ಕೋಲಾರ : ವ್ಯಕ್ತಿಯ ಕೊಲೆ ಪ್ರಕರಣದಲ್ಲಿ 4 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 2 ಲಕ್ಷ 32 ಸಾವಿರ ರೂ. ದಂಡ ವಿಧಿಸಿ ಇಲ್ಲಿನ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತೀರ್ಪುನೀಡಿದೆ.
ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 06-06-2017 ರಂದು ಆವಣಿ ಗ್ರಾಮದ ನಾಗಭೂಷಣ್ ಎಂಬುವರನ್ನು ಆಸ್ತಿ ವಿವಾದದ ಹಿನ್ನಲೆಯಲ್ಲಿ ಕೊಲೆ ಮಾಡಲಾಗಿತ್ತು, ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಅದೇ ಗ್ರಾಮದ ನಾರಾಯಣಸ್ವಾಮಿ, ಗೋಪಾಲ್, ಸುರೇಶ್, ಶಿವಪ್ಪ ಈ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ. ಇದರಲ್ಲಿ ಭಾಗಿಯಾಗಿದ್ದ ವೆಂಕಟರವಣಪ್ಪ ಎಂಬುವರು ಮೃತರಾಗಿದ್ದು ಹಾಗೂ ವೆಂಕಟೇಶಪ್ಪ ಎಂಬುವರು ಆರೋಪ ಸಾಭೀತಾಗದ ಹಿನ್ನಲೆಯಲ್ಲಿ ಬಿಡುಗಡೆಯಾಗಿದ್ದಾರೆ.
ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದ ಅಂದಿನ ಸಿಪಿಐ ಸುಧಾಕರ್ರೆಡ್ಡಿ ಅವರು ಐ.ಪಿ.ಸಿ. 143, 147, 120 ಬಿ, 302 ಹಾಗೂ 149 ಸೆಕ್ಷನ್ ಅನ್ವಯ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದರು. ಕೊಲೆಯಾದ ವ್ಯಕ್ತಿಯ ಮಗ ಅನಿಲ್ಕುಮಾರ್ ದೂರು ದಾಖಲಿಸಿದ್ದರು.
ನ್ಯಾಯಾಲಯದಲ್ಲಿ ಸುಧೀರ್ಘವಾದ ವಾದ – ವಿವಾದ ನಡೆದು, ಈ ಪ್ರಕರಣದಲ್ಲಿ 63 ಸಾಕ್ಷಿಗಳ ಪೈಕಿ 33 ಮಂದಿ ಕೋರ್ಟಿಗೆ ಹಾಜರಾಗಿ ಸಾಕ್ಷಿ ನುಡಿದಿದ್ದರು. ಆರೋಪಿಗಳ ಮೇಲೆ ಆರೋಪ ಸಾಬೀತಾದ ಹಿನ್ನಲೆಯಲ್ಲಿ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲದ ನ್ಯಾಯಾಧೀಶರಾದ ಪಿ.ಕೆ.ದಿವ್ಯ ಅವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 2 ಲಕ್ಷ 32 ಸಾವಿರ ರೂ. ದಂಡ ವಿಧಿಸಿ ಇದರಲ್ಲಿ ಮೃತ ವ್ಯಕ್ತಿಯ ಮಗ ಮತ್ತು ಪತ್ನಿಗೆ ತಲಾ 1 ಲಕ್ಷ ರೂ. ಪರಿಹಾರ ಹಾಗೂ 32 ಸಾವಿರ ರೂ. ನ್ಯಾಯಾಲಯದ ಶುಲ್ಕವಾಗಿ ಸರ್ಕಾರಕ್ಕೆ ಪಾವತಿಸುವಂತೆ ತೀರ್ಪು ನೀಡಿದ್ದಾರೆ.
ಮೃತ ವ್ಯಕ್ತಿಯ ಪರವಾಗಿ ಸರ್ಕಾರಿ ಅಭಿಯೋಜಕಿ ಕೆ.ಎಸ್. ಜ್ಯೋತಿಲಕ್ಷ್ಮಿ ಅವರು ವಾದ ಮಂಡಿಸಿದರು.