ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋಲಾರ, ಆಗಸ್ಟ್-9, ವಿದ್ಯುತ್ ಖಾಸಗೀಕರಣ 2003 ರ ಮಸೂದೆಯನ್ನು ಚಳಿಗಾಲದ ಅವಧಿವೇಶನದಲ್ಲಿ ಮಂಡಣೆ ಮಾಡಬಾರದೆಂದು ಸಾಮೂಹಿಕ ನಾಯಕತ್ವ ರೈತ ಸಂಘದ ರೈಲ್ವೆ ಇಲಾಖೆ ಮುಂದೆ ಮೋಟರ್ ಪಂಪ್‍ಗಳ ಸಮೇತ ಹೋರಾಟ ಮಾಡಿ ರೈಲ್ವೆ ಅಧಿಕಾರಿಗಳ ಮುಖಾಂತರ ಮಾನ್ಯ ರಾಜ್ಯ ಪಾಲರಿಗೆ ಮನವಿ ನೀಡಿ, ಒತ್ತಾಯಿಸಲಾಯಿತು.
ಅತಿವೃಷ್ಟಿ ಅನಾವೃಷ್ಟಿ ಸಾಂಕ್ರಾಮಿಕ ರೋಗಗಳಿಂದ ತತ್ತರಿಸಿರುವ ರೈತರ ಪಂಪ್‍ಸೆಟ್‍ಗಳಿಗೆ ಕೇಂದ್ರ ರಾಜ್ಯ ಸರ್ಕಾರ ಪ್ರೀಪೆಡ್ ಮೀಟರ್ ಅಳವಡಿಸಲು ಮುಂದಾದರೆ ಪ್ರಪಂಚದ ಮೂರನೇ ಮಹಾಯುದ್ದ ರೈತರಿಂದಲೇ ಪ್ರಾರಂಭವಾಗುವ ಕಾಲ ದೂರವಿಲ್ಲವೆಂದು ಸರ್ಕಾರಗಳಿಗೆ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ಎಚ್ಚರಿಕೆ ನೀಡಿದರು.
ಹೋರಾಟದ ನೇತೃತ್ವ ವಹಿಸಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ಕಾಯ್ದೆಗಳಿಂದ ಕೃಷಿ ಕ್ಷೇತ್ರ ಸಂಪೂರ್ಣವಾಗಿ ನಶಸಿ ಹೋಗುತ್ತಿದೆ. ಸ್ವಾತಂತ್ರ್ಯ ಬಂದು 7 ದಶಕಕಳೆದರೂ ಇನ್ನು ದೇಶಕ್ಕೆ ಅನ್ನ ಹಾಕುವ ಅನ್ನದಾತನಿಗೆ ಸ್ವಾತಂತ್ರ್ಯ ಸಿಕ್ಕಲ್ಲ. ಜನನ ಪ್ರಮಾಣ ಪತ್ರದಿಂದ ಮರಣ ಪ್ರಮಾಣ ಪತ್ರದವರೆಗೂ ಲಂಚ ವಿಲ್ಲದೆ ಕೆಲಸವಾಗುತ್ತಿಲ್ಲ. ಇದರ ಮದ್ಯದಲ್ಲಿ ಖಾಸಗಿ ಸಾಲ ಮಾಡಿ ಬೆಳೆದಂತಹ ಬೆಳೆಗಳಿಗೆ ಬೆಲೆ ಸಿಗದೆ ಸಂಕಷ್ಟದಲ್ಲಿರುವ ರೈತರ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ಪಂಪ್‍ಸೆಟ್‍ಗಳಿಗೆ ಮೀಟರ್ ಅಳವಡಿಕೆ ಮಾಡುವ ಮುಖಾಂತರ ದೇಶದ ಕೃಷಿ ಕ್ಷೇತ್ರವನ್ನು ಸರ್ವನಾಶ ಮಾಡಿ ರೈತ ಕುಲವನ್ನು ಬೀದಿಗೆ ತಳ್ಳುವ ಹುನ್ನಾರ ನಡೆಸುತ್ತಿದೆ ಎಂದು ಸರ್ಕಾರಗಳ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷ ಐತಂಡಹಳ್ಳಿ ಮಂಜುನಾಥ ಮಾತನಾಡಿ ವಿದ್ಯುತ್ ಕ್ಷೇತ್ರ 50 ಸಾವಿರ ಕೋಟಿ ಸಾಲದಲ್ಲಿದೆ. ಅದನ್ನು ಸರಿದೂಗಿಸಲು ಖಾಸಗಿ ಕ್ಷೇತ್ರಕ್ಕೆ ವಹಿಸುವ ಮುಖಾಂತರ ಸಾಲವನ್ನು ತೀರಿಸಿ ಆ ನಂತರ ರೈತರ ಪಂಪ್‍ಸೆಟ್‍ಗಳಿಗೆ ಮೀಟರ್ ಮೇಲಿನ ಹಣವನ್ನು ಸಬ್ಸಿಡಿ ದರದಲ್ಲಿ ನೀಡುತ್ತೇವೆಂದು ರೈತರ ಮೇಲೆ ಕರುಣೆ ತೋರಿಸುವ ಸರ್ಕಾರಗಳೇ ಮೊದಲು ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಿ ಆ ನಂತರ ಮೀಟರ್ ಅಳವಡಿಸಿ ಅದನ್ನು ಬಿಟ್ಟು ಹಾಕಿದ ಬಂಡವಾಳ ಕೈಗೆ ಬರದ ಸಮಯದಲ್ಲಿ ವಿದ್ಯುತ್ ಬಿಲ್ ನೀಡುವಂತೆ ಒತ್ತಾಯಿಸುವುದು ಯಾವ ನ್ಯಾಯ ಎಂದು ಪ್ರಶ್ನೆ ಮಾಡಿದರು.
ರೈತರ ಕಷ್ಟ ಗೊತ್ತಿದ್ದ ಅಂದಿನ ಮುಖ್ಯ ಮಂತ್ರಿ ಬಂಗಾರಪ್ಪನವರು 10 ಹೆಚ್.ಪಿ ಪಂಪ್‍ಸೆಟ್‍ವರೆಗೂ ಉಚಿತ ವಿದ್ಯುತ್ ನೀಡುವ ಮುಖಾಂತರ ರೈತಪರ ಕಾನೂನನ್ನು ಜಾರಿಗೆ ತಂದು ರೈತರ ತಂಟೆಗೆ ಬರುವ ಯಾವ ಸರ್ಕಾರವೇ ಆಗಲಿ ಜನ ಪ್ರತಿನಿಧಿಗಳೇ ಆಗಲೀ ಗೂಟದಲ್ಲಿ ಹೊಡೆಯಿರಿ ಎಂಬ 20 ವರ್ಷದ ಹಿಂದಿನ ಮಾತು ಈಗ ರೈತರಿಗೆ ಮನವರಿಕೆಯಾಬೇಕು. ಬಂಗಾರಪ್ಪನವರ 20 ವರ್ಷದ ಹಿಂದಿನ ಭವಿಷ್ಯ ಇಂದು ರೈತರು ಪಾಲನೆ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದು ರೈತರಿಗೆ ಸಲಹೆ ನೀಡಿದರು.
ಮನವಿ ಸ್ವೀಕರಿಸಿದ ಅಧಿಕಾರಿಗಳು ನಿಮ್ಮ ಮನವಿಯನ್ನು ಮೇಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ತಲುಪಿಸುವ ಭರವಸೆಯನ್ನು ನೀಡಿದರು.
ಹೋರಾಟದಲಿ ಹಸಿರು ಸೇನೆ ಜಿಲ್ಲಾದ್ಯಕ್ಷ ಕಿರಣ್, ರಾಜ್ಯ ಸಂಚಾಲಕ ಬಂಗವಾದಿ ನಾಗರಾಜ್‍ಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಕ್ಕಲೇರಿ ಹನುಮಯ್ಯ, ಕೋಲಾರ ತಾಲ್ಲೂಕು ಅದ್ಯಕ್ಷ ಈಕಂಬಳ್ಳಿ ಮಂಜುನಾಥ್, ಶ್ರೀನಿವಾಸಪುರ ತಾಲ್ಲೂಕು ಅದ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ, ಮಾಲೂರು ತಾಲ್ಲೂಕು ಅದ್ಯಕ್ಷ ಮಾಸ್ತಿ ವೆಂಕಟೇಶ್, ಮಂಗಸಂದ್ರ ನಾಗೇಶ್, ತಿಮ್ಮಣ್ಣ, ಅಶ್ವತ್ತಪ್ಪ, ಮರಗಲ್ ಮುನಿಯಪ್ಪ, ಸುಪ್ರೀಂಚಲ, ನಾಗಯ್ಯ ಬಲಮಂದೆ, ಮುನಿರಾಜು, ಭಾಗವಹಿಸಿದರು.