರಕರ್ತರಾದ ಬಿ.ವಿ. ಗೋಪಿನಾಥ್ ಅವರು ಗುರುಗಳಾಗಿ, ಕೋಲಾರ ಶಕ್ತಿ ಮಲ್ಲೇಶ್ ಸ್ನೇಹಿತರಾಗಿ ಮತ್ತು ವಾಸುದೇವಹೊಳ್ಳ ಅವರುಗಳು ನನಗೆ ಪತ್ರಿಕಾ ರಂಗದಲ್ಲಿ ಮಾರ್ಗದರ್ಶನ ನೀಡಿ ಬೆಳೆಸಿರುವುದು ನನ್ನ ಜೀವನದಲ್ಲಿ ಎಂದೆಂದಿಗೂ ಅವಿಸ್ಮರಣಿಯ ಎಂದರು.
ನಾನು ಈ ಸ್ಥಾನ ಪಡೆಯಬೇಕಾದರೆ ಒಂದೊಂದೆ ಮೆಟ್ಟಿಲು ಹತ್ತಿ ಬಂದಿರುವೆ, ಕೋಲಾರದಿಂದ ಬೆಂಗಳೂರು ಸೇರಿದ ಮೇಲೂ ಹಲವು ರಾಜ್ಯ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನನ್ನು ಗುರುತಿಸಿ ಇಂದು ಉನ್ನತ ಸ್ಥಾನ ಮಾನವನ್ನು ನೀಡಿದ್ದಾರೆ ಎಂದು ನೆನಪಿಸಿದರು.
ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ದೊಡ್ಡ ಕೊಡುಗೆಯೇನೂ ಅಲ್ಲ ಪತ್ರಕರ್ತರಿಗೆ ಸಂದ ಗೌರವ ಅಗಿದೆ. ಇದನ್ನು ಬಜೆಟ್ನಲ್ಲಿ ಸೇರ್ಪಡೆ ಮಾಡಲು ಮುಖ್ಯ ಮಂತ್ರಿಗಳ ಗಮನ ಸೆಳೆದ ಸಂದರ್ಭವನ್ನು ಮೆಲುಕು ಹಾಕಿದ ಅವರು ಬಸ್ ಪಾಸ್ಗೆ 10 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಬಸ್ ಪಾಸ್ಗಳು ಆರ್ಹರಿಗೆ ತಲುಪಿಸಿ ಸದ್ಬಳಿಸಿಕೊಳ್ಳುವಂತೆ ಮಾಡುವುದು ನಮ್ಮಗಳ ಜವಾಬ್ದಾರಿಯಾಗಿದೆ ಎಂದರು.
ಪತ್ರಕರ್ತರಿಗೆ ಆರೋಗ್ಯ ಕಾಪಾಡಿ ಕೊಳ್ಳುವುದು ಮುಖ್ಯವಾಗಿದೆ. ವೃತ್ತಿಯ ಒತ್ತಡದಲ್ಲಿ ಕುಟುಂಬದವರನ್ನು ಕಡೆಗಣಿಸಬೇಡಿ ಕೊರೋನ ಸಂದರ್ಭದಲ್ಲಿ ಬಹಳಷ್ಟು ಪತ್ರಕರ್ತರು ಸಾಕಷ್ಟು ಕಷ್ಟಗಳನ್ನು ಅನುಭವಿಸಿರುವುದು ಗಮನಿಸಿದ್ದೇನೆ. ಪತ್ರಿಕಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ 60 ವರ್ಷ ಮೇಲ್ಪಟ್ಟ ಹಿರಿಯರಿಗೆ ಆಗ ಸಿದ್ದರಾಮಯ್ಯನವರ ಆಡಳಿತದಲ್ಲಿಯೇ 3 ಸಾವಿರ ಪಿಂಚಣಿ ಮಾಡಿದ್ದನ್ನು 5 ಸಾವಿರ ರೂ ಏರಿಕೆ ಮಾಡಿದ್ದರೂ ಈಗಾ ಪುನಾಃ10 ಸಾವಿರದಿಂದ 12 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ಅದರೆ ಈ ಹಣದಿಂದ ಕುಟುಂಬ ನಿರ್ವಾಹಣೆ ಇಂದು ಸಾಧ್ಯವಿಲ್ಲ ಕನಿಷ್ಟ 25 ಸಾವಿರ ರೂಗಳವರೆಗೆ ಏರಿಕೆ ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ತಿಳಿಸಿದರು.
ಈಗಾಗಲೇ ಗ್ರಾಮೀಣ ಭಾಗದ ಸಣ್ಣ ಪತ್ರಿಕೆಗಳಿಗೆ ಜಾಹಿರಾತು ದರವನ್ನು ಶೇ 12 ರಷ್ಟು ಏರಿಕೆ ಮಾಡಿ ಪರಿಷ್ಮರಿಸಲಾಗಿದೆ. ಜೂತೆಗೆ ಡಿಜಿಟಲ್ ಮೀಡಿಯಗೂ ಜಾಹಿರಾತುಗಳನ್ನು ವಿಸ್ತರಿಸುವಂತೆ ವಾರ್ತ ಇಲಾಖೆಗೆ ಸೂಚಿಸಲಾಗಿದೆ. ಬ್ರಾಹ್ಮಣ ಸಮುದಾಯದ ಸಂಪಾದಕರ ಪತ್ರಿಕೆಗಳಿಗೂ ಜಾಹಿರಾತುಗಳನ್ನು ನೀಡಲು ಮೀಸಲಾತಿ ನಿಗಧಿಪಡಿಸಿದೆ ಎಂದು ಹೇಳಿದರು.
ಪತ್ರಕರ್ತರಿಗೆ ನಿವೇಶನ ಸೌಲಭ್ಯವನ್ನು ಕಲ್ಪಿಸಲು ನಗರ ಹೊರವಲಯದಲ್ಲಿ ಸರ್ಕಾರಿ ಜಮೀನು ಗುರುತಿಸಿದಲ್ಲಿ ಕಡಿಮೆ ದರದಲ್ಲಿ ಸರ್ಕಾರದಿಂದ ಪಡೆದು ಹಂಚಿಕೆ ಮಾಡಬಹುದಾಗಿದೆ. ಶೇ 80ರಷ್ಟು ಮಂದಿಗೆ ಸ್ವಂತ ಮನೆಗಳು ಇಲ್ಲ. ಅದರೆ ಸರ್ಕಾರದಿಂದ ಮನೆಗಳನ್ನು ನಿರ್ಮಿಸಿ ಹಂಚಿಕೆ ಕಷ್ಟ ಸಾಧ್ಯ ಅದರೆ ನಿವೇಶಗಳನ್ನು ಕಡಿಮೆ ದರದಲ್ಲಿ ಸರ್ಕಾರದಿಂದ ಮಂಜೂರಾತಿ ಮಾಡಿಸಲು ಪ್ರಯತ್ನಿಸಬಹುದಾಗಿದೆ ಎಂದು ಆಶ್ವಾಸನೆ ನೀಡಿದರು.
ರಾಜ್ಯ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ಮಾತನಾಡಿ, ರಾಜ್ಯ ಸಮ್ಮೇಳನದಲ್ಲಿ ಕೋಲಾರ ಪತ್ರಕರ್ತರ ಸಂಘಕ್ಕೆ ಅತ್ಯತ್ತಮ ಪತ್ರಕರ್ತರ ಸಂಘ ಎಂಬ ಗೌರವಕ್ಕೆ ಪಾತ್ರವಾಗಿರುವುದು ಘೋಷಿಸಲಾಯಿತು, ಕೆ.ವಿ. ಪ್ರಭಾಕರ್ ಅವರಿಗೆ ತವರಿನಲ್ಲಿ ಸನ್ಮಾನಿಸುತ್ತಿರುವುದು ಅಭಿನಂದನೀಯ ಸಂಗತಿಯಾಗಿದೆ ಎಂದರು.
ಈ ಹಿಂದೆ ಪಿ.ಜಿ.ಆರ್. ಸಿಂಧ್ಯಾ ಅವರು ಸಾರಿಗೆ ಸಚಿವರಾಗಿದ್ದ ಕಾಲದಿಂದಲೂ ಗ್ರಾಮೀಣ ಪತ್ರಕರ್ತರಿಗೆ ಬಸ್ಪಾಸ್ಗೆ ಒತ್ತಡಗಳಿಗೆ ಕೇವಲ ಭರವಸೆಗಳು ಸಿಗುತ್ತಿತ್ತು, ಕೆ.ವಿ. ಪ್ರಭಾಕರ್ ಅವರು ಮುಖ್ಯ ಮಂತ್ರಿಗಳ ಮಾಧ್ಯಮ ಕಾರ್ಯದರ್ಶಿಯಾದ ನಂತರ ಪತ್ರಕರ್ತರಿಗೆ ಹಲವಾರು ಸೌಲಭ್ಯಗಳು ಸಿಗುವಂತಾಗಿದೆ. ಪತ್ರಕರ್ತರು ಸೌಲಭ್ಯಗಳನ್ನು ಪಡೆಯುವಲ್ಲಿ ವಾರ್ತಾಇಲಾಖೆಯ ನಿಯಮಗಳು ಕಠಿಣವಾಗಿರುವುದನ್ನು ಸರಳೀಕರಣಗೊಳಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಶಿವನಂದ ತಗಡೂರು ಆಯ್ಕೆಯಾದ ನಂತರ ಪತ್ರಕರ್ತರ ಸಮಸ್ಯೆಗಳನ್ನು ಕೆ.ವಿ.ಪ್ರಭಾಕರ ಅವರ ಗಮನಕ್ಕೆ ತಂದು ಸರ್ಕಾರದಿಂದ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಿದ್ದಾರೆ. ಪತ್ರಕರ್ತರ ಸಂಘದಲ್ಲಿನ ಉಳಿಕೆ ಹಣ ಮತ್ತು ಸರ್ಕಾರದಿಂದ ಅನುದಾನಗಳನ್ನು ಬಿಡುಗಡೆ ಮಾಡಿಸಿ ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ಸ್ಪಂದಿಸಲಾಗುತ್ತಿದೆ ಎಂದು ವಿವರಿಸಿದರು.
ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ರಾಜ್ಯದ ಯಾವೂದೇ ಶುಭ ಕಾರ್ಯಗಳಿಗೆ ಹಾಗೂ ಚಳುವಳಿಗಳಿಗೆ ಕೋಲಾರ ಮೂಲ ಅಗಿದೆ. ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ 20 ವರ್ಷದ ಬೇಡಿಕೆಯಾಗಿದ್ದನ್ನು ಕೆ.ವಿ.ಪ್ರಭಾಕರ್ ಈಡೇರಿಸುವಲ್ಲಿ ಸರ್ಕಾರ ಮಟ್ಟದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಬಸ್ ಪಾಸ್ ಮಂಜೂರಾತಿಯಿಂದ ರಾಜ್ಯದಲ್ಲಿ ಸುಮಾರು 10 ಸಾವಿರ ಪತ್ರಕರ್ತರಿಗೆ ಅನುವುಂಟಾಗಲಿದೆ ಎಂದರು.
ಇದೇ ರೀತಿ ಪತ್ರಿಕಾ ಕ್ಷೇತ್ರದಿಂದ ವಿಧಾನ ಪರಿಷತ್ನಲ್ಲಿ ಒಂದು ಸ್ಥಾನ ನೀಡಬೇಕೆಂಬುವುದು ಸಹ ಬೇಡಿಕೆಯಾಗಿದೆ ಅದಕ್ಕೆ ಸಮ್ಮತಿ ದೊರೆತರೆ ಆ ಸ್ಥಾನವನ್ನು ಕೆ.ವಿ.ಪ್ರಬಾಕರ್ ಅವರಿಗೆ ನೀಡಿದರೆ ಪತ್ರಿಕಾ ಕ್ಷೇತ್ರ ಸುಧಾರಣೆ ಕಾಣಬಹುದು ಎಂದು ಅಭಿಪ್ರಾಯಪಟ್ಟರು.
ಕೆ.ವಿ.ಪ್ರಭಾಕರ್ ಅವರು ಪತ್ರಿಕಾ ರಂಗದಲ್ಲಿ ಬೇರು ಮಟ್ಟದಿಂದ ಬೆಳೆದು ಬಂದವರಾಗಿದ್ದಾರೆ. ಸಿದ್ದರಾಮಯ್ಯ ಅವರೊಂದಿಗೆ ಅಧಿಕಾರದಲ್ಲಿ ಇಲ್ಲದ ಸಂದರ್ಭದಿಂದಲೂ ಉತ್ತಮವಾದ ವಿಶ್ವಾಸವನ್ನು ಉಳಿಸಿಕೊಂಡು ಅವಿನಾಭಾವ ಸಂಬಂಧವನ್ನು ಹೊಂದಿದವರಾಗಿದ್ದಾರೆ. ಕೋಲಾರ ಪತ್ರಕರ್ತರ ಸಂಘದ ಕ್ಷೆಮನಿಧಿಗೆ ಪ್ರಾರಂಭದಲ್ಲಿ 25 ಲಕ್ಷ ರೂಗಳನ್ನು ಮಂಜೂರು ಮಾಡಿಸುವ ಮೂಲಕ ನುಡಿದಂತೆ ನಡೆದುಕೊಂಡಿರುವುದು ಅಭಿನಂದನೀಯ. ತವರಿನ ಕ್ಷೇತ್ರದ ಮೇಲೆ ಅಪಾರವಾದ ಪ್ರೀತಿಯನ್ನು ಹೊಂದಿದ್ದು ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಪತ್ರಿಕಾ ವೃತ್ತಿಯಲ್ಲಿನ ಸಂಕಷ್ಟಗಳನ್ನು ಅರಿತವರಾಗಿದ್ದು ನಡೆದು ಬಂದ ದಾರಿಯನ್ನು ಅವರು ಮರೆತಿಲ್ಲ ಎಂಬುವುದಕ್ಕೆ ನಿದರ್ಶನವಾಗಿದ್ದಾರೆ ಎಂದು ಶುಭ ಹಾರೈಕೆಯ ನುಡಿಗಳಾಡಿದರು.
ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಎಸ್.ಗಣೇಶ್ ಮಾತನಾಡಿ, ಕೆ.ವಿ.ಪ್ರಭಾಕರ್ ಕೋಲಾರದ ಚಿನ್ನವಲ್ಲ ಅಪರಂಜಿಯಾಗಿದ್ದಾರೆ. ಕೆ.ವಿ. ಪ್ರಭಾಕರ್ ಅವರು ಮಾಧ್ಯಮ ಸಲಹೆಗಾರರಾಗಿ ಸಚಿವ ಸ್ಥಾನ ಮಾನ ಸಿಕ್ಕಿರುವುದು ಕೋಲಾರಕ್ಕೆ ಸಂದ ಗೌರವವಾಗಿದೆ. ಅವರು ತಮ್ಮ ಹಳೆಯ ನೆನಪುಗಳನ್ನು ಜೀವನದಲ್ಲಿ ಮರೆಯದೆ ಸ್ಪಂದಿಸುತ್ತಿರುವುದು ಅಭಿನಂದನೀಯ ಎಂದು ಶ್ಲಾಘಿಸಿದರು.
ರಾಜ್ಯ ಕಾರ್ಯಕಾರಿಣಿ ಸದಸ್ಯ ವಿ.ಮುನಿರಾಜು ಮಾತನಾಡಿ, ಹೊರ ರಾಜ್ಯಗಳಲ್ಲಿ ಪತ್ರಕರ್ತರಿಗೆ ವಸತಿ ಸೌಲಭ್ಯಗಳನ್ನು ನೀಡಲಾಗಿದೆ ಅದೇ ಮಾದರಿಯಲ್ಲಿ ನಮ್ಮ ರಾಜ್ಯದಲ್ಲೂ ಪತ್ರಕರ್ತರಿಗೆ ಸರ್ಕಾರದಿಂದ ವಸತಿ ಸೌಲಭ್ಯ ಕಲ್ಪಿಸಲು ಸರ್ಕಾರದ ಗಮನ ಸೆಳೆಯಬೇಕೆಂದು ಮನವಿ ಮಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಧ್ವನಿಯ ಜೂತೆಗೆ ಪತ್ರಿಕಾರಂಗದ ಪರವಾಗಿ ಕೆ.ವಿ.ಪ್ರಭಾಕರ್ ಧ್ವನಿ ಎತ್ತಲು ವಿಧಾನ ಪರಿಷತ್ಗೆ ಹೋಗುವಂತೆ ಮಾಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯ ಸಂಘದ ಖಜಾಂಚಿ ಎಂ.ವಾಸುದೇವಹೊಳ್ಳ, ಹಿರಿಯ ಪತ್ರಕರ್ತ ಪಾ.ಶ್ರೀ.ಅನಂತರಾಮ್, ರಾಜ್ಯ ಕಾರ್ಯಕಾರಿಣಿ ಸದಸ್ಯ ದೇವರಾಜ್, ಟೇಕಲ್ ಲಕ್ಷ್ಮೀಶ್ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರನ್ನು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಇದರ ಜೂತೆಗೆ ಪ್ರಭಾಕರ್ ಅಭಿಮಾನಿ ಬಳಗದವರಿಂದ ಹಾಗೂ ಮಾಲೂರು, ಕೆ.ಜಿ.ಎಫ್ ಪತ್ರಕರ್ತ ಸಂಘದಿಂದ ಸನ್ಮಾನಿಸಲಾಯಿತು.
ಜಿಲ್ಲಾ ಪತ್ರಕರ್ತರ ಸಂಘದ ಖಜಾಂಚಿ ಸುರೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು, ಸಿ.ವಿ.ನಾಗರಾಜ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ನಗರ ಹಾಗೂ ವಿವಿಧ ತಾಲೂಕುಗಳ ಎಲ್ಲಾ ಪತ್ರಿಕಾ ಮಿತ್ರರು ಉಪಸ್ಥಿತರಿದ್ದರು.