![](https://jananudi.com/wp-content/uploads/2025/02/Screenshot-946-1.png)
![](https://jananudi.com/wp-content/uploads/2025/02/Hrudhaya-news-1.jpg)
ಕೋಲಾರ:- ಹೃದಯವಂತರಿಗೆ ಮಾತ್ರ ಹೆಣ್ಣು ಮಕ್ಕಳ ಸಂಕಷ್ಟ-ಸಂವೇದನೆಗಳು ಅರ್ಥವಾಗುತ್ತದೆ ಎಂದು ಅಬಕಾರಿ ನಿರೀಕ್ಷಕಿ ಸುಮ ಅವರು ತಿಳಿಸಿದರು.
ಅವರು ಬೆಂಗಳೂರಿನ ನೀಡುವ ಹೃದಯ ಪೌಂಡೇಶನ್ ವತಿಯಿಂದ ತಾಲ್ಲೂಕಿನ ಅಮ್ಮನಲ್ಲೂರು ಗ್ರಾಮದ ಅನುದಾನಿತ ಚೌಡೇಶ್ವರಿ ಪ್ರೌಢಶಾಲೆಯ ನವೀಕೃತ ಕೊಠಡಿಯಲ್ಲಿ ಸಕಲ ಸೌಕರ್ಯಗಳೊಂದಿಗೆ ಸುಸಜ್ಜಿತವಾಗಿ ನಿರ್ಮಿಸಿರುವ ಪಿಂಕ್ರೂಂ ಸಮರ್ಪಣೆ, ಹೆಣ್ಣು ಮಕ್ಕಳು ಮುಟ್ಟಿನ ಸಂದರ್ಭದಲ್ಲಿ ಅದರ ನಿರ್ವಹಣೆ, ವಿಶ್ರಾಂತಿ ಹಾಸಿಗೆಗಳು, ಪ್ಯಾಡ್ಬರ್ನಿಂಗ್ ಯಂತ್ರ ಹಾಗೂ ದೇಸಿ ಮತ್ತು ವಿದೇಶಿ ಶೈಲಿಯ ಶೌಚಾಲಯ ಸೌಕರ್ಯ ಸ್ಥಳ ಹಾಗೂ 600 ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ಗಳ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸುವ ಮೂಲಕ ಅವರು ಮಾತನಾಡುತ್ತಿದ್ದರು. ಹೆಣ್ಣು ಮಕ್ಕಳಿಗೆ ವೈಯಕ್ತಿಕ ಸ್ವಚ್ಚತೆ ಬಹು ಮುಖ್ಯ. ಅದರಲ್ಲೂ ಮುಟ್ಟಿನ ಸಂದರ್ಭದಲ್ಲಿ ಅನುಭವಿಸುವ ಯಾತನೆ, ಮುಜುಗರ ಇವುಗಳನ್ನು ಅನುಭವಿಸಿದರಿಗೆ ಗೊತ್ತು. ಗ್ರಾಮೀಣ ಭಾಗದ ಪ್ರೌಢಶಾಲೆಗಳಲ್ಲಿ ನಗರ ಪ್ರದೇಶದ ವಿದ್ಯಾವಂತ ಹಾಗೂ ತಿಳುವಳಿಕೆ ಇರುವ ಹೆಣ್ಣುಮಕ್ಕಳು ಅನೇಕ ಬಾರಿ ಶಾಲಾ ಕಾಲೇಜು, ಉದ್ಯೋಗ, ಪ್ರಯಾಣ ಹಾಗೂ ಇತರೆ ಕೆಲಸಗಳ ನಿಮಿತ್ತ ಹೊರಗೆ ಹೋದಾಗ ಮುಟ್ಟಿನ ಸಂಕಷ್ಟ ಎದುರಿಸುತ್ತಾರೆ. ಅಂತಹ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಪ್ರೌಢಾವಸ್ಥೆಯ ಹೆಣ್ಣು ಮಕ್ಕಳು ಸಂಕೋಚದ ಸ್ವಭಾವದವರಾಗಿರುತ್ತಾರೆ. ಮನೆಯ ಅರ್ಥಿಕ ಸಂಕಷ್ಟದ ಕಾರಣ, ಸುರಕ್ಷತೆ ಹಾಗೂ ಸ್ವಚ್ಚತೆ ಮತ್ತು ಮುಟ್ಟಿನ ಪ್ಯಾಡ್ಗಳನ್ನು ಬಳಸುವುದು ತೀರಾ ವಿರಳ ಎಂದ ಅವರು, ಇಂತಹ ಸೌಕರ್ಯಕ್ಕೆ ಅವಕಾಶ ಮಾಡಿಕೊಟ್ಟಿರುವ ನೀಡುವ ಹೃದಯ ಪೌಂಡೇಶನ್ ನ ಮುಖ್ಯಸ್ಥ ಆಂಟೋನಿಸಜಿತ್ ಅವರ ಹೃದಯ ವೈಶಾಲತೆ ದೊಡ್ಡತನದ್ದು ಎಂದರು.
ಕಾರ್ಯಕ್ರಮ ಸಂಘಟಕ ನೀಡುವ ಹೃದಯ ಪೌಂಡೇಶನ್ನ ಮುಖ್ಯಸ್ಥ ಆಂಟೋನಿ ಸಜಿತ್ ಮಾತನಾಡಿ, ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಹೆಣ್ಣು ಮಕ್ಕಳ ಪಾತ್ರ ಮಹತ್ವದ್ದು. ಅದಕ್ಕಾಗಿ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗಿದ್ದು ನಮ್ಮ ನಿಮ್ಮೆಲ್ಲರ ಮೊದಲ ಆದ್ಯತೆಯಾಗಬೇಕು ಎಂದ ಅವರು, ಇದರಲ್ಲಿ ತನ್ನದೇನೂ ವಿಶೇಷ ಪಾತ್ರವಿಲ್ಲ. ದೇವರ ಇಚ್ಚೆ, ಕುಟುಂಬದ ಸಹಕಾರ, ಸಹಾಯ ಮಾಡುವ ಸಮಾನ ಮನಸ್ಕ ಬೆಂಬಲಿಗರ ಸಹಕಾರ ಹಾಗೂ ಸ್ಥಳೀಯರ ಅಭಿಲಾಷೆಯಂತೆ ತನ್ನ ಅಳಿಲು ಸೇವೆಯನ್ನು ಮುಂದುವರೆಸಿಕೊಂಡು ಹೋಗುತ್ತಿರುವುದಾಗಿ ಹೇಳಿ, ನೀಡುವ ಹೃದಯದ ಮನಸ್ಸು ನಮ್ಮದು. ಅದನ್ನು ಪಡೆಯುವ ಮನಸ್ಸು ನಿಮ್ಮದಾಗಬೇಕು. ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಬೇಕು. ಮುಂದೆ ನೀವೇನಾಬೇಕು ಎಂಬುವುದನ್ನು ಇಂದೇ ನಿರ್ಧರಿಸಿ. ಅದರ ಗುರಿ ತಲುಪುವ ವರೆಗೆ ಮುಂದಿಟ್ಟ ಹೆಜ್ಜೆ ಹಿಂದಿಡಬೇಡಿ. ಈ ಶಾಲೆಗೆ ಅಗತ್ಯವಿರುವ ಕಂಪ್ಯೂಟರ್ ಲ್ಯಾಬ್ ಮಾಡಿಸಿಕೊಡುವೆ ಹಾಗೂ ಎಸ್.ಎಸ್.ಎಲ್.ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ಅಚ್ಚರಿಯ ಬಹುಮಾನ ನೀಡುವುದಾಗಿ ಘೋಷಿಸಿದರು.
ಪ್ರಾಣಿ ದಯಾ ಸಂಸ್ಥೆಯ ಸ್ವಯಂ ಸೇವಕಿ ಸ್ವಯಂಬೋಸೋಹಂ ಅವರು ಮಾತನಾಡಿ, ತಾನು ಈ ಹಿಂದೆ ಐಟಿ ಉದ್ಯೋಗಿ ಆಗಿ ಎಂ.ಎನ್.ಸಿ ಕಂಪನಿಯಲ್ಲಿ ಕೆಲಸ ಮಾಡುವಾಗ ಅಲ್ಲಿ ಋತು ಸಮಸ್ಯೆಯಾದಾಗ ಸ್ಯಾನಿಟರಿ ಪ್ಯಾಡ್ಗಳ ಸೌಲಭ್ಯ ಇರಲಿಲ್ಲ. ನನ್ನಂತಹ ಅದೆಷ್ಟೋ ಮಹಿಳಾ ಉದ್ಯೋಗಿಗಳು ಈ ಕಷ್ಟವನ್ನು ಅನುಭವಿಸುವಂತಾಗುತ್ತಿತ್ತು. ಈ ಬಗ್ಗೆ ಪ್ರಶ್ನಿಸಿದರೆ ಉತ್ತರವೂ ಇಲ್ಲ. ಪರಹಾರವೂ ಇಲ್ಲ. ಇದನ್ನು ಪ್ರತಿಭಟಿಸಿ ತಾನು ಉದ್ಯೋಗ ತೊರೆದು ತಾನು ಈಗ ಕಾಡು ಹಾಗೂ ಮೂಖ ಪ್ರಾಣಿಗಳ ಸೇವೆ-ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವುದಾಗಿ ತಿಳಿಸಿದರು.
ಆಂಟೋಣಿ ಸಜಿತ್ ಅವರು ಈ ಮೊದಲು ಪರಿಚಯವಿರಲಿಲ್ಲ. ಕ್ಯಾಲನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಪಿಂಕ್ ರೂಮ್ನ ಕೋಲಾರದ ಸುದ್ದಿ ಬೆಂಗಳೂರಿನ ರಾಜ್ಯ ಹಾಗೂ ರಾಷ್ಟ್ರೀಯ ದೈನಿಕಗಳಲ್ಲಿ ವಿಶೇಷವಾಗಿ ಪ್ರಕಟಗೊಂಡಿದ್ದು ನನ್ನ ಗಮನ ಸೆಳೆಯಿತು. ಇದನ್ನು ಪರಿಶೀಲಿಸುವ ಸಲುವಾಗಿ ಹೃದಯ ಪೌಂಡೇಶನ್ನ ವೆಬ್ಸೈಟ್ ಜಾಲಾಡಿದಾಗ ಅದರಲ್ಲಿ ಈ ರೀತಿಯ ಅನೇಕ ಸೇವಾ ಕಾರ್ಯಗಳನ್ನು ನೋಡಿ ಮೆಚ್ಚುಗೆ ವ್ಯಕ್ತವಾಯಿತು.
ಕ್ಯಾಲನೂರು ಪಬ್ಲಿಕ್ ಶಾಲೆ ದೈಹಿಕ ಶಿಕ್ಷಣ ಶಿಕ್ಷಕ ಡಾ.ಜಿ.ಎಂ.ಶ್ರೀನಿವಾಸ್ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯದೊಂದಿಗೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿ ದೇಶ ವಿದೇಶದಲ್ಲಿ ಕೀರ್ತಿಪತಾಕೆ ಹಾರಿಸುವ ಮೂಲಕ ಸದೃಢ ಆರೋಗ್ಯ ಮತ್ತು ಸಮಾಜ ನಿರ್ಮಿಸುವಂತಾಗಬೇಕು ಎಂದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಚೌಡೇಶ್ವರಿ ಪ್ರೌಢಶಾಲೆಯ ಆಡಳಿತ ಮಂಡಳಿ ಸದಸ್ಯ ಕೆ.ಎಂ.ರಾಜಣ್ಣ ಮಾತನಾಡಿ, ಯಾವುದೇ ಪ್ರತಿಫಲಾಪೇಕ್ಷೆ, ಲಾಭದಾಯಕ ಅಂಶ, ರಾಜಕೀಯ ಪ್ರವೇಶದ ಉದ್ದೇಶವಿಲ್ಲದೆ ಮಾಡುತ್ತಿರುವ ಈ ಕಾರ್ಯವು ಮೆಚ್ಚುಗೆಯಾಗಿದ್ದು ತಾನು ಸಹ ಕೈ ಜೋಡಿಸುವುದಾಗಿ ಪ್ರಕಟಿಸಿದರು. ಬೆಂಗಳೂರಿನಲ್ಲಿ ಸಾವಿರಾರು ಮಂದಿ ಕೋಟ್ಯಧಿಪತಿಗಳಿದ್ದಾರೆ. ಅವರ್ಯಾರಿಗೂ ಇಂತಹ ಸೇವಾ ಮನೋಭಾವವೇ ಇಲ್ಲದಾಗಿದೆ. ಅಂತಹುದರಲ್ಲಿ ಬೆಂಗಳೂರಿನ ಆಂಟೋನಿಯವರು ಕೋಲಾರಕ್ಕೆ ಸಂಬಂಧವೇಇಲ್ಲ. ಅಂತಹುದರಲ್ಲಿ ಇಂತಹ ಗ್ರಾಮೀಣ ಶಾಲೆಗಳ ಹೆಣ್ಣು ಮಕ್ಕಳ ವೈಯಕ್ತಿಕ ಸ್ವಚ್ಚತೆಗೆ ಕೈಗೊಂಡಿರುವ ಈ ಕಾರ್ಯ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಇವರ ಸೇವಾ ಕೈಂಕರ್ಯ ಬೇರೆಯವರಿಗೆ ಮಾದರಿಯಾಗಲಿ ಎಂದರು.
ಶಾಲೆಯ ಆಡಳಿತ ಅಧಿಕಾರಿ ಎಂ.ಸಂಪಗಿ ಮದನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಉಪಪ್ರಾಂಶುಪಾಲ ಬಿ.ಜಿ.ವಿಜಯಾನಂದ, ನೀಡುವ ಹೃದಯ ಪೌಂಡೇಶನ್ನ ರಾಜೇಶ್ ಏಂಜೆಲ್ ಪೆಡ್ರಿಶಿಯಾ ಮತ್ತಿತರರು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಸರಿತಾ, ಇಂಜಿನಿಯರ್ ರಾಮ್ಕುಮಾರ್, ವಿದ್ಯಾಸಂಸ್ಥೆಯ ವೀರಪ್ಪರೆಡ್ಡಿ, ಬೈರೇಗೌಡ, ರಾಜಣ್ಣ, ಜಯಚಂದ್ರ ನಾಯಕ್, ಎನ್.ಸಿ.ವೆಂಕಟರೆಡ್ಡಿ, ಟಿ.ಮುನಿವೆಂಕಟಸ್ವಾಮಿ, ಮುನೇಗೌಡ, ಸಂಪಂಗಿ, ಶೀಲಾಕುಮಾರ್, ಟಿ.ವಿ.ಚಿಕ್ಕಪ್ಪಯ್ಯ ಮತ್ತು ಕೃಷ್ಣಪ್ಪ ಮುಂತಾದವರು ಭಾಗವಹಿಸಿದ್ದರು.
![](https://jananudi.com/wp-content/uploads/2025/02/Hrudhaya-news-4.jpg)
![](https://jananudi.com/wp-content/uploads/2025/02/Hrudhaya-news-2.jpg)
![](https://jananudi.com/wp-content/uploads/2025/02/Hrudhaya-news-3.jpg)