ಕೋಲಾರ:- ಸದೃಢ ಆರೋಗ್ಯಕ್ಕಾಗಿ ಮಕ್ಕಳಿಗೆ ಪಠ್ಯದಷ್ಟೇ ಕ್ರೀಡೆಗೂ ಒತ್ತು ನೀಡುವ ಅಗತ್ಯವಿದ್ದು, ವಿದ್ಯಾರ್ಥಿಗಳನ್ನು ಮಾನಸಿಕವಾಗಿಯೂ ಗಟ್ಟಿಗೊಳಿಸಲು ಆಟೋಟಗಳು ಸಹಕಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಅಕ್ರಂಪಾಷ ಅಭಿಪ್ರಾಯ ಪಟ್ಟರು.
ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಸಂಯುಕ್ತಾಶ್ರಯದಲ್ಲಿ 2024-25ನೇ ಸಾಲಿನ ಕೋಲಾರ ಜಿಲ್ಲಾ ಮಟ್ಟದ 14-17 ವರ್ಷ ವಯೋಮಿತಿಯೊಳಗಿನ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಮತ್ತು ಬಾಲಕಿಯರ ಕ್ರೀಡಾಕೊಟವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು,
ಈ ಕ್ರೀಡಾಕೂಟವನ್ನು ನೋಡುತ್ತಿದ್ದರೆ ನನ್ನ ಬಾಲ್ಯದ ವಿದ್ಯಾರ್ಥಿ ದೆಸೆಯಲ್ಲಿನ ಕ್ರೀಡಾ ಚಟುವಟಿಕೆಗಳು ನನೆಪಿಗೆ ಬರುತ್ತದೆ ಎಂದ ಅವರು, ಕ್ರೀಡೆಗಳಲ್ಲಿ ಸೋಲು ಗೆಲವು ಸಹಜ ಪ್ರಕ್ರಿಯೆ, ಸೋಲುಂಟಾದರೆ ಕ್ರೀಡೆಗಳಲ್ಲಿ ಭಾಗವಹಿಸುವಿಕೆಯಿಂದ ಹಿಂಜರಿಯುವಂತಾಗಬಾರದು ಇಂದಿನ ಸೋಲು ಮುಂದಿನ ಗೆಲುವಿನ ಸೋಪಾನ ಎಂದು ತಿಳಿದು ಮುಂದುವರೆಯಬೇಕೆಂದು ಕರೆ ನೀಡಿದರು,
ಕ್ರೀಡಾಸ್ಪೂರ್ತಿಯಿಂದ ಪಾಲ್ಗೊಳ್ಳಿ, ಧೈರ್ಯದಿಂದ ಯಾವೂದೇ ಗೊಂದಲಕ್ಕೆ ಒಳಗಾಗದೆ ಭಾಗವಹಿಸಿ ನಿಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಿ ಜಿಲ್ಲೆಗೆ ಮತ್ತು ರಾಜ್ಯಕ್ಕೆ ಕೀರ್ತಿ ತನ್ನಿ ಎಂದು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಅಂಕಗಳಿಕೆಗೆ ಮಾತ್ರ
ಗಮನ ಬೇಡ
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ಮಾತನಾಡಿ, ಇಂದಿನ ಪೋಷಕರು ಮಕ್ಕಳ ಅಂಕ ಗಳಿಕೆಯ ಕಡೆ ಮಾತ್ರವೇ ಗಮನಹರಿಸುವುದರಿಂದ ಇಂದಿನ ಮಕ್ಕಳಲ್ಲಿ ಅನಾರೋಗ್ಯದ ಪ್ರಮಾಣ ಹೆಚ್ಚಲು ಕಾರಣವಾಗಿದೆ, ಕ್ರೀಡೆಗಳು ಓದಲು ಆತ್ಮಸ್ಥೈರ್ಯ ತುಂಬುತ್ತವೆ ಎಂಬುದನ್ನು ಮರೆಯಬಾರದು ಎಂದರು.
ಸದಾ ನಾಲ್ಕು ಗೋಡೆಗಳ ನಡುವೆ ಓದಿಗೆ ಸೀಮಿತರಾದರೆ ಅವರಲ್ಲಿ ಆಸಕ್ತಿ ಕಡಿಮೆಯಾಗುತ್ತದೆ ಎಂಬ ಕಾರಣದಿಂದಲೇ ಸಮಗ್ರ ಶಿಕ್ಷಣದ ಭಾಗವಾಗಿ ಕ್ರೀಡೆಗಳಿಗೂ ಆದ್ಯತೆ ನೀಡಲಾಗಿದೆ ಎಂದ ಅವರು, ಮಕ್ಕಳು ಕ್ರೀಡೆ, ವ್ಯಾಯಾಮ ಮರೆಯಬಾರದು ಎಂದರು.
ಕ್ರೀಡೆಗಳಲ್ಲಿ ತೀರ್ಪುಗಾರರ ಜವಾಬ್ದಾರಿ ಹೆಚ್ಚಿನದಾಗಿದೆ, ನೀವು ನಿಷ್ಪಕ್ಷಪಾತ ತೀರ್ಪು ನೀಡಿ, ಯಾವುದೇ ಗೊಂದಲಕ್ಕೆ ಅವಕಾಶ ನೀಡದಿರಿ ಎಂದು ಮನವಿ ಮಾಡಿ, ಮಕ್ಕಳು ಕ್ರೀಡೆಗಳಲ್ಲಿ ಗೆಲುವು,ಸೋಲಿನ ಕುರಿತು ಚಿಂತಿಸದೇ ಛಲದಿಂದ ಆಟವಾಡಿ ಎಂದು ಕಿವಿಮಾತು ಹೇಳಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿದೇಶಕಿ ಆರ್.ಗೀತಾ ಮಾತನಾಡಿ, ಪ್ರಸಕ್ತಸಾಲಿನ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಬಾಲಕ ಬಾಲಕಿಯರ ಕ್ರೀಡಾಕೂಟದ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ನಿಮ್ಮಲ್ಲಿರುವ ಪ್ರತಿಭೆ ಪ್ರದರ್ಶಿಸ ಬೇಕು, ವಿದ್ಯಾರ್ಥಿಗಳಿಗೆ ಶಿಕ್ಷಣವು ಎಷ್ಟು ಮುಖ್ಯವೋ ಕ್ರೀಡೆಗಳು ಸಹ ಅಷ್ಟೆ ಮುಖ್ಯ ಹಾಗಾಗಿ ಕ್ರೀಡೆಗಳಿಂದ ಮಾನಸಿಕ ಒತ್ತಡಗಳಿಂದ ಮುಕ್ತರಾಗಿ ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯವನ್ನು ಸಧೃಡವಾಗಿ ಕಾಪಾಡಿ ಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ಸುವರ್ಣ ಸೆಂಟ್ರಲ್ ಶಾಲಾ ಮಕ್ಕಳಿಂದ ಪ್ರಾರ್ಥನೆ ಹಾಗೂ ನಾಡಗೀತೆಗಳಾದವು ಶಿಕ್ಷಕರಾದ ಡೇವೀಡ್ ಅವರ ನೇತ್ರತ್ವದಲ್ಲಿ ಬ್ಯಾಂಡ್ ಸೆಟ್ ನುಡಿಸಲಾಯಿತು, ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ ಕ್ರೀಡಾಪಟುಗಳಿಗೆ ಕ್ರೀಡಾ ಪ್ರತಿಜ್ಞೆ ಭೋಧಿಸಿದರು.
ಜಿಲ್ಲಾಧಿಕಾರಿಗಳು ಬಲೂನ್ ಹಾರಿ ಬಿಡುವ ಮೂಲಕ ಹಾಗೂ ಕ್ರೀಡಾ ಜ್ಯೋತಿ ಸ್ವೀಕಾರದ ಮೂಲಕ ಕ್ರೀಡೆಗಳಿಗೆ ಚಾಲನೆ ನೀಡಿದರು,
ವೇದಿಕೆಯಲ್ಲಿ ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಎಸ್.ಚೌಡಪ್ಪ, ಜಿಲ್ಲಾ ಹಿಂದಿ ಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣಪ್ಪ,ವಿವಿಧ ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳಾದ ಎಂ.ಮಂಜುನಾಥ್, ಹೆಚ್.ಶಿವಕುಮಾರ್, ಅಪ್ಪೇಗೌಡ, ವಿ.ಮುರಳಿಮೋಹನ್, ಆಂಜನೇಯ, ಕೆ.ನಾರಾಯಣರೆಡ್ಡಿ, ಆರ್.ನಾಗರಾಜ್, ಸಂತೋಷ ಕುಮಾರ್, ಸತೀಶ್ಕುಮಾರ್, ಮಾರ್ಕೋಂಡಪ್ಪ ಮುಂತಾದವರು ಉಪಸ್ಥಿತರಿದ್ದರು.