ವರದಿ:ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಸಂಪಾದಕರು:ಬರ್ನಾಡ್ ಡಿ’ಕೋಸ್ತಾ

ಕೋಲಾರ:- ಮಹಿಳೆಯರಂತೆ ಪುರುಷರೂ ಸಾಲ ಮರುಪಾವತಿಯಲ್ಲಿ ಬದ್ದತೆ ತೋರಿದರೆ ಮತ್ತಷ್ಟು ಪುರುಷ ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯ ನೀಡುವ ಮೂಲಕ ಸ್ವಾವಲಂಬಿ ಬದುಕಿಗೆ ನೆರವಾಗಲು ಬ್ಯಾಂಕ್ ಸಿದ್ದವಿದೆ ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಸ್ವಷ್ಟಪಡಿಸಿದರು.
ನಗರದ ಡಿಸಿಸಿ ಬ್ಯಾಂಕ್ ಆವರಣದಲ್ಲಿ ನಗರದ ಶತಶೃಂಗ ಪುರುಷ ಸ್ವಸಹಾಯ ಸಂಘಕ್ಕೆ ಭದ್ರತೆ ರಹಿತ 5 ಲಕ್ಷ ರೂ ಸಾಲ ವಿತರಿಸಿ ಅವರು ಮಾತನಾಡುತ್ತಿದ್ದರು.
ಅವಿಭಜಿತ ಜಿಲ್ಲೆಯ ಲಕ್ಷಾಂತರ ಮಹಿಳೆಯರಿಗೆ ಡಿಸಿಸಿ ಬ್ಯಾಂಕ್ ಭದ್ರತೆ ರಹಿತ ಸಾಲ ಸೌಲಭ್ಯ ಕಲ್ಪಿಸಿದೆ, ಸಾಲ ಮರುಪಾವತಿಯಲ್ಲೂ ಮಹಿಳೆಯರು ಶೇ.100 ಸಾಧನೆಯಾಗುತ್ತಿದ್ದು, ಬ್ಯಾಂಕಿಗೆ ಬೆನ್ನೆಲುಬಾಗಿದ್ದಾರೆ ಎಂದು ತಿಳಿಸಿದರು.
ಭದ್ರತೆ ಇಲ್ಲದೇ ಮಹಿಳೆಯರಿಗೆ ಸಾಲ ನೀಡಲು ಮುಂದಾದಾಗ ಅನೇಕರು ಆಶ್ಚರ್ಯ ವ್ಯಕ್ತಪಡಿಸಿದರು, ಮಹಿಳೆಯರು ಸಾಲ ಮರುಪಾವತಿಸುವರೇ, ಬ್ಯಾಂಕಿನ ಗತಿಯೇನು ಎಂದೆಲ್ಲಾ ಪ್ರಶ್ನಿಸಿದ್ದರು ಎಂದು ಸ್ಮರಿಸಿದ ಅವರು, ಇದೀಗ ಮಹಿಳೆಯರೇ ಸಮರ್ಪಕ ಸಾಲ ಮರುಪಾವತಿ, ಉಳಿತಾಯದ ಹಣ ಠೇವಣಿ ಇಡುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ ಎಂದು ತಿಳಿಸಿದರು.
ಪುರುಷರು ಸ್ವಸಹಾಯ ಸಂಘ ರಚಿಸಿಕೊಂಡು ಸ್ವಾವಲಂಬಿ ಬದುಕಿನ ಸಂಕಲ್ಪದೊಂದಿಗೆ ಸಾಲಕ್ಕೆ ಮುಂದಾದರೆ ನಿಯಮಾನುಸಾರ ಬ್ಯಾಂಕ್ ಸಾಲ ವಿತರಿಸಲು ಸಿದ್ದವಿದೆ ಎಂದ ಅವರು, ಸಕಾಲಕ್ಕೆ ಸಾಲ ಮರುಪಾವತಿಸಿ ಮತ್ತಷ್ಟು ಸಾಲ ಸೌಲಭ್ಯ ಪಡೆದುಕೊಳ್ಳಿ ಎಂದು ಕಿವಿಮಾತು ಹೇಳಿದರು.
ಕೋಲಾರ ಡಿಸಿಸಿ ಬ್ಯಾಂಕ್ ಬಡವರು,ರೈತರು, ಮಹಿಳೆಯರ ಬದುಕು ಹಸನಾಗಿಸುವ ಬದ್ದತೆ ಹೊಂದಿದೆ, ಸಂಘ ರಚಿಸಿಕೊಂಡು ಉಳಿತಾಯದ ಹಣವಿಡುವ ಎಲ್ಲಾ ಸಂಘಗಳಿಗೂ ಈಗಾಗಲೇ ಸಾಲ ಸೌಲಭ್ಯ ನೀಡಲಾಗಿದೆ, ಎಂದಿಗೂ ಮಧ್ಯವರ್ತಿಗಳ ಹಾವಳಿಗೆ ಅವಕಾಶ ನೀಡುವುದಿಲ್ಲ ಎಂದು ಸ್ವಷ್ಟಪಡಿಸಿದರು.
ಇ-ಶಕ್ತಿ ಅನುಷ್ಠಾನದ ಮೂಲಕ ಮಹಿಳಾ ಸ್ವಸಹಾಯ ಸಂಘಗಳ ವಾರದ ಸಭೆ, ಉಳಿತಾಯದ ಚಟುವಟಿಕೆಗಳನ್ನು ಗಣಕೀಕರಿಸುವ ಪ್ರಯತ್ನ ಯಶಸ್ಸಿನತ್ತ ಸಾಗಿದೆ, ಇದರಿಂದ ಮಹಿಳೆಯರು ನಡೆಸುವ ವಹಿವಾಟು, ಪ್ರತಿನಿಧಿಗಳು ಸಾಲದ ಕಂತು ಮರುಪಾವತಿಸುವ ಮಾಹಿತಿ ಕ್ಷಣಾರ್ಧದಲ್ಲಿ ಸ್ವಸಹಾಯ ಸಂಘದ ಪ್ರತಿ ಮಹಿಳೆಯರ ಮೊಬೈಲ್ಗೂ ಹೋಗುವುದರಿಂದ ಅವ್ಯವಹಾರಗಳಿಗೆ ಕಡಿವಾಣ ಬೀಳುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ದಿವಾಳಿಯಾಗಿದ್ದ ಡಿಸಿಸಿ ಬ್ಯಾಂಕ್ ಇಂದು ಲಕ್ಷಾಂತರ ತಾಯಂದಿರಿಗೆ ಸಾಲ ಸೌಲಭ್ಯ ನೀಡುವ ಮೂಲಕ ಅನೇಕ ಮನೆಗಳಲ್ಲಿ ಬೆಳಕು ಮೂಡುವಂತೆ ಮಾಡಿದೆ, ದಿವಾಳಿಯಾಗಿದ್ದ ಬ್ಯಾಂಕಿಗೆ ಅಧ್ಯಕ್ಷರೆಂದು ಗೋವಿಂದಗೌಡರನ್ನು ಟೀಕಿಸುತ್ತಿದ್ದ ಕಾಲವಿತ್ತು ಆದರೆ ಇದೀಗ ಬ್ಯಾಂಕನ್ನು ಇಷ್ಟೊಂದು ಉನ್ನತಮಟ್ಟಕ್ಕೆ ತಂದ ಕೀರ್ತಿಗೂ ಅವರು ಪಾತ್ರರಾಗಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ ಹಾಗೂ ಖಜಾಂಚಿ ಎ.ಜಿ.ಸುರೇಶ್ ಕುಮಾರ್ ಮಾತನಾಡಿ, ಪತ್ರಕರ್ತರು ರಚಸಿಕೊಂಡಿರುವ ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯ ಒದಗಿಸುವ ಮೂಲಕ ಪತ್ರಕರ್ತರ ಬದುಕಿಗೆ ಬ್ಯಾಂಕ್ ನೆರವಾಗಿದೆ, ಅದೇ ರೀತಿ ಬ್ಯಾಂಕಿನ ನಂಬಿಕೆ ಉಳಿಸಿಕೊಂಡು ಸಾಲ ಮರುಪಾವತಿಯನ್ನು ಸಕಾಲದಲ್ಲಿ ಮಾಡಲು ಸದಸ್ಯರು ಬದ್ದತೆ ತೋರಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ ಹಾಗೂ ಖಜಾಂಚಿ ಎ.ಜಿ.ಸುರೇಶ್ ಕುಮಾರ್, ಶತಶೃಂಗ ಪುರುಷ ಸ್ವಸಹಾಯ ಸಂಘ ಪ್ರತಿನಿಧಿಗಳಾದ ಎಸ್.ಲಕ್ಷ್ಮಿಪತಿ, ಕೆ.ಜಿ.ಶಿವಕುಮಾರ್, ಸಂಘದ ಸದಸ್ಯರುಗಳಾದ ನವಿದ್ ಪಾಷ, ಎಲ್.ಎ.ಸಾಗರ್, ಶಿವರಾಜ್, ವಿಜಯಕುಮಾರ್ ತಬರೇಜ್, ಅಮರೇಶ್ ಮಂಜೇಶ್ ಕಿತ್ತಂಡೂರು ವೆಂಕಟ್ರಾಮ್ ಹಾಗೂ ಪತ್ರಕರ್ತರಾದ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.