ಕೋಲಾರ:- ಜಿಲ್ಲೆಯಲ್ಲಿ ಬಿಸಿಲಿನ ಬೇಗೆ ಪ್ರತಿ ವರ್ಷಕ್ಕಿಂತ ಈ ಬಾರಿ ಹೆಚ್ಚು ಕಾಣತೊಡಗಿದೆ, ಶಿವಾರಾತ್ರಿ ನಂತರ ಬಿಸಿಲು ಹೆಚ್ಚಾಗುತ್ತದೆ ಎಂಬ ಪ್ರತೀತಿಯನ್ನೂ ಮೀರಿ ಈ ಬಾರಿ ಉಷ್ಣಾಂಶ ಈಗಾಗಲೇ 32 ಡಿಗ್ರಿ ತಲುಪಿದ್ದು, ಪಾದಚಾರಿಗಳು ದಾಹ ತಣಿಸಿಕೊಳ್ಳಲು, ಕಬ್ಬಿನಹಾಲು, ಕಲ್ಲಂಗಡಿ, ಎಳೆನೀರಿಗೆ ಮೊರೆ ಹೋಗುತ್ತಿದ್ದಾರೆ.
ಈ ಬಾರಿ ಕುಡಿಯುವ ನೀರಿಗೆ ಅಷ್ಟಾಗಿ ಸಂಕಷ್ಟ ಎದುರಾಗದಿದ್ದರೂ ಬಿಸಿಲಿನ ಬೇಗೆ ಮಾತ್ರ ಹೆಚ್ಚುತ್ತಿದೆ, ಸುಡು ಬಿಸಿಲಿನಲ್ಲಿ ಬೀದಿಗೆ ಬರಲು ಹೆದರುವ ವಾತಾವರಣ ಕೋಲಾರದಲ್ಲಿ ನಿರ್ಮಾಣವಾಗಿದ್ದು, ದಾಹ ತೀರಿಸಿಕೊಳ್ಳಲು ಜನತೆ ರಸ್ತೆ ಬದಿಯಲ್ಲಿನ ಕಬ್ಬಿನ ಹಾಲು, ಕಲ್ಲಂಗಡಿ ಅಂಗಡಿಗಳಿಗೆ ಮುಗಿ ಬೀಳುತ್ತಿದ್ದಾರೆ.
ನಗರದಲ್ಲೆಡೆ ಕಬ್ಬಿನ ಹಾಲು
ಬಿಸಿಲಿನ ಬೇಗೆಯಿಂದ ತತ್ತರಿಸಿದ ಪಾದಾಚಾರಿಗಳು ತಮ್ಮ ಗಂಟಲನ್ನು ತೇವ ಮಾಡಿಕೊಳ್ಳಲು ಕಬ್ಬಿನ ಹಾಲಿಗೆ ಮೊರೆ ಹೋಗುತ್ತಿದ್ದಾರೆ, ನಗರದ ಪ್ರಭಾತ್ ಚಿತ್ರಮಂದಿರದ ಪಕ್ಕ ತಲೆಯೆತ್ತಿರುವ ಲೋಕೇಶ್ ಕಬ್ಬಿನ ಹಾಲಿನ ಅಂಗಡಿಯಲ್ಲಿ ವಿಶಿಷ್ಟ ಸ್ವಾದದ ಕಬ್ಬಿನ ಹಾಲು ತಯಾರಿಸಿ ನಾಗರೀಕರಿಗೆ ಕಡಿಮೆ ಬೆಲೆಗೆ ವಿತರಿಸುವ ಮೂಲಕ ಹೆಚ್ಚಿನ ಜನರನ್ನು ಸೆಳೆಯುವ ಕೆಲಸವನ್ನು ಮಾಡುತ್ತಿದ್ದಾರೆ.
ಅದೇ ರೀತಿ ನಗರದ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಜ್ಯೂಸ್ ನಾರಾಯಣಸ್ವಾಮಿ ಎಂದೇ ಖ್ಯಾತರಾಗಿರುವ ಲೋಕೇಶ್ ಕಬ್ಬಿನ ಹಾಲು ಮಾರಾಟದಂಗಡಿಗಳು ತಲೆಯೆತ್ತಿದ್ದು, ತಣ್ಣನೆಯ ಕಬ್ಬಿನ ಹಾಲು ನೀಡುತ್ತಾ ಜನರ ದಾಹ ತಣಿಸುವ ಕೆಲಸ ಮಾಡುತ್ತಿದ್ದಾರೆ.
ಕೋಲಾರ ನಗರದಲ್ಲಿ ದೊಡ್ಡಪೇಟೆಯ ಮುಖ್ಯರಸ್ತೆ ಎಂದಾಕ್ಷಣ ಜನಸಂಚಾರ ಇಲ್ಲಿ ಹೆಚ್ಚು ಈ ಭಾಗದ ಪ್ರಭಾತ್ ಚಿತ್ರಮಂದಿರಕ್ಕೆ ಹೊಂದಿಕೊಂಡಂತೆ ಜ್ಯೂಸ್ ಹೆಸರಿನಿಂದಲೇ ಖ್ಯಾತರಾದ ನಾರಾಯಣಸ್ವಾಮಿ ಅವರು ಕಬ್ಬಿನಹಾಲಿನ ಅಂಗಡಿ ಬಿಸಿಲಿನ ಬೇಗೆಗೆ ತತ್ತರಿಸಿರುವ ಜನರನ್ನು ಕೈಬೀಸಿ ಕರೆಯುತ್ತದೆ.
ತಮ್ಮ ಹತ್ತಾರು ವರ್ಷಗಳ ಅನುಭವದಿಂದ ಚಿರಪರಿಚಿತರಾದ ನಾರಾಯಣಸ್ವಾಮಿ ವಿಶಿಷ್ಟ ರೀತಿಯ ಕಬ್ಬಿನ ಹಾಲು ತಯಾರಿಸಿಕೊಡುವಲ್ಲಿ ನಿಸ್ಸೀಮರು. ಆಹ್ಲಾದಕರ ಕಬ್ಬಿನ ಹಾಲು ಪುದೀನಾ, ನಿಂಬೆ, ಶುಂಠಿ, ಅನಾನಸ್ ಮತ್ತಿತರ ಸ್ವಾದಗಳಲ್ಲಿ ಸಿಗುವುದರಿಂದ ಜನತೆ ಇಲ್ಲಿ ಕಬ್ಬಿನ ಹಾಲು ಕುಡಿಯಲು ಮುಗಿ ಬೀಳುತ್ತಾರೆ.
ಜ್ಯೂಸ್ ನಾರಾಯಣಸ್ವಾಮಿ ಹೇಳುವಂತೆ ಅವರು ಹಾಸನ ಜಿಲ್ಲೆಯ ಹೊಳೆ ನರಸೀಪುರದಿಂದ ಕಬ್ಬನ್ನು ನಿರಂತರವಾಗಿ ಖರೀದಿಸಿ ತರುತ್ತಿದ್ದು, ಈ ಕಬ್ಬಿನಲ್ಲಿ ಸಿಹಿಯ ಪ್ರಮಾಣ ಹೆಚ್ಚು ಎಂದು ಹೇಳುತ್ತಾರೆ, ಕಬ್ಬಿನ ಹಾಲು ತಯಾರಿಕೆ ಜಾಗದಲ್ಲಿ ಶುದ್ದತೆಯನ್ನೂ ಕಾಪಾಡಿರುವ ಅವರು, ಕಬ್ಬಿನ ಹಾಲು ಕುಡಿಯಲು ಬರುವವರ ಎದುರಲ್ಲೇ ಕಬ್ಬಿನ ಜಳ್ಳೆಯನ್ನು ಹಿಂಡಿ ರಸ ತೆಗೆದು ಕುಡಿಯಲು ನೀಡುವ ಮೂಲಕ ಈ ಭಾಗದಲ್ಲಿ ಮನೆ ಮಾತಾಗಿದ್ದಾರೆ.
ಬಿಸಿಲಿನ ತಾಪಕ್ಕೆ ಎಷ್ಟು ನೀರು ಕುಡಿದರೂ ದಾಹ ಇಂಗದಿರುವಾಗ ಇಲ್ಲಿನ ಕಬ್ಬಿನ ಹಾಲು ದಾರಿಯಲ್ಲಿ ಸಂಚರಿಸುವವರಿಗೆ ತಂಪು ನೀಡುತ್ತಿದ್ದು, ಅತಿ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ.
ದಾಹ ತಣಿಸಲು ಕಲ್ಲಂಗಡಿ ರಾಶಿ
ನಗರದ ರಂಗಮಂದಿರ ಮುಂಭಾಗ, ಕಾಲೇಜು ವೃತ್ತ, ಬೆಂಗಳೂರು ರಸ್ತೆ, ಹಳೆ ಬಸ್ ನಿಲ್ದಾಣ ಹೀಗೆ ಎಲ್ಲಾ ಕಡೆಗಳಲ್ಲೂ ರಸ್ತೆ ಬದಿಯಲ್ಲಿ ವಿವಿಧ ಜಿಲ್ಲೆ ಹಾಗೂ ರಾಜ್ಯಗಳಿಂದ ಬಂದಿರುವ ಕಲ್ಲಂಗಡಿ ಕಾಯಿಗಳ ರಾಶಿ ಕೈಬೀಸಿ ಕರೆಯುತ್ತಿದೆ.
ನೀರಿನ ಅಂಶ ಹೆಚ್ಚಿರುವ ಕಲ್ಲಂಗಡಿ ಸವಿದು ದಾಹ ತಣಿಸಿಕೊಳ್ಳುವ ಪ್ರಯತ್ನ ಪಾದಾಚಾರಿಗಳು ಮಾಡುತ್ತಿದ್ದು, ಕಲ್ಲಂಗಡಿ ಒಂದು ಕೆಜಿ ದರ 25 ರಿಂದ 30 ರೂವರೆಗೂ ಮಾರಾಟವಾಗುತ್ತಿದೆ.
ಒಟ್ಟಾರೆ ಬಿಸಿಲಿನ ಬೇಗೆಯಲ್ಲಿ ದಾಹ ತೀರಿಸುವ ಕಾರ್ಯದಲ್ಲಿ ಕಬ್ಬಿನ ಹಾಲು,ಕಲ್ಲಂಗಡಿ ಮಾರಾಟ ನಗರದಲ್ಲಿ ಜೋರಾಗಿಯೇ ನಡೆದಿದೆ.