ಕೋಲಾರ:- ಸಾರ್ವಜನಿಕರಿಗೆ ಅಗತ್ಯ ಮೂಲ ಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿರುವ ಜಿಲ್ಲಾಡಳಿತದ ವಿರುದ್ದ ಪ್ರಗತಿಪರ ಸಂಘಟನೆಗಳು ಇಂದು ಕೋಲಾರ ಬಂದ್ ನಡೆಸಿ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದರು.
ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದಲೇ ಬಂದ್ ಯಶಸ್ಸಿಗಾಗಿ ಬೈಕ್ ರ್ಯಾಲಿ ನಡೆಸಿದ ಸಂಘಟಕರು, ನಗರದಾದ್ಯಂತ ಸಂಚರಿಸಿ ಬಂದ್ಗೆ ಬೆಂಬಲ ಕೋರಿದರು.
ಈ ಹಿನ್ನಲೆಯಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು, ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಚಿತ್ರಮಂದಿರ,ಹೋಟೆಲ್ ಬಂದ್ ಆಗಿದ್ದು, ಬಸ್ ಸಂಚಾರ ಕೆಲವೊತ್ತು ನಿಂತಿತ್ತಾದರೂ ನಂತರ ಸಹಜ ಸ್ಥಿತಿಗೆ ಬಂತು. ಆಟೋ ಸಂಚಾರ ಯಥಾಸ್ಥಿತಿಯಲ್ಲಿತ್ತು.
ನಗರದ ವಿವಿಧ ಪ್ರದೇಶಗಳಲ್ಲಿ ವರ್ತಕರು, ಸಂಘ ಸಂಸ್ಥೆಗಳು ಸ್ವಯಂಪ್ರೇರಿತರಾಗಿ ಸಹಕಾರ ನೀಡುವ ಮೂಲಕ ಬಂದ್ ಬೆಂಬಲಿಸಿದ್ದು ವಿಶೇಷವಾಗಿತ್ತು.
ಸಾರಿಗೆ ಡಿಪೋಗೆ ಪೊಲೀಸ್ ಬಂದೋಬಸ್ತ್
ಬೆಳಗ್ಗೆ ಸಾರಿಗೆ ಸಂಸ್ಥೆಯ ಡಿಪೋಗೆ ನುಗ್ಗಲು ಯತ್ನಿಸಿದ ಪ್ರಗರಿಪರ ಸಂಘಟನೆಗಳ ಮುಖಂಡರ ಪ್ರಯತ್ನವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್ ನೇತೃತ್ವದಲ್ಲಿ ಪೊಲೀಸರು ವಿಫಲಗೊಳಿಸಿ ಕಳುಹಿಸಿದರು. ಬೆಳಗ್ಗೆ 11 ಗಂಟೆಯವರೆಗೂ ಬಸ್ ಸಂಚಾರ ನಿಂತಿತ್ತಾದರೂ ನಂತರ ನಿಧಾನವಾಗಿ ಆರಂಭಗೊಂಡಿತು.
ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರಕ್ಕೆ ತಡೆಯೊಡ್ಡಿದ ಪ್ರತಿಭಟನಾಕಾರರು ಕೆಲವು ಕಡೆ ತೆರೆದಿದ್ದ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸುವ ಕೆಲಸವನ್ನೂ ಮಾಡಿದರು.
ಹಳ್ಳಕೊಳ್ಳಗಳ ರಸ್ತೆ-ಆಕ್ರೋಷ
ಬೈಕ್ ರ್ಯಾಲಿ ನಂತರ ಬಸ್ ನಿಲ್ದಾಣ ವೃತ್ತದಲ್ಲಿ ರಸ್ತೆ ಬಂದ್ ಮಾಡಿ ಮಾತನಾಡಿದ ಪ್ರಗತಿಪರ ಸಂಘಟನೆಗಳ ಮುಖಂಡ ಹೊಳಲಿ ಪ್ರಕಾಶ್, ನಗರದಲ್ಲಿ ಪ್ರಮುಖ ಎರಡು ರಸ್ತೆಗಳು ಹೊರತು ಪಡಿಸಿ ಯಾವೂದೇ ರಸ್ತೆಗಳು ಸಂಚರಿಸಲು ಯೋಗ್ಯವಾಗಿಲ್ಲ. ಸಮರ್ಪಕವಾದ ಚರಂಡಿಗಳಿಲ್ಲ, ಸ್ವಚ್ಚತೆ ಇಲ್ಲ, ಬೀದಿ ದೀಪಗಳಿಲ್ಲ. ಕೆ.ಸಿ.ವ್ಯಾಲಿ ನೀರು ಮೂರನೆ ಹಂತದ ಸಂಸ್ಕರಣೆ ಇಲ್ಲ, ಸೇರಿದಂತೆ ಸಾರ್ವಜನಿಕರಿಗೆ ಅಗತ್ಯವಾದ ಮೂಲಭೂತಸೌಲಭ್ಯಗಳನ್ನು ಕಲ್ಪಿಸಲು ಜಿಲ್ಲಾಡಳಿತ ವಿಫಲವಾಗಿದೆ, ಮನವಿಸಲ್ಲಿಸಿದರೂ ಪ್ರಯೋಜನವಾಗಿಲ್ಲ ಈ ಹಿನ್ನಲೆಯಲ್ಲಿ ಬಂದ್ ಅನಿವಾರ್ಯವಾಯಿತು ಎಂದರು.
ಜಿಲ್ಲಾಡಳಿತವು ಪೊಲೀಸರನ್ನು ಮುಂದೆ ಮಾಡಿ ಕೊಂಡು ಪ್ರತಿಭಟನಕಾರರನ್ನು ಬೆದರಿಸುವ ತಂತ್ರ ನಡೆಸಿದೆ ಆದರೆ ನಗರದ ಜನತೆ ಸ್ವಯಂಪ್ರೇರಿತರಾಗಿ ಬೆಂಬಲ ನೀಡಿದ್ದಾರೆ, ನಮ್ಮ ಹೋರಾವು ಅಭಿವೃದ್ದಿ ಪರವಾಗಿದೆ ಹೊರತು ಯಾರದೆ ವೈಯುಕ್ತಿಕ ವಿಷಯಗಳಿಗೆ, ಯಾರಿಗೂ ಲಾಭ ಮಾಡಿ ಕೊಡುವ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದರು.
ಜಿಲ್ಲಾಡಳಿತ ಕಚೇರಿಯಲ್ಲಿ ಉದ್ಘಾಟನೆ ಮಾಡಿದ ಒಂದೇ ವಾರಕ್ಕೆ ಲಿಫ್ಟ್ ಕೆಟ್ಟಿತು, ಶೌಚಾಲಗಳು ಬೀಗ ಜಡಿದಿದ್ದವು, ಕುಡಿಯುವ ನೀರಿನ ಅವ್ಯವಸ್ಥೆಗಳಿತ್ತು, ಜಿಲ್ಲಾ ಕಚೇರಿಗೆ ಸಮರ್ಪಕವಾದ ಸಾರಿಗೆ ವ್ಯವಸ್ಥೆ ಇಲ್ಲ, ಇಷ್ಟೆಲ್ಲ ಅವ್ಯವಸ್ಥೆಗಳಿದ್ದರೂ ಸಹ ಯಾವುದೇ ಕ್ರಮ ಕೈಗೊಳ್ಳದ ಜಿಲ್ಲಾಡಳಿತ ಇನ್ನು ಎಷ್ಟು ಮಾತ್ರ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲಿದೆ ಎಂದು ಕಿಡಿಕಾರಿದರು.
ಯಾವುದೇ ಅಹಿತಕರ ಘಟನೆಗೆ ಅವಕಾಶವಿಲ್ಲದಂತೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಿ.ದೇವರಾಜ್ ನೇತೃತ್ವದಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಪ್ರತಿಭಟನೆಯಲ್ಲಿ ಜೆ.ಡಿ.ಎಸ್ ಮುಖಂಡ ಸಿ.ಎಂ.ಆರ್. ಶ್ರೀನಾಥ್, ಬಣಕನಹಳ್ಳಿ ನಟರಾಜ್, ಕುರುಬರಪೇಟೆ ವೆಂಕಟೇಶ್, ದಲಿತ್ ನಾರಾಯಣಸ್ವಾಮಿ, ರೈತ ಮುಖಂಡ ಅಬ್ಬಣಿ ಶಿವಪ್ಪ, ನಾರಾಯಣಗೌಡ, ಸದಾನಂದ, ನಾಗಭೂಷಣ್, ಟಿಪ್ಪುಸೆಕ್ಯುಲರ್ ಸೇನೆ ಆಸೀಫ್. ಕನ್ನಡಮಿತ್ರ ವೆಂಕಟಪ್ಪ, ಕಲ್ವಮಂಜಲಿ ರಾಮು ಶಿವಣ್ಣ, ಅಲ್ಪಸಂಖ್ಯಾತರ ಯುವ ಮುಖಂಡ ಇಮ್ರಾನ್, ರೋಟರಿ ಗೋಪಾಲ್. ಅಡುಗೆ ಸಂಘಟನೆಯ ರಮೇಶ್ ಮತ್ತಿತರರು ಹಾಜರಿದ್ದರು.