ಕೋಲಾರ,ಮಾ.29: ಕೋಲಾರದವರು ಯಾವುದೇ ಸಂಘದಲ್ಲಿ ಇದ್ದರೂ ಅದು ಕ್ರಿಯಾಶೀಲವಾಗಿ ನಡೆಯುತ್ತದೆ. ಈಗ ಕೋಲಾರದ ಇಬ್ಬರಿಗೆ ಪ್ರಶಸ್ತಿ ಒಲಿದಿರುವುದು ಹೆಮ್ಮೆಯ ವಿಚಾರ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ತಿಳಿಸಿದರು.
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಕೊಡ ಮಾಡುವ ಗಿರಿಜಮ್ಮ ರುದ್ರಪ್ಪ ತಾಳಿಕೋಟೆ ದತ್ತಿನಿಧಿ ಪ್ರಶಸ್ತಿಗೆ ಭಾಜನರಾಗಿರುವ ಕೋಲಾರಶಕ್ತಿ ದಿನಪತ್ರಿಕೆಯ ಸಂಪಾದಕಿ ಕೆ.ಗೋಪಿಕಾ ಮಲ್ಲೇಶ್ ಹಾಗೂ ಡಿ.ವಿ.ಜಿ ದತ್ತಿನಿಧಿ ಪ್ರಶಸ್ತಿಗೆ ಭಾಜನರಾಗಿರುವ ಕೆ.ಯು.ಡ.ಬ್ಲ್ಯೂ.ಜೆ ಮಾಜಿ ಅಧ್ಯಕ್ಷ ವಿ.ವೆಂಕಟೇಶ್ ಅವರನ್ನು ಶುಕ್ರವಾರ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸನ್ಮಾನಿಸಿ ಅವರು ಮಾತನಾಡಿದರು.
ರಾಜ್ಯ ಸಂಘದ ಅಧ್ಯಕ್ಷರಾಗಿದ್ದಾಗ ವೆಂಕಟೇಶ್ ಕೈಗೊಂಡ ಸುಧಾರಣೆ ಕ್ರಮ, ಹೋರಾಟ ಪರಿಣಾಮ ಸಂಘದ ಕಚೇರಿ ಉಳಿದಿದೆ. ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಕಾರ್ಯಕಾರಿ ಸಮಿತಿ ಸಭೆ ನಡೆದಿದೆ. ಅವರಿಗೆ ಪ್ರಶಸ್ತಿ ಸಿಕ್ಕಿರುವುದು ಸಾರ್ಥಕ ಎನಿಸಿದೆ. ಸಮರ್ಥ ವ್ಯಕ್ತಿಗೆ ಪ್ರಶಸ್ತಿ ಒಲಿದಿದೆ ಎಂದರು.
ಕೋಲಾರ ಪತ್ರಿಕೋದ್ಯಮದಲ್ಲಿ ಮಲ್ಲೇಶ್ ಹೆಸರಿಲ್ಲದೆ ಕೊನೆಗೊಳ್ಳುವುದಿಲ್ಲ. ಜಾತಿ, ತಾರತಮ್ಯ ಇಲ್ಲ. ಕೋಲಾರ ಪತ್ರಿಕೋದ್ಯಮದಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ. ಅಂಥದ್ದರಲ್ಲಿ ಈಗ ಗೋಪಿಕಾಮಲ್ಲೇಶ್ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಅವರ ದಿಟ್ಟತನ ಮೆಚ್ಚುವಂಥದ್ದು. ಇದಕ್ಕೆ ಮಲ್ಲೇಶ್ ಪ್ರೇರಣೆ ಎಂದು ಹೇಳಿದರು.
ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಎಸ್.ಗಣೇಶ್ ಮಾತನಾಡಿ, ವೆಂಕಟೇಶ್ ಹೋರಾಟಗಾರರು. ಪತ್ರಕರ್ತರ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ಕೋಲಾರ ಪತ್ರಿಕೋದ್ಯಮದಲ್ಲಿ ಮಲ್ಲೇಶ್ ಮುಂಚೂಣಿಯಲ್ಲಿ ನಿಲ್ಲುವ ವ್ಯಕ್ತಿ. ಸಂಘಕ್ಕೆ ಕೆಲಸ ಮಾಡಿದ್ದಾರೆ. ಜಾತಿ ನೋಡದೆ ಪತ್ರಕರ್ತರಿಗೆ ಸಹಾಯ ಮಾಡಿದ್ದಾರೆ. ಅವರ ನಿಧನದ ನಂತರ ಗೋಪಿಕಾಮಲ್ಲೇಶ್ ಜವಾಬ್ದಾರಿಯಿಂದ ಪತ್ರಿಕೆ ನಡೆಸುತ್ತಿದ್ದಾರೆ. ಈ ಪ್ರಶಸ್ತಿ ಮಹಿಳೆಯರು ಪತ್ರಿಕೋದ್ಯಮಕ್ಕೆ ಪ್ರೇರಣೆ ಆಗಲಿ ಎಂದರು.
ರಾಜ್ಯ ಕಾರ್ಯಕಾರಿಣಿ ಸದಸ್ಯ ವಿ.ಮುನಿರಾಜು ಮಾತನಾಡಿ, ರಾಜ್ಯದಲ್ಲಿ ಏನೇ ಪ್ರಶಸ್ತಿಗಳು ಪ್ರಕಟವಾದರೂ ಜಿಲ್ಲೆಯ ಹೆಸರು ಇರುತ್ತದೆ ಇದು ಹೆಮ್ಮೆಯ ವಿಚಾರ ಎಂದರು.
ಇವತ್ತಿನ ಪತ್ರಕರ್ತರು ಚಟುವಟಿಕೆಯಿಂದ ಇರುವುದರಿಂದ ಇಂತಹ ಪ್ರಶಸ್ತಿಗಳು ಹುಡುಕಿಕೊಂಡು ಬರುತ್ತಿವೆ. ಇದನ್ನು ಅನುಸರಿಸಿಕೊಂಡು ಯುವ ಪತ್ರಕರ್ತರು ಹೋಗಬೇಕೆಂದು ಕಿವಿ ಮಾತು ಹೇಳಿದರು.
ರಾಜ್ಯ ಸಂಘದ ಖಜಾಂಚಿ ವಾಸುದೇವಹೊಳ್ಳ ಮಾತನಾಡಿ, 31 ಜಿಲ್ಲೆಗಳಲ್ಲಿ 21 ಪ್ರಶಸ್ತಿ ಬಂದಿದೆ. ಕೋಲಾರ ಜಿಲ್ಲೆಗೆ ಎರಡು ಪ್ರಶಸ್ತಿ ಬಂದಿದೆ. ರಾಜ್ಯದಲ್ಲಿ ಕೋಲಾರ ಸಂಘ ಪ್ರಸಿದ್ಧಿ ಪಡೆದಿದೆ. ಪ್ರಶಸ್ತಿ ಬಂದ ಕೂಡಲೇ ಸನ್ಮಾನಿಸಿದೆ. ಈ ಕಾರ್ಯ ಶ್ಲಾಘನೀಯ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ ಮಾತನಾಡಿ, ಪತ್ರಿಕೆಯನ್ನು ಜೀವ ಎಂದು ಭಾವಿಸಿದವರು ಮಲ್ಲೇಶ್. ಅವರು ನಿಧನರಾದಾಗ ಪತ್ರಿಕೆ ನಿಲ್ಲುತ್ತದೆ ಎಂದು ಭಾವಿಸಿದ್ದರು. ಆದರೆ, ಅದನ್ನು ನಿಲ್ಲಲು ಬಿಡದೆ ಎಲ್ಲರೂ ಕೈಜೋಡಿಸಿ ಮುಂದುವರೆಸಲಾಗಿದೆ. ಗೋಪಿಕಾ ಜವಾಬ್ದಾರಿ ಹಾಗೂ ಬದ್ಧತೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದರು.
ಪ್ರಜಾವಾಣಿ ದಿನಪತ್ರಿಕೆ ಮಾಜಿ ಉದ್ಯೋಗಿಯೂ ಹಾಗೂ ಕೆ.ಯು.ಡ.ಬ್ಲ್ಯೂ.ಜೆ ಮಾಜಿ ಅಧ್ಯಕ್ಷರೂ ಆದ ವಿ.ವೆಂಕಟೇಶ್ ಮಾತನಾಡಿ, ಗೋಪಿನಾಥ್ ಸಂಘಟನೆಯಲ್ಲಿ ನಿಸ್ಸೀಮರು. ರಾಜ್ಯದಲ್ಲಿ ಸಂಘ ಉತ್ತಮವಾಗಿ ನಡೆದುಕೊಂಡು ಬರುತ್ತಿದೆ ಎಂದರು.
ಡಿ.ವಿ.ಗುಂಡಪ್ಪ ಸಂಘದ ಸಂಸ್ಥಾಪಕರು. ಅವರು ದಾರ್ಶನಿಕರು, ಸಾಹಿತಿ, ಪತ್ರಕರ್ತ. ಅವರ ಮಂಕುತಿಮ್ಮನ ಕಗ್ಗ ಭಗವದ್ಗೀತೆ ಇದ್ದಂತೆ. ಜನ ಜೀವನಕ್ಕೆ ಹತ್ತಿರವಾಗಿದೆ. ಅವರು ಮುಳಬಾಗಿಲಿನವರು ಎಂಬುದು ನಮ್ಮೆಲ್ಲರ ಹೆಮ್ಮೆ. ಅಂಥವರ ಹೆಸರಿನಲ್ಲಿ ಪ್ರಶಸ್ತಿ ಬಂದಿರುವುದು ಹೆಮ್ಮೆ ಎನಿಸುತ್ತಿದೆ. ನಾನೂ ಅದೇ ತಾಲ್ಲೂಕಿನವನು ಎಂದು ತಿಳಿಸಿದರು.
ಗೋಪಿಕಾ ಮಲ್ಲೇಶ್ ಮಾತನಾಡಿ, ನನ್ನ ಕೆಲಸ ಗುರುತಿಸಿ ಪ್ರಶಸ್ತಿ ಕೊಟ್ಟಿದ್ದಾರೆ. ಮಲ್ಲೇಶ್ ತೀರಿಕೊಂಡು 20 ವರ್ಷಗಳಾದವು. ಅಲ್ಲಿಂದ ನಾನು ಜವಾಬ್ದಾರಿ ವಹಿಸಿಕೊಂಡು ಬರುತ್ತಿದ್ದೇನೆ. ಬೇರೆ ಕೆಲಸ ಮಾಡುವ ಎಂದಿದ್ದೆ. ಆದರೆ, ಎಲ್ಲರ ಒತ್ತಾಯದ ಮೇರೆಗೆ ಪತ್ರಿಕೆ ಮುಂದುವರಿಸಿಕೊಂಡು ಬರುತ್ತಿದ್ದೇನೆ ಇದಕ್ಕೆ ಎಲ್ಲಾ ರೀತಿಯಲ್ಲೂ ಪ್ರೋತ್ಸಾಹ ನೀಡಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸಿದರು.
ಹಿರಿಯ ಪತ್ರಕರ್ತರಾದ ಬಿ.ಸುರೇಶ್, ಸಿ.ಜಿ.ಮುರಳಿ, ಚಂದು, ಲಕ್ಷ್ಮಣ ಮಾತನಾಡಿದರು.
ಸಂಘದ ಖಜಾಂಚಿ ಎ.ಜಿ.ಸುರೇಶ್ಕುಮಾರ್ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಅಬ್ಬಣಿಶಂಕರ್, ಸಿ.ವಿ.ನಾಗರಾಜ್, ಒಂಕಾರಮೂರ್ತಿ, ಎಸ್.ರವಿಕುಮಾರ್, ಸ್ಕಂದಕುಮಾರ್, ಚಾಂದ್ ಪಾಷ, ವೆಂಕಟೇಶ್ ಬಾಬಾ, ಕೆ.ಎನ್.ಮಹೇಶ್, ವಿ.ಈಶ್ವರ್, ಕೆ.ಜಿ.ಮಂಜುನಾಥ್, ಕೆ.ಎಸ್.ಸುದರ್ಶನ್, ನವೀನ್ ಕುಮಾರ್, ಮದನ್, ಪುರುಷೋತ್ತಮ್, ಗೋಪಿ, ಗಂಗಾಧರ್, ಕುಮಾರ್, ಪವನ್, ಸಹನಾ, ಅಮರ್, ಸಿ.ಅಮರೇಶ್, ಲಕ್ಷ್ಮೀಪತಿ ಇನ್ನಿತರರು ಇದ್ದರು.