ಕೋಲಾರ ನಗರದ ರಸ್ತೆ ಅಗಲೀಕರಣ 22 ಮೀಟರ್‍ಗೆ ನಿಗಧಿಗೊಳಿಸಲು ಒತ್ತಾಯ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ 03 ಆಗಸ್ಟ್ : ಕೋಲಾರ ನಗರದ ಡೂಂಲೈಟ್ ವೃತ್ತದಿಂದ ಟೇಕಲ್ ವೃತ್ತದವರೆಗಿನ ರಸ್ತೆ ಅಗಲೀಕರಣ ಕಾಮಗಾರಿಯನ್ನು 22 ಮೀಟರ್‍ಗೆ ನಿಗಧಿಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಕೋರಿ ಭಾರತೀಯ ದಲಿತ ಸೇನೆಯ ರಾಜ್ಯಾಧ್ಯಕ್ಷ ಜಿಲ್ಲಾಧಿಕಾರಿಗಳಲ್ಲಿ ಕೋರಿದ್ದಾರೆ.
ಕೋಲಾರ ನಗರದಲ್ಲಿ ಮೊದಲನೇ ಹಂತವಾಗಿ ಪ್ರಮುಖ ಮೂರು ರಸ್ತೆಗಳನ್ನು ಅಗಲೀಕರಣದ ಮೂಲಕ ಅಭಿವೃದ್ಧಿಪಡಿಸಲು ಜಿಲ್ಲಾಡಳಿತ ಮುಂದಾಗಿದ್ದು, ಅದರಂತೆ ಕಾಮಗಾರಿಗಳು ಸಹ ನಡೆಯುತ್ತಿರುವುದು ಸ್ವಾಗತಾರ್ಹ. ಈ ಹಿಂದೆ ಜಿಲ್ಲಾಧಿಕಾರಿಗಳಾಗಿದ್ದ ಜಿ.ಮಂಜುನಾಥ್‍ರವರು ಸ್ಥಳೀಯ ವಿಧಾನಸಭಾ ಸದಸ್ಯರಾದ ಕೆ.ಶ್ರೀನಿವಾಸಗೌಡರ ಅಧ್ಯಕ್ಷತೆಯಲ್ಲಿ ಕರೆದಿದ್ದ ಸಭೆಯಲ್ಲಿ ರಸ್ತೆಗಳ ಅಭಿವೃದ್ಧಿಗೆ ಸಂಬಂಧಪಟ್ಟಂತೆ ರಸ್ತೆ ಅಗಲೀಕರಣವನ್ನು ಹಾಲಿ ಇರುವ ರಸ್ತೆಯ ಮಧ್ಯ ಭಾಗದಿಂದ 12 ಮೀಟರ್‍ನಷ್ಟು ಅಗಲೀಕರಣಗೊಳಿಸಲು ತೀರ್ಮಾನಿಸಿದ್ದು, ಅದರಂತೆ ಕಾಮಗಾರಿಯು ರಾಜ್ಯ ಹೆದ್ದಾರಿ ರಸ್ತೆಯಾಗಿರವ ಮೆಕ್ಕೆ ವೃತ್ತದಿಂದ ಬಂಗಾರಪೇಟೆ ವೃತ್ತದವರೆಗಿನ ರಸ್ತೆ ಪೂರ್ಣಗೊಂಡಿರುತ್ತದೆ.
ಆದರೆ ಬಂಗಾರಪೇಟೆ ವೃತ್ತದಿಂದ ಕ್ಲಾಕ್ ಟವರ್ ಕಾಮಗಾರಿಯು ಪ್ರಗತಿಯಲ್ಲಿದ್ದು, ಡೂಂಲೈಟ್ ವೃತ್ತದಿಂದ ಟೇಕಲ್ ವೃತ್ತದವರೆಗೆ ಇರುವ ರಸ್ತೆ ಎರಡೂ ಕಡೆ ಇರುವ ಚರಂಡಿಗಳ ಮದ್ಯದ ರಸ್ತೆ ಮತ್ತು ಸರ್ಕಾರಿ ಜಾಗವು ಒಟ್ಟು 22 ಮೀಟರ್‍ಗಳಷ್ಟಿದ್ದು, ಇನ್ನು ಒಂದು ಮೀಟರ್ ಅವಶ್ಯಕತೆ ಇದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿರುತ್ತಾರೆ. ಈಗಾಗಲೇ ನಗರಸಭೆ ಖಾತೆಗಳನ್ನು ಪಡೆದು ಎರಡೂ ಬದಿಯಲ್ಲಿ ಮನೆಗಳನ್ನು ಸಾರ್ವಜನಿಕರು ನಿರ್ಮಾಣ ಮಾಡಿಕೊಂಡಿರುತ್ತಾರೆ. ಅಗತ್ಯವಿರುವ ಒಂದು ಮೀಟರ್ ರಸ್ತೆಗೆ ಎಡೂ ಬದಿಯಲ್ಲಿ ಒಂದುವರೆ ಅಡಿ ಕಟ್ಟಡಗಳನ್ನು ತೆರವುಗೊಳಿಸಲು ಇಲಾಖೆ ಮುಂದಾಗುತ್ತಿದ್ದು, ಇದು ಸಾರ್ವಜನಿಕರಿಗೆ ತುಂಬಾ ತೊಂದರೆ ಉಂಟಾಗುತ್ತಿದೆ.
ಇತ್ತಿಚೇಗೆ ತಾವುಗಳು ರಸ್ತೆ ಕಾಮಗಾರಿಗೆ ಸಂಬಂಧಪಟ್ಟಂತೆ ಸ್ಥಳ ಪರಿಶೀಲನೆ ಮಾಡಿದ ಸಂದರ್ಭದಲ್ಲಿ ಒಂದರಿಂದ ಎರಡು ಅಡಿಗಳ ಅಗತ್ಯವಿದ್ದಕಡೆ ಕಟ್ಟಡಗಳ ತೆರವುಗೊಳಿಸುವ ವಿಚಾರವಾಗಿ ಸಹಾನುಭೂತಿಯನ್ನು ತೋರಿಸಲು ತಿಳಿಸಿರುತ್ತೀರಿ. ಅದರಂತೆ ಮಾನವೀಯತೆ ದೃಷ್ಠಿಯಿಂದ ಎರಡೂ ಬದಿಯಲ್ಲಿ ಒಂದುವರೆ ಅಡಿ ಕಟ್ಟಗಳನ್ನು ತೆರವುಗೊಳಿಸಲು ಮುಂದಾಗದೆ ಹಾಲಿ ಇರುವ 22 ಮೀಟರ್‍ಗೆ ರಸ್ತೆಯನ್ನು ಮಾಡಿ ಸಾರ್ವಜಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ತಮ್ಮಮನವಿಯಲ್ಲಿ ಕೋರಿದ್ದಾರೆ.