ಕೋಲಾರ:- ಡಿಸಿಸಿ ಬ್ಯಾಂಕ್ ಹಾಗೂ ಪ್ಯಾಕ್ಸ್‍ಗಳ ಮೂಲಕ ಯಶಸ್ವಿನಿ ಯೋಜನೆ ನೋಂದಣಿಯನ್ನು ಅಂದೋಲನವಾಗಿ ಮಾಡಿ, ಅವಿಭಜಿತ ಜಿಲ್ಲೆಯ 7 ಲಕ್ಷ ಮಹಿಳೆಯರ ಮನೆ ಬಾಗಿಲಿಗೆ ಆರೋಗ್ಯಭಾಗ್ಯದ ಸೌಲಭ್ಯ ತಲುಪಿಸಿ ಎಂದು ಬ್ಯಾಂಕ್ ಹಾಗೂ ಸೊಸೈಟಿ ಸಿಬ್ಬಂದಿಗೆ ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಕರೆ ನೀಡಿದರು.
ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಯಶಸ್ವಿನಿ ಯೋಜನೆ ಅನುಷ್ಟಾನದ ಕುರಿತು ಪ್ಯಾಕ್ಸ್‍ಗಳು ಹಾಗೂ ಡಿಸಿಸಿ ಬ್ಯಾಂಕಿನ ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ಶಾಖೆಗಳ ಸಿಬ್ಬಂದಿಯೊಂದಿಗೆ ಹಮ್ಮಿಕೊಂಡಿದ್ದ ಆನ್‍ಲೈನ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಡಿಸಿಸಿ ಬ್ಯಾಂಕ್ ವ್ಯಾಪ್ತಿಯಲ್ಲಿ ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಸುಮಾರು 7 ಲಕ್ಷ ಮಹಿಳೆಯರು ಸದಸ್ಯತ್ವ ಹೊಂದಿ ಸಾಲ ಪಡೆದುಕೊಂಡಿದ್ದಾರೆ, ಇದರಲ್ಲಿ ಹರಿಜನ,ಗಿರಿಜನ, ಹಿಂದುಳಿದ ಕುಟುಂಬಗಳ ಮಹಿಳೆಯರೇ ಹೆಚ್ಚಿದ್ದು, ಯಶಸ್ವಿನಿ ಯೋಜನೆಯಿಂದಾಗಿ ಇಷ್ಟೊಂದು ಕುಟುಂಬಗಳ ಆರೋಗ್ಯ ರಕ್ಷಣೆಗೆ ಅನುಕೂಲವಾಗಲಿದೆ ಎಂದರು.
ಪ್ರತಿ ಮಹಿಳೆ ತಲಾ 500 ರೂ ನೀಡಿ ನೋಂದಾವಣೆ ಮಾಡುವುದರಿಂದ ಅವರ ಕುಟುಂಬದ ನಾಲ್ವರಿಗೆ ಯಶಸ್ವಿನಿ ಯೋಜನೆಯಡಿ 5 ಲಕ್ಷದವರೆಗೂ ಸುಮಾರು 1600ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ಸಿಗಲಿದ್ದು, ನೋಂದಾಯಿಸಿ ಕಾರ್ಡ್ ಪಡೆದ 15 ದಿನಗಳ ನಂತರ ಚಿಕಿತ್ಸೆಗೆ ಅರ್ಹರಾಗುತ್ತಾರೆ ಎಂದು ತಿಳಿಸಿದರು.
ರಾಜ್ಯ ಸರ್ಕಾರದ ಆಯುಷ್ಮಾನ್ ಆರೋಗ್ಯ ಕಾರ್ಡ್‍ನಡಿ ಚಿಕಿತ್ಸೆ ಅಗತ್ಯವಿದ್ದಲ್ಲಿ ಸರ್ಕಾರಿ ಆಸ್ಪತ್ರೆಯಿಂದ ಶಿಫಾರಸ್ಸುಗೊಂಡು ಹೋದರೆ ಮಾತ್ರವೇ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಸಿಗಲಿದೆ ಆದರೆ ಯಶಸ್ವಿನಿ ಯೋಜನೆಯಲ್ಲಿ ಫಲಾನುಭವಿಗಳು ನೇರವಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ ನಗದು ರಹಿತ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಎರಡೂ ಜಿಲ್ಲೆಗಳ ಸುಮಾರು ಆರೂವರೆ ಲಕ್ಷ ಹೆಣ್ಣು ಮಕ್ಕಳು, 50 ಸಾವಿರಕ್ಕೂ ಹೆಚ್ಚು ರೈತರು ಡಿಸಿಸಿ ಬ್ಯಾಂಕ್ ಹಾಗೂ ಅದರಡಿಯ ಪ್ಯಾಕ್ಸ್‍ಗಳ ಮೂಲಕ ಸದಸ್ಯತ್ವ ಪಡೆದು ಸಾಲ ಸೌಲಭ್ಯ ಪಡೆದುಕೊಂಡಿದ್ದಾರೆ, ಇವರೆಲ್ಲರೂ ಇಂದು ಯಶಸ್ವಿನಿ ಯೋಜನೆಯಡಿ ನೋಂದಾಯಿಸಲು ಅರ್ಹತೆ ಪಡೆದುಕೊಂಡಿದ್ದು, ನಾಲ್ವರು ಇರುವ ಕುಟುಂಬಕ್ಕೆ 500 ರೂ ಹಾಗೂ ಇನ್ನು ಹೆಚ್ಚಿನ ಸಂಖ್ಯೆಯಿದ್ದರೆ ತಲಾ 100 ರೂ ನೀಡಿ ನೋಂದಣಿ ಮಾಡಿಸಬಹುದಾಗಿದ್ದು, ಮಹಿಳೆಯರು,ರೈತರಿಗೆ ಯಶಸ್ವಿನಿ ಯೋಜನೆ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ಪ್ಯಾಕ್ಸ್ ಹಾಗೂ ಬ್ಯಾಂಕ್ ಸಿಬ್ಬಂದಿ ಮಾಡಬೇಕು ಎಂದು ತಾಕೀತು ಮಾಡಿದರು.
ಈ ಯೋಜನೆ ರೈತಾಪಿ ವರ್ಗ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳಿಗೆ ಅನುಕೂಲಕರವಾಗಿದ್ದು, ಇಂದಿನ ಪರಿಸ್ಥಿತಿಯಲ್ಲಿ ಆರೋಗ್ಯ ರಕ್ಷಣೆಗೆ ಹೆಚ್ಚು ಸಹಕಾರಿಯಾಗಿದೆ. ಸಾಮಾನ್ಯವಾಗಿ ಡಿಸಿಸಿ ಬ್ಯಾಂಕ್ ಹಾಗೂ ಪ್ಯಾಕ್ಸ್‍ಸೊಸೈಟಿಗಳ ಮೂಲಕ ಸಾಲ ಪಡೆದ ಎಲ್ಲಾ ಮಹಿಳೆಯರು ಬಿಪಿಎಲ್ ಕುಟುಂಬಗಳಿಂದಲೇ ಬಂದವರಾಗಿದ್ದು, ವಿವಿಧ ಆರೋಗ್ಯ ಸಮಸ್ಯೆಗಳಿಂದ ಹಲವಾರು ಮಂದಿ ನರಳುತ್ತಿದ್ದಾರೆ ಇಂತಹ ಕುಟುಂಬಗಳ ಜೀವನ ಹಾಗೂ ಆರೋಗ್ಯ ರಕ್ಷಣೆಗೆ ಯಶಸ್ವಿನಿ ಯೋಜನೆ ಸಹಕಾರಿ ಎಂದರು.
ಡಿಸಿಸಿ ಬ್ಯಾಂಕಿನಿಂದ
ವಿಶೇಷ ಆಂದೋಲನ
ಸ್ತ್ರೀ ಶಕ್ತಿ ಸಂಘಗಳಿಗೆ ಮತ್ತು ರೈತರಿಗೆ ಸಾಲ ನೀಡುವ ಸಂದರ್ಭದಲ್ಲೇ ಡಿಸಿಸಿ ಬ್ಯಾಂಕ್ ಹಾಗೂ ಪ್ಯಾಕ್ಸ್‍ಗಳ ಸಿಬ್ಬಂದಿ ಯಶಸ್ವಿನಿ ಯೋಜನೆಗೆ ನೋಂದಣಿ ಮಾಡಿಸಿದ ನಂತರವೇ ಸಾಲ ಒದಗಿಸುವ ಭರವಸೆ ನೀಡಿ, ಇದರಿಂದ ಬಡವರ ಬದುಕು ಹಸನಾಗಲಿದೆ, ವಿವಿಧ ಕಾಯಿಲೆಗಳಿಂದ ಬಳಲುತ್ತಾ, ಆಸ್ಪತ್ರೆಗೆ ಹೋಗಲು ಕಾಸಿಲ್ಲದೇ ಪರದಾಡುತ್ತಿರುವ ಕುಟುಂಬಗಳಿಗೆ ಇದು ಸಂಜೀವಿನಿಯಾಗಿ ಬಳಕೆಯಾಗಲಿ ಎಂದರು.
ಯಶಸ್ವಿನಿ ನೋಂದಣಿ ಕಾರ್ಯವನ್ನು ಡಿಸಿಸಿ ಬ್ಯಾಂಕ್ ಆಂದೋಲನವಾಗಿ ಮಾಡಲು ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಅವರು, ಸಿಬ್ಬಂದಿಯ ಸಹಕಾರ ಕೋರಿದರು.
ಸಹಕಾರ ಸಂಘಗಳ ಉಪನಿಬಂಧಕ ನಾಗರಾಜ್ ಯಶಸ್ವಿನಿ ಯೋಜನೆಯಡಿ ನೋಂದಣಿ, ಇದರ ಸೌಲಭ್ಯಗಳು, ಇದರಿಂದಾಗುವ ಪ್ರಯೋಜನ ನಗದು ರಹಿತ ಚಿಕಿತ್ಸೆ ಪಡೆಯುವ ವಿಧಾನ ಮತ್ತಿತರ ಮಾಹಿತಿ ಒದಗಿಸಿ. ವರ್ಷಕ್ಕೆ ಗರಿಷ್ಟ 5 ಲಕ್ಷ ರೂಗಳವರೆಗೂ ಯಶಸ್ವಿನಿಯೋಜನೆಯ ಫಲಾನುಭವಿಗಳು ಯಶಸ್ವಿನಿ ನೆಟ್‍ವರ್ಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಡಿಸಿಸಿ ಬ್ಯಾಂಕ್ ಎಜಿಎಂಗಳಾದ ಶಿವಕುಮಾರ್, ಹುಸೇನ್ ದೊಡ್ಡಮುನಿ, ಅರುಣ್ ಪ್ರಸಾದ್, ಬೈರೇಗೌಡ, ಹ್ಯಾರೀಸ್,ಪದ್ಮಮ್ಮ ಮತ್ತಿತರರು ಉಪಸ್ಥಿತರಿದ್ದರು.