ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ,ಜೂ.17: ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಜಿಲ್ಲೆಯ ಪತ್ರಕರ್ತರ ಕಲ್ಯಾಣಕ್ಕಾಗಿ ಸಂಗ್ರಹಿಸಲು ಉದ್ದೇಶಿಸಿರುವ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ಹಿರಿಯ ಪತ್ರಕರ್ತ ಪಾ.ಶ್ರೀ.ಅನಂತರಾಮ್ 25000 ರೂಗಳ ದೇಣಿಗೆ ನೀಡಿದ್ದಾರೆ.
ಪತ್ರಕರ್ತರ ಸಂಘದ ಚುನಾವಣಾಧಿಕಾರಿಗಳಾಗಿದ್ದ ಅನಂತರಾಮ್ ಚುನಾವಣಾ ಪ್ರಕ್ರಿಯೆಯಲ್ಲಿ ಸಂಗ್ರಹಿಸಲಾಗಿದ್ದ ಹಣದಲ್ಲಿನ ಉಳಿತಾಯದ ಮೊತ್ತವನ್ನು ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ಕೊಡುಗೆಯಾಗಿ ನೀಡುವ ಮೂಲಕ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ.
ಶುಕ್ರವಾರ ನಡೆದ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸಭೆಯ ವೇಳೆಯಲ್ಲಿ 25000 ರೂಪಾಯಿ ದೇಣಿಗೆಯನ್ನು ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಅವರಿಗೆ ಹಸ್ತಾಂತರಿಸಿದರು.
ಈ ವೇಳೆ ಮಾತನಾಡಿದ ಪಾ.ಶ್ರೀ.ಅನಂತರಾಮ್ ಜಿಲ್ಲೆಯ ಪತ್ರಕರ್ತರ ಕಲ್ಯಾಣಕ್ಕಾಗಿ ಸ್ಥಾಪಿಸಲು ಉದ್ದೇಶಿಸಿರುವ ಒಂದು ಕೋಟಿ ರೂ ನಿಧಿಯ ಸಂಗ್ರಹಕ್ಕೆ ಎಲ್ಲರೂ ಕೈಜೋಡಿಸಬೇಕು. ಕಾರ್ಯನಿರತ ಪತ್ರಕರ್ತರಿಗೆ ಮಾತ್ರ ಎಲ್ಲಾ ಅನುಕೂಲಗಳು ದೊರಕುವ ರೀತಿಯಲ್ಲಿ ಪತ್ರಕರ್ತರ ಸಂಘವು ಸದಸ್ಯತ್ವದ ವಿಚಾರದಲ್ಲಿ ನಿರ್ಧಾಕ್ಷಿಣ್ಯವಾಗಿ ನಡೆದುಕೊಳ್ಳಬೇಕು ಎಂದು ಬಯಸಿದರು.
ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಪತ್ರಕರ್ತರಿಗೆ ಆಪತ್ಕಾಲದ ಸಂದರ್ಭದಲ್ಲಿ ನೆರವಾಗುವ ದೃಷ್ಟಿಯಿಂದ ಒಂದು ಕೋಟಿ ರೂಗಳ ಕ್ಷೇಮಾಭಿವೃದ್ಧಿ ನಿಧಿ ಸಂಗ್ರಹಕ್ಕೆ ಉದ್ದೇಶಿಸಲಾಗಿದೆ. ಪ್ರತ್ಯೇಕ ಬ್ಯಾಂಕ್ ಖಾತೆಯ ಮೂಲಕ ಅತ್ಯಂತ ಪಾರದರ್ಶಕವಾಗಿ ನಿಧಿಯ ಸಂಗ್ರಹಣೆ ಮತ್ತು ನಿರ್ವಹಣೆ ಮಾಡುವುದಾಗಿ ವಿವರಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಎಸ್.ಗಣೇಶ್, ಮಾಜಿ ಅಧ್ಯಕ್ಷ ವಿ.ಮುನಿರಾಜು, ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್, ಖಜಾಂಚಿ ಎ.ಜಿ. ಸುರೇಶ್ಕುಮಾರ್ ಉಪಸ್ಥಿತರಿದ್ದರು.
ಪತ್ರಿಕಾ ದಿನಾಚರಣೆಗೆ ಸಿದ್ಧತೆ
ಜುಲೈ 1 ರಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಸಹಯೋಗದಲ್ಲಿ ಪತ್ರಿಕಾ ದಿನಾಚರಣೆಯನ್ನು ಆಚರಿಸಲು ಶುಕ್ರವಾರ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು.
ಬಿ.ವಿ.ಗೋಪಿನಾಥ್ ಅಧ್ಯಕ್ಷತೆಯಲ್ಲಿ ನಡೆಯುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಉಪ ಕುಲಪತಿ ನಿರಂಜನ್ ವಾನಳ್ಳಿ ಉದ್ಘಾಟಿಸುವರು. ಹಿರಿಯ ಪತ್ರಕರ್ತ ಡಿ.ಉಮಾಪತಿ ಪತ್ರಿಕೋದ್ಯಮದ ಸಮಕಾಲೀನ ಸವಾಲುಗಳು ಕುರಿತು ವಿಶೇಷ ಉಪನ್ಯಾಸ ನೀಡುವರು.
ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಜಿಲ್ಲೆಯ ಹಿರಿಯ ಪತ್ರಕರ್ತರ ನೆನಪಿನಲ್ಲಿ ಪ್ರತಿಭಾವಂತ ಪತ್ರಕರ್ತರಿಗೆ ಪ್ರಶಸ್ತಿಗಳನ್ನು ವಿತರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.