ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ:- ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‍ನ ಎನ್‍ಪಿಎ ಶೇ.2.13ಕ್ಕೆ ಇಳಿಯುವ ಮೂಲಕ ಪ್ರಸ್ತುತ 2021-22ನೇ ಸಾಲಿನಲ್ಲಿ 9 ಕೋಟಿ ರೂ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹರ್ಷ ವ್ಯಕ್ತಪಡಿಸಿದರು.
ನಗರದ ಡಿಸಿಸಿ ಬ್ಯಾಂಕ್ ಸಭಾಗಂಣದಲ್ಲಿ 2021-22ನೇ ಸಾಲಿನ ಆರ್ಥಿಕ ವರ್ಷದ ಮುಕ್ತಾಯದ ನಂತರ ಸೋಮವಾರ ನಡೆದ ಬ್ಯಾಂಕ್ ಅಧಿಕಾರಿಗಳ ಮೊದಲ ಸಭೆಯಲ್ಲಿ ಬ್ಯಾಂಕಿನ ಈ ಸಾಲಿನ ವಹಿವಾಟು,ಲಾಭಾಂಶದ ಕುರಿತು ಪರಿಶೀಲನೆ ಮಾಡಿ ಮಾತನಾಡಿದರು.
ಸರ್ಕಾರದಿಂದ ಬರಬೇಕಾಗಿರುವ ಬಡ್ಡಿಹಣ ಬಿಟ್ಟು 9 ಕೋಟಿ ಲಾಭಾಂಶದ ಸಾಧನೆ ಮಾಡಲು ಬ್ಯಾಂಕಿನ ಸಿಬ್ಬಂದಿ, ಅಧಿಕಾರಿಗಳ ಹಾಗೂ ಆಡಳಿತ ಮಂಡಳಿಯ ಶ್ರಮ ಕಾರಣವಾಗಿದೆ. ಸಾಧನೆಗೆ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಅಭಿನಂದನೆಗಳು ಎಂದರು.
ಬ್ಯಾಂಕಿನ ಕುರಿತಾದ ಟೀಕೆಗಳು, ಪ್ರತಿರೋಧ, ಸುಳ್ಳು ಆರೋಪಗಳು ನಮ್ಮನ್ನು ಸದಾ ಎಚ್ಚರಿಕೆಯಿಂದ ಇರುವಂತೆ ಪ್ರೇರೇಪಿಸಿವೆ, ಒಂದು ರೀತಿಯಲ್ಲಿ ಟೀಕಾಕಾರರು ಬ್ಯಾಂಕಿನ ಅಭಿವೃದ್ದಿಗೆ ಪರೋಕ್ಷವಾಗಿ ಸಹಕಾರ ನೀಡಿದ್ದಾರೆ ಇದೀಗ ಬ್ಯಾಂಕ್ 9 ಕೋಟಿ ಲಾಭ ಗಳಿಸಿರುವುದು ಅವರ ಎಲ್ಲಾ ಟೀಕೆಗಳಿಗೂ ಉತ್ತರ ನೀಡಿದಂತಿದೆ ಎಂದರು.
ಏಪ್ರಿಲ್ ಅಂತ್ಯದೊಳಗೆ ಪ್ರತಿ ಸೊಸೈಟಿಯ ಲೆಕ್ಕ ಪರಿಶೋಧನೆಯಾಗಬೇಕು. ಆನ್ ಲೈನ್ ವ್ಯವಸ್ಥೆ ಆಗಿಯು ಲೆಕ್ಕಪರಿಶೋಧನೆ ಮಾಡದೆ ಇರುವುದು ವಿಷಾದಕರ ಸಂಗತಿ. ಹೆಲ್ಪ್ ಡೆಸ್ಕ್ ಸ್ಥಾಪನೆ ಮಾಡಿದ್ದರೆ ಈ ಸಮಸ್ಯೆ ಎದುರಾಗುತ್ತಿರಲಿಲ್ಲ. ಎರಡು ದಿನದಲ್ಲಿ ಲೋಪಗಳನ್ನು ಪಡಿಸಿಕೊಳ್ಳದಿದ್ದರೆ ಆನ್‍ಲೈನ್ ಅಳವಡಿಕೆ ಉಸ್ತುವಾರಿ ವಹಿಸಿರುವ ಏಜೆನ್ಸಿ ಬದಲಾವಣೆ ಮಾಡಲಾಗುವುದು ಎಂದು ಎಚ್ವರಿಕೆ ನೀಡಿದರು.
ಸಾಲ ಕೊಡುವುದು, ವಸೂಲಿ ಮಾಡುವುದು ನಿಮ್ಮ ಜವಾಬ್ದಾರಿ. ಇದರಿಂದಾಗಿ ಪ್ರತಿ ದಿನ ಏನು ಕೆಲಸ ಮಾಡಬೇಕು ಎಂದು ವೇಳಾಪಟ್ಟಿ ತಯಾರಿಸಿಕೊಳ್ಳಿ. ಅದರ ಪ್ರಕಾರ ಕೆಲಸ ಮಾಡಿದರೆ ನೀಡಿರುವ ಗುರಿ ಸಾಧನೆ ಮಾಡಲು ಸಹಕಾರಿಯಾಗುತ್ತದೆ ಎಂದರು.
ಗಣಕೀಕರಣ ಲೆಕ್ಕ ಹೊಂದಾಣಿಕೆಯಾದರೆ ಆಡಿಟ್‍ಗೆ ಸುಲಭವಾಗುತ್ತದೆ. ಗಣಕೀಕರಣ ಅನುದಾನಕ್ಕೆ ಅಫೆಕ್ಸ್ ಬ್ಯಾಂಕ್ ನಮ್ಮ ಜೊತೆಯಲ್ಲಿದೆ. ನಬಾರ್ಡ್ ತನಿಖೆ ಇರುವುದರಿಂದ ಯಾವುದೇ ಸಂದರ್ಭದಲ್ಲಿ ನಾನು ಶಾಖೆಗೆ ಭೇಟಿ ನೀಡುತ್ತೆನೆ. ಭೇಟಿ ಸಂದರ್ಭದಲ್ಲಿ ಏನೇ ಲೋಪಗಳು ಕಂಡುಬಂದರೆ ಸಹಿಸುವುದಿಲ್ಲ ಎಂದು ತಾಕೀತು ಮಾಡಿದರು.
ಇ-ಶಕ್ತಿ ಕಾರ್ಯಕ್ರಮ ಯಾವುದೇ ಕಾರಣಕ್ಕೂ ನಿಲ್ಲಬಾರದಯ. ಮೈಕ್ರೋ ಎಟಿಎಂ ಬಳಕೆ ಮಾಡಬೇಕು. ಮೊಬೈಲ್ ಬ್ಯಾಂಕ್ ವಾಹನ ಕಳುಹಿಸಿಕೊಡಿ ಎಂದು ಬೇಡಿಕೆ ಇಡಬೇಕು. ಮಧ್ಯಮಾವಧಿ ಸಾಲ ಹತ್ತು ಲಕ್ಷಕ್ಕೆ ಮೀರಬಾರದು. ಅದು ಸೊಸೈಟಿ ಮೂಲಕವೇ ಬರಬೇಕು. ಯಾವುದೇ ಕಾರಣಕ್ಕೂ ಶಾಖೆಯಿಂದ ಸಾಲ ಕೊಡುವುದು ಆಗಬಾರದು ಎಂದು ತಾಕೀತು ಮಾಡಿದರು.
ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ್ ಮಾತನಾಡಿ, ತಾಂತ್ರಿಕ ದೋಷ ಸರಿಪಡಿಸಲು ವಿ-ಸಾಫ್ಟ್ ಕಂಪನಿಯವರು ಹೆಲ್ಪ್ ಡೆಸ್ಕ್ ಸ್ಥಾಪನೆಗೆ ಸೂಚಿಸಲಾಗಿತ್ತು. ಬಹುತೇಕ ಕಾರ್ಯದರ್ಶಿಗಳಿಗೆ ಕಂಪ್ಯೂಟರ್ ತರಬೇತಿಯಿಲ್ಲ. ಈ ವಿಚಾರದಲ್ಲಿ ಗಂಭೀರತೆ ತೋರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಳಬಾಗಿಲು, ಬಂಗಾರಪೇಟೆಗೆ ಭೇಟಿ ನೀಡುತ್ತಿಲ್ಲ. ಡಿಸೆಂಬರ್ ತನಕ ಆನ್‍ಲೈನ್ ಒಂದು ಹಂತಕ್ಕೆ ಬಂದಿತ್ತು ಆದರೆ ಜನವರಿಂದ ಕಾರ್ಯವೈಖರಿ ಕುಂಠಿತಗೊಂಡಿದೆ.
ಬದ್ಧತೆಯಿಂದ ಸಾಫ್ಟ್‍ವೇರ್ ಕಂಪನಿ ಸಿಬ್ಬಂದಿ ಕೆಲಸ ಮಾಡಿದ್ದರೆ ಲೆಕ್ಕಪರಿಶೋಧನೆಗೆ ದಾಖಲೆಗಳು ಸಿದ್ದವಿರೋದು. ಪ್ರತಿ ಶಾಖೆಗೂ ಸಿಬ್ಬಂದಿಯನ್ನು ನೇಮಕ ಮಾಡಿದರೆ ಲೋಪಗಳನ್ನು ಸರಿಪಡಿಸಲು ಸಹಕಾರಿಯಾಗುತ್ತದೆ. ಕೂಡಲೇ ಪ್ರವೃತ್ತರಾಗಬೇಕು ಎಂದು ಸೂಚಿಸಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ನಾಗನಾಳ ಸೋಮಣ್ಣ, ಕೆ.ವಿ.ದಯಾನಂದ್, ಬ್ಯಾಂಕಿನ ಕೃಷ್ಣಮೂರ್ತಿ, ಎಜಿಎಂಗಳಾದ ಖಲೀಮುಲ್ಲಾ, ಬಾಲಾಜಿ, ಬೈರೇಗೌಡ, ಹುಸೇನ್ ಸಾಬ್ ದೊಡ್ಡಮುನಿ, ಬೇಬಿಶ್ಯಾಮಿಲಿ, ಪದ್ಮಮ್ಮ ಹಾಜರಿದ್ದರು.