ಕೋಲಾರ:- ಗ್ರಾಪಂ ಸದಸ್ಯನಿಂದ ಸಚಿವರವರೆಗೂ, ಡಿಗ್ರೂಪ್ ನೌಕರನಿಂದ ಅಧಿಕಾರಿವರೆಗೂ ಇಂದು ಯಾವುದೇ ಹುದ್ದೆ ಕಳಂಕರಹಿತವಾಗಿಲ್ಲ ಎಂದು ವಿಷಾದಿಸಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ಎಷ್ಟೇ ದೊಡ್ಡ ಸ್ಥಾನಮಾನ ಸಿಕ್ಕರೂ `ಮೊದಲು ಮಾನವನಾಗು’ ಎಂಬ ದಾಸರ ವಾಣಿ ನೆನಪಿನಲ್ಲಿಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಭಾನುವಾರ ಕೋಲಾರ ಬ್ರಾಹ್ಮಣ ಸಂಘದಿಂದ ನಗರದ ಪಿಸಿ ಬಡಾವಣೆಯ ಗಾಯತ್ರಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿವಿಧ ಶಾಲಾ,ಕಾಲೇಜುಗಳ ತಲಾ ಇಬ್ಬರು ಎಸ್ಸೆಸ್ಸೆಲ್ಸಿ, ಪಿಯುಸಿ ಸಾಧಕರನ್ನು ಪುರಸ್ಕರಿಸಿದ ಅವರು ಕನಕದಾಸರು,ಪುರಂದರರ ದಾಸವಾಣಿಯಂತೆ ಹುದ್ದೆ,ಗೌರವ,ಸಂಪಾದನೆ ಎಲ್ಲವನ್ನೂ ಮೀರಿ ಮೊದಲು ಮಾನವರಾಗಬೇಕು ಎಂದು ಅಭಿಪ್ರಾಯಪಟ್ಟರು.
ಕೋಲಾರ ಜಿಲ್ಲೆಯಲ್ಲಿ ಪ್ರತಿಭಾ ಪುರಸ್ಕಾರ ಎಂಬ ಪರಂಪರೆ ಆರಂಭಗೊಂಡಿದ್ದೇ ಬ್ರಾಹ್ಮಣ ಸಂಘದಿಂದ ಎಂಬುದು ಶ್ಲಾಘನೀಯ ವಿಷಯವಾಗಿದೆ ಜತೆಗೆ ಜಾತಿವಾರು ವಿದ್ಯಾರ್ಥಿಗಳನ್ನು ಕರೆಸಿ ಆಯಾ ಜಾತಿಯವರು ಪ್ರತಿಭಾ ಪುರಸ್ಕಾರ ಮಾಡುವುದನ್ನು ಪ್ರತಿ ವರ್ಷ ಗಮನಿಸುತ್ತಿದ್ದೇವೆ ಇದರಿಂದ ನಾವು ಮಕ್ಕಳಿಗೆ ಯಾವ ಸಂದೇಶ ನೀಡುತ್ತಿದ್ದೇವೆ ಎಂಬು ಆಲೋಚಿಸಬೇಕಾಗಿದೆ ಎಂದರು.
ಆದರೆ ಬ್ರಾಹ್ಮಣ ಸಂಘ ಜಾತಿ,ಧರ್ಮದ ಎಲ್ಲೆಯನ್ನು ಮೀರಿ ಯಾವುದೇ ಜಾತಿ,ಧರ್ಮವಿರಲಿ ಪ್ರತಿ ಶಾಲೆಯ ತಲಾ ಇಬ್ಬರು ಸಾಧಕರನ್ನು ಕರೆಸಿ ಪುರಸ್ಕರಿಸುತ್ತಿರುವುದು ಸಮಾಜಕ್ಕೆ ಆದರ್ಶವಾಗಿದೆ ಎಂದು ಅಭಿನಂದಿಸಿದರು.
ಜಾತಿವಾರು ಪ್ರತಿಭಾ ಪುರಸ್ಕಾರ ಮಾಡುವವರು ಕನಿಷ್ಟ ಜಿಲ್ಲೆಯಲ್ಲಿ ರ್ಯಾಂಕ್ ಪಡೆದ ಯಾವುದೇ ಸಮುದಾಯದ ಸಾಧಕರಾಗಿರಲಿ ಅಂತಹವರನ್ನು ಮಾತ್ರವಾದರೂ ತಮ್ಮ ಸಮುದಾಯದ ವಿದ್ಯಾರ್ಥಿಗಳ ಜತೆಗೆ ಕರೆಸಿ ಪುರಸ್ಕರಿಸಿ ಅವರಿಂದ ಪ್ರೇರಣೆಯ ಮಾತುಗಳನ್ನಾಡಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ನಿಮ್ಮ ಪರಿಶ್ರಮ,ಛಲ.ಶ್ರದ್ಧೆಯ ಪ್ರತಿಫಲವಾಗಿ ಸಿಗುವ ಹುದ್ದೆ ಕೇವಲ ಸಂಪಾದನೆಗೆ ಸೀಮಿತವಾಗದಿರಿಲಿ, ಸಂಪತ್ತು ಮಿತಿ ಮೀರಿದರೆ ಚಟಗಳಿಗೆ ದಾಸರಾಗುತ್ತೀರಿ, ಜತೆಗೆ ಸಮಾಜಕ್ಕೆ ಕಂಟಕರಾಗುತ್ತೀರಿ ಎಂದು ಎಚ್ಚರಿಸಿದ ಅವರು, ವಿದ್ಯಾರ್ಥಿಗಳು ಸಮಾಜದ ಆಸ್ತಿಯಾಗಬೇಕು, ದೇಶಪ್ರೇಮ ರೂಢಿಸಿಕೊಂಡು ಮತ್ತೊಬ್ಬರಿಗೆ ನೆರವಾಗಬೇಕು ಎಂದರು.
ಹಣ,ಆರೋಗ್ಯಕ್ಕಿಂತ
ವ್ಯಕ್ತಿತ್ವ ಅತಿ ಮುಖ್ಯ
ಬೆಂಗಳೂರಿನ ಚಾರ್ಟರ್ಡ್ ಅಕೌಂಟೆಂಟ್ ವಿ.ಶ್ರೀಪತಿ ಮಾರ್ಗದರ್ಶನ ಭಾಷಣ ಮಾಡಿ, ಹಣ, ಆರೋಗ್ಯ ಏನೇ ಕಳೆದುಕೊಂಡರೂ ಸಂಪಾದಿಸಿ ಪಡೆಯಬಹುದು ಆದರೆ ವ್ಯಕ್ತಿತ್ವ,ನಡತೆ ಕಳೆದುಕೊಂಡರೆ ಖಂಡಿತಾ ಮತ್ತೆ ಪಡೆಯಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ಪೋಷಕರ ಒತ್ತಡ, ಹಿರಿಯರ ಸಲಹೆ ಎಲ್ಲದರ ನಡುವೆ ನೀವು ಯೋಚಿಸಿ ಉತ್ತಮವಾದುದುನ್ನು ಆಯ್ಕೆ ಮಾಡಿಕೊಂಡು ಶ್ರದ್ಧೆ,ಛಲದೊಂದಿಗೆ ಓದಿ, ಗುರಿ ಸಾಧನೆಗೆ ನಿಮ್ಮ ದಾರಿ ಅಚಲವಾಗಿರಬೇಕು ಎಂದ ಅವರು, ಜೀವನದಲ್ಲಿ ಸಾಧನೆಯ ಹಾದಿಯಲ್ಲಿ ಸಾಗುವಾಗ ಸೋಲು ಎದುರಾದರೆ ವಿಚಲಿತರಾಗದೇ ಹಿರಿಯರೊಂದಿಗೆ ಚರ್ಚಿಸಿ, ಚರ್ಚೆಯಿಂದ ಜ್ಞಾನ ವೃದ್ದಿಯಾಗುತ್ತದೆ ಎಂದು ಸಲಹೆ ನೀಡಿದರು.
ಐದು ವರ್ಷಗಳ ನಿಮ್ಮ ಶ್ರದ್ದೆ,ಕಷ್ಟದ ಬದುಕು ನಿಮಗೆ 50 ವರ್ಷ ಸುಖಮಯ ಜೀವನ ನೀಡುತ್ತದೆ ಆದ್ದರಿಂದ ನೀವು ಓದುವ ಹಂತದಲ್ಲಿ ಕಷ್ಟವನ್ನು ಮೆಟ್ಟಿ ನಿಲ್ಲುವುದನ್ನು ಸವಾಲಾಗಿ ಸ್ವೀಕರಿಸಿ ಮುನ್ನಡೆಯಬೇಕು, ಯಾವುದೇ ಕೋರ್ಸ್ ಇರಲಿಬದ್ದತೆ, ಶ್ರದ್ಧೆ ಸಾಧನೆಗೆ ದಾರಿ ತೋರುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೋಲಾರ ಬ್ರಾಹ್ಮಣ ಸಂಘದ ಅಧ್ಯಕ್ಷ ಹೆಚ್.ಉದಯಕುಮಾರ್, ಈಗ ಶಾಲೆಗೆ ಮೊದಲಿಗರಾಗಿ ಸಾಧನೆ ಮಾಡಿದ್ದೀರಿ, ನಿಮ್ಮ ಮುಂದಿನ ಜೀವನದಲ್ಲಿ ಸಂಸ್ಕಾರದೊಂದಿಗೆ ಮತ್ತಷ್ಟು ಉನ್ನತ ಸ್ಥಾನಕ್ಕೆ ಹೋಗಿ, ನಿಮ್ಮ ಹಾದಿಯಲ್ಲಿ ಪ್ರಗತಿ ಸಾಧಿಸಿದ ನಂತರ ಕಷ್ಟದಲ್ಲಿರುವವರಿಗೂ ನೆರವಾಗಿ ಎಂದು ಕಿವಿಮಾತು ಹೇಳಿದರು.ಲ
ಪುರಸ್ಕಾರ ಸ್ವೀಕರಿಸಿದ ವಿದ್ಯಾರ್ಥಿಗಳಾದ ಮಹಮದ್ ಖಾನ್, ಹಿಲಿಯಾ ಮಾತನಾಡಿ,ಬ್ರಾಹ್ಮಣ ಸಂಘ ನಮಗೆ ಸಾಮಾಜಿಕ ಜವಾಬ್ದಾರಿ ನೆನಪಿಸಿದೆ, ನಮ್ಮ ಬದುಕಿನ ಹಾದಿ ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬುದನ್ನು ವೇದಿಕೆಯಲ್ಲಿನ ಗಣ್ಯರು ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಧನ್ಯವಾದ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ನಿರೂಪಿಸಿದ ವೇದ ಸಂಸ್ಕøತ ಪಾಠಶಾಲೆ ಗುರುಗಳಾದ ರಾಮಕೃಷ್ಣಭಟ್ಟರು, ಅಹಂಕಾರ ತಲೆಗೆ ಹತ್ತಬಾರದು, ಶಿಕ್ಷಣದೊಂದಿಗೆ ವಿನಯ, ಸಂಸ್ಕಾರವಿರಲಿ, ಸಮಾಜಕ್ಕೆ ನೀವೂ ಕೊಡುಗೆ ನೀಡಿ, ಸಮಾಜ ಗುರುತಿಸುವಂತೆ ನಿಮ್ಮ ನಡತೆ ಇರಲಿ ಎಂದು ಹಾರೈಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಿವಶಂಕರ್, ಬ್ರಾಹ್ಮಣ ಸಂಘ ನಡೆದು ಬಂದ ಹಾದಿಯನ್ನು ಪರಿಚಯಿಸಿ,45 ವರ್ಷಗಳಿಂದಲೂ ಪ್ರತಿಭಾ ಪುರಸ್ಕಾರ ಮಾಡುತ್ತಿದ್ದು, ಸಾಮೂಹಿಕ ಉಪನಯನ, ರಕ್ತದಾನ ಶಿಬಿರ ಮತ್ತಿತರ ಸಾಮಾಜಿಕ ಕಾರ್ಯಗಳನ್ನು ನಡೆಸಿಕೊಂಡು ಬಂದಿದೆ ಎಂದರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿಯ 67 ಹಾಗೂ ಪಿಯುಸಿಯ 36 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ವಕೀಲ ಸವಿನಯ್ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಪಿ.ಚಂದ್ರಪ್ರಕಾಶ್, ಡಾ.ಕೃಷ್ಣಮೂರ್ತಿ, ಶಂಕರಮಠದ ಧರ್ಮಾಧಿಕಾರಿ ಜೆ.ಎನ್.ರಾಮಕೃಷ್ಣ,ರವಿಶಂಕರ್ ಅಯ್ಯರ್, ಕಂಪ್ಯೂಟರ್ ಅಮರ್, ಎಸ್.ಪ್ರವೀಣ್, ಲಕ್ಷ್ಮೀಪ್ರಸಾದ್,ವರುಣ್ ಕುಮಾರ್, ಕೃಷ್ಣ, ವಿನೋದ ಮಧುಕರ್ ಮತ್ತಿತರರು ಉಪಸ್ಥಿತರಿದ್ದು ಶ್ರೀನಿಧಿ ವಂದಿಸಿದರು.