ಶ್ರೀನಿವಾಸಪುರ : ಕರ್ನಾಟಕ ರಾಜ್ಯದಲ್ಲಿ ಕೋಲಾರ ಜಿಲ್ಲೆ ಅತಿ ಹೆಚ್ಚು ಮಾವಿನ ಕಾಯಿ ಬೆಳೆ ಹಾಗೂ ಟೊಮೋಟೋ ಮತ್ತು ತರಕಾರಿಗಳನ್ನು ಬೆಳೆಯುವ ಪ್ರದೇಶವಾಗಿದೆ ಈ ಪ್ರದೇಶದಲ್ಲಿ ಅತಿ ಹೆಚ್ಚು ರೈಲ್ಗಳನ್ನು ಸಂಚರಿಸುವಂತೆ ಮಾಡಬೇಕಾಗುತ್ತದೆ ಎಂದು ಜಿಲ್ಲಾ ಮಾವು ಬೆಳಗಾರರ ಸಂಘದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ಹೇಳಿದರು.
ಬುಧವಾರ ಪ್ರಜಾವಾಣಿ ಪತ್ರಿಕೆಯೊಂದಿಗೆ ಮಾತನಾಡಿ ಕೇಂದ್ರ ಸರ್ಕಾರವು ಮುಂದಿನ ದಿನಗಳಲ್ಲಿ ಮಂಡಿಸುವ ರೈಲ್ವೆ ಬಜೆಟ್ನಲ್ಲಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಿಂದ ಮದನಪಲ್ಲಿ ಮುಖಾಂತರ ತಿರುಪತಿಗೆ ರೈಲು ಮಾರ್ಗವನ್ನು ಆಳವಡಿಸಿದರೆ ತುಂಬಾ ಪ್ರಯೋಜನಕಾರಿಯಾಗಲಿದೆ ಎಂದರು.
ನಮ್ಮ ಜಿಲ್ಲೆಯ ರೈತರಿಗೆ ತುಂಬಾ ಅನುಕೂಲವಾಗಿ ಇಲ್ಲಿ ಬೆಳೆದಂತಹ ಹಣ್ಣು ಮತ್ತು ತರಕಾರಿಗಳಿಗೆ ಅತಿ ಹೆಚ್ಚು ಬೆಲೆ ಬರುವ ಸಾಧ್ಯತೆ ಇರುತ್ತದೆ. ಇದನ್ನು ನಮ್ಮ ಜಿಲ್ಲೆಯ ಸಂಸದರು ಯಾವಾಗಲೂ ಹೇಳುತ್ತಿದ್ದರೂ ಕಾರ್ಯಗತಗೊಳ್ಳಲಿಲ್ಲ. ಹಾಗೂ ಶ್ರೀನಿವಾಸಪುರದಿಂದ ದೆಹಲಿಯವರಿಗೆ ಕಿಸಾನ್ ರೈಲು ಪ್ರಾರಂಭಗೊಳ್ಳಬೇಕು ಒಂದು ವರ್ಷ ಪ್ರಾಯೋಗಿಕವಾಗಿ ಕಿಸಾನ್ ರೈಲನ್ನು ಹೊರಡಿಸಿ ಈಗ ನಿಲ್ಲಿಸಲಾಗಿದೆ. ಅದು ಪುನರಾಂಭ ಆಗಬೇಕು.
ಏಕೆಂದರೆ ಶ್ರೀನಿವಾಸಪುರದಲ್ಲಿ ಪ್ರತಿವರ್ಷ ಸುಮಾರು ಐದರಿಂದ ಆರು ಲಕ್ಷ ಟನ್ಗಳಷ್ಟು ಮಾವಿನ ಕಾಯಿಯನ್ನು ಬೆಳೆಯುತ್ತಿದ್ದೇವೆ . ಈ ಒಂದು ದೃಷ್ಟಿಯಿಂದ ಕೇಂದ್ರ ಸರ್ಕಾರವು ರೈತರಿಗೆ ಬೆಂಬಲವಾಗಿ ನಿಂತು ಈ ಕಾರ್ಯವನ್ನು ಕೇಂದ್ರ ಸರ್ಕಾರ ಈ ಕೆಲಸ ಕೈಗೆತ್ತಿಕೊಂಡು ಕೂಡಲೇ ಆಗುವಂತೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಪತ್ರಿಕೆಯ ಮೂಲಕ ಮನವಿ ಮಾಡಿದರು.