![](https://jananudi.com/wp-content/uploads/2023/11/Screenshot-946-4.png)
![](https://jananudi.com/wp-content/uploads/2023/11/DC-1.jpg)
ಕೋಲಾರ: ಚುನಾವಣಾ ಸೆಕ್ಟರ್ ಅಧಿಕಾರಿಗಳು ಸದಾ ಸಂವೇದನಾಶೀಲರಾಗಿ ಕಾರ್ಯನಿರ್ವಹಿಸಬೇಕು.ಲೋಕಸಭಾ ಚುನಾವಣೆಯ ಅಧಿಸೂಚನೆಯು ಮಾರ್ಚ್ ಮೊದಲ ವಾರದಲ್ಲಿ ಪ್ರಕಟವಾಗುವ ಸಾಧ್ಯತೆಯಿದ್ದು, ಈ ಸಂಬಂಧ ಅಗತ್ಯ ಸಿದ್ಧತೆಗಳನ್ನು ಈಗಿನಿಂದಲೇ ಮಾಡಿಕೊಳ್ಳಬೇಕಿದೆ. ಆದ್ದರಿಂದ ಸೆಕ್ಟರ್ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಮತಗಟ್ಟೆಗಳ ಬಗ್ಗೆ ಮಾಹಿತಿಯನ್ನು ನಿಗಧಿತ ಕಾಲಾವಧಿ ಒಳಗೆ ಒದಗಿಸುವಂತೆ ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಸೆಕ್ಟರ್ ಅಧಿಕಾರಿಗಳಿಗೆ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಲೋಕಸಭಾ ಚುನಾವಣೆ ಸಂಬಂಧ ಆರಂಭದಿಂದ ಕೊನೆಯ ತನಕ ಸೆಕ್ಟರ್ ಅಧಿಕಾರಿಗಳ ಜವಾಬ್ದಾರಿ ಹೆಚ್ಚಾಗಿದೆ. ಆದ್ದರಿಂದ ಸೆಕ್ಟರ್ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು. ಜೊತೆಗೆ ನಿಖರ ಮಾಹಿತಿ ಒದಗಿಸುವಂತೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.
ಸೆಕ್ಟರ್ ಅಧಿಕಾರಿಗಳು ತಮ್ಮ ಮತಗಟ್ಟೆ ವ್ಯಾಪ್ತಿಯಲ್ಲಿ ವೀಕ್ಷಣೆಗೆ ತೆರಳುವ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಜೊತೆಗಿದ್ದು ವರದಿ ನೀಡುವಂತೆ ಜಿಲ್ಲಾಧಿಕಾರಿಯವರು ಸೂಚಿಸಿದರು.
ಈಗಾಗಲೇ ದೋಷರಹಿತ ಮತದಾರರ ಪಟ್ಟಿ ಸಿದ್ದಪಡಿಸಿ ಪ್ರಕಟಿಸಲಾಗಿದೆ ಹಾಗೂ ರಾಜ್ಯಕ್ಕೆ ಮಾದರಿಯಾಗತಕ್ಕ ರೀತಿ ಚುನಾವಣಾ ಪೂರ್ವ ಸಿದ್ಧತೆ ನಡೆಸಿದ ಕಾರ್ಯ ನಿರ್ವಹಿಸಿ ಜಿಲ್ಲೆಯು ಶ್ಲಾಘನೆಗೆ ಒಳಗಾಗಿದೆ.
ಇದಕ್ಕೆಲ್ಲ ಜಿಲ್ಲೆಯ ಕಂದಾಯ ಅಧಿಕಾರಿಗಳ ಶ್ರಮ ಮತ್ತು ಶ್ರದ್ದೆ ಕಾರಣ. ಸೆಕ್ಟರ್ ಅಧಿಕಾರಿಗಳು ಸಹ ಚುನಾವಣೆ ಎಂಬ ಪವಿತ್ರ ಕೆಲಸದಲ್ಲಿ ಶ್ರದ್ದಾಳುಗಳಾಗಿ, ಧೈರ್ಯ ಹಾಗೂ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುವುದನ್ನು ಚುನಾವಣಾ ಆಯೋಗವು ನಿರೀಕ್ಷೆ ಮಾಡುತ್ತಿದೆ. ಆಯೋಗದ ನಿರೀಕ್ಷೆಗಳಿಗನುಗುಣವಾಗಿ ಕರ್ತವ್ಯನಿರ್ವಹಿಸಬೇಕಾದ್ದು ನಮ್ಮೆಲ್ಲರ ಜವಾಬ್ದಾರಿ ಎಂದರು.
ಮರಣ ಹೊಂದಿರುವವರು, ಸ್ಥಳಾಂತರವಾಗಿರುವವರ ಬಗ್ಗೆ ಪ್ರತಿ ಬೂತ್ಗಳಿಗೆ ತೆರಳಿ ಮಾಹಿತಿ ಸಂಗ್ರಹಿಸಬೇಕು ಎಂದು ಅವರು ನಿರ್ದೇಶನ ನೀಡಿದರು.
ಮತಗಟ್ಟೆ ವ್ಯಾಪ್ತಿಯಲ್ಲಿ ದೂರವಾಣಿ ಸಂಪರ್ಕ ಇದೆಯೇ ? ಇಲ್ಲವೇ ಎಂಬ ಬಗ್ಗೆ ಮಾಹಿತಿ ಒದಗಿಸ ಬೇಕು. ಚುನಾವಣೆ ಸಂಬಂಧ ಕಾಲ ಕಾಲಕ್ಕೆ ಅಗತ್ಯ ಮಾಹಿತಿ ನೀಡುವಂತೆ ಸೆಕ್ಟರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ. ನಾರಾಯಣ ಅವರು ಪಾರದರ್ಶಕ, ನಿರ್ಭಿತ, ಅಕ್ರಮ ರಹಿತ ಚುನಾವಣೆ ನಡೆಸಲು ಪೊಲೀಸ್ ಸೆಕ್ಟರ್ ಅಧಿಕಾರಿಗಳು ಸಜ್ಜಾಗಬೇಕು. ಸಮಾಜ ಘಾತುಕ ವ್ಯಕ್ತಿ, ಸಂಘಟನೆಗಳ ಬಗ್ಗೆ ತೀವ್ರ ನಿಗಾ ವಹಿಸಬೇಕು. ಈ ಬಗ್ಗೆ ಸ್ಥಳೀಯ ಅಧಿಕಾರಿಗಳ ಜೊತೆಗೆ ಸಮನ್ವಯ ಸಾಧಿಸಿ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು. ಚುನಾವಣಾ ಅಕ್ರಮಗಳ ಬಗ್ಗೆ ಈಗಿನಿಂದ ಜಾಗರುಕರಾಗಿರಬೇಕು ಎಂದು ತಿಳಿಸಿದರು.
ಚುನಾವಣಾ ಸ್ವೀಪ್ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪದ್ಮ ಬಸವಂತಪ್ಪ ಅವರು ಎಲ್ಲ ಮತಗಟ್ಟೆ ಕೇಂದ್ರಗಳಲ್ಲಿ ವಿಕಲಚೇತನರಿಗೆ ಹಾಗೂ ವೃದ್ಧರಿಗೆ ಅನುಕೂಲವಾಗುವಂತೆ ರಾಂಪ್ ಇರಬೇಕು.
ಕುಡಿಯುವ ನೀರು, ಅಗತ್ಯ ಪೀಠೋಪಕರಣ, ರಸ್ತೆ ಸಂಪರ್ಕ, ಶೌಚಾಲಯ, ಗಾಳಿ ಬೆಳಕು, ವಿದ್ಯುತ್ ವ್ಯವಸ್ಥೆ, ಕಟ್ಟಡ ಸುಸ್ಥಿತಿಯಲ್ಲಿದೆಯೇ ಮತ್ತಿತರ ಮೂಲ ಸೌಲಭ್ಯಗಳು ಇವೆಯೇ ಎಂಬುದರ ಬಗ್ಗೆ ಪರಿಶೀಲಿಸಿ, ವರದಿ ನೀಡುವಂತೆ ತಿಳಿಸಿದರು. ಸೆಕ್ಟರ್ ಅಧಿಕಾರಿಗಳು ಚುನಾವಣೆ ಸಂಬಂಧ ಅಗತ್ಯ ಮಾಹಿತಿ ಪಡೆದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಂಕರ್ ವಾಣಿಕ್ಯಳ್, ಉಪವಿಭಗಾಧಿಕಾರಿ ವೆಂಕಟಲಕ್ಷ್ಮಿ, ಡಿ.ಡಿ.ಎಲ್.ಆರ್ ಭಾಗ್ಯ, ಎಲ್ಲಾ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ತಹಶೀಲ್ದಾರುಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಎಲ್ಲ ಕಂದಾಯ ಸೆಕ್ಟರ್ ಅಧಿಕಾರಿಗಳು ಹಾಗೂ ಪೊಲೀಸ್ ಸೆಕ್ಟರ್ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
![](https://jananudi.com/wp-content/uploads/2023/11/DC-3.jpg)
![](https://jananudi.com/wp-content/uploads/2023/11/DC-5.jpg)
![](https://jananudi.com/wp-content/uploads/2023/11/DC-2.jpg)
![](https://jananudi.com/wp-content/uploads/2023/11/DC-4.jpg)