

ಕುಂದಾಪುರ: ವಿದ್ಯೆ ಮತ್ತು ಬುದ್ಧಿ ಒಂದೆ ಗಾಡಿಯ ಎರಡು ಚಕ್ರಗಳಿದ್ದಂತೆ. ಒಂದನ್ನು ಇನ್ನೊಂದು ಅನುಸರಿಸಿ ಸಾಗಬೇಕು ಎಂದು ಮಂಗಳೂರು ವಿಶ್ವವಿದ್ಯಾಲಯ ಉಪಕುಲಪತಿ ಡಾ.ಪಿ.ಎಸ್ ಯಡಪಡಿತ್ತಾಯ ಅಭಿಪ್ರಾಯಪಟ್ಟರು.
ಅವರು ಆಗಸ್ಟ್ 13ರಂದು ಭಂಡಾರ್ಕಾರ್ಸ್ ಕಾಲೇಜಿನ ” ವಜ್ರಮಹೋತ್ಸವ ಕಾರ್ಯಕ್ರಮಗಳ ಉದ್ಘಾಟಸಿ, ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಡಾ.ಹೆಚ್.ಶಾಂತಾರಾಮ್ ಅವರ 95ನೇ ಹುಟ್ಟಿದ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಒಳಗಿನ ಕಣ್ಣನು ತೆರೆದು ಯೋಚಿಸಬೇಕು.ಅಹಂಕಾರ ಸಲ್ಲದು. ಮುಖ್ಯವಾಗಿ ತಾಳ್ಮೆ, ಸಕಾರಾತ್ಮಕತೆ ಮತ್ತು ಸ್ವಶಿಸ್ತು ಅತ್ಯಂತ ಮುಖ್ಯ ಎಂದು ಹೇಳಿದರು. 60ರ ಸಂಭ್ರಮದಲ್ಲಿರುವ ಭಂಡಾರ್ಕಾರ್ಸ್ ಕಾಲೇಜು ಶೈಕ್ಷಣಿಕವಾಗಿ ಮಾತ್ರವಲ್ಲದೇ ತನ್ನ ಸಾಂಸ್ಕೃತಿಕ, ಕ್ರೀಡಾ ಸಾಧನೆಗಳಿಂದ ಗುರುತಿಸಿಕೊಂಡಿದೆ. ಕಾಲೇಜಿನ ಪ್ರತಿ ಸಾಧನೆಯ ಹಿಂದೆ ಆಡಳಿತ ಮಂಡಳಿ, ಶಿಕ್ಷಕರು, ಶಿಕ್ಷಕೇತರರು ಮತ್ತು ವಿದ್ಯಾರ್ಥಿಗಳ ಪಾತ್ರ ಬಹಳವಿದೆ. ಪ್ರತಿ ಬಾರಿ ಕಾಲೇಜು ತನ್ನ ಸಾಧನೆಯಲ್ಲಿ ಒಂದು ಹೆಜ್ಜೆ ಮುಂದೆ ಇರುತ್ತದೆ ಇಲ್ಲಿನ ಜನರ ಹೃದಯ ಶ್ರೀಮಂತಿಕೆ ಮೆಚ್ಚತಕ್ಕದ್ದು. ಈ ಮಣ್ಣಿನ ವಾಸನೆ ಗಟ್ಟಿಮಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ಅಧ್ಯಕ್ಷರಾದ ಡಾ.ಹೆಚ್.ಎಸ್.ಬಲ್ಲಾಳ್ ಮಾತನಾಡಿ ವಜ್ರಮಹೋತ್ಸವ ಪ್ರತೀಕ ಚಿಹ್ನೆಯನ್ನು (logo) ಎನ್ನುವುದು ಯಾವುದೇ ಸಂಸ್ಥೆಯ ಸಾಧನೆಗಳಲ್ಲಿ ವಿಶಿಷ್ಟ ಮೈಲಿಗಲ್ಲಾಗಿದೆ. ಇಷ್ಟೊಂದು ಸಾಧನೆಗಳಲ್ಲಿ ಕಟ್ಟಡ ಸೌಲಭ್ಯಗಳಿಗಿಂತ ಇಲ್ಲಿನ ಶಿಕ್ಷಕರು, ಮತ್ತು ವಿದ್ಯಾರ್ಥಿಗಳ ಪಾತ್ರ ಬಹಳವಿದೆ. ವಿದ್ಯಾರ್ಥಿಗಳು ಕೇವಲ ಪಾಠವಲ್ಲದೇ ಪಾಠೇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ಅತಿ ಮುಖ್ಯ ಎಂದು ಹೇಳಿದರು.
ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಗೆ ಭಾಜನವಾದ ಮಾಕೋನ ಏಕಾಂತ ಕಥಾ ಸಂಕಲನದ ಲೇಖಕಿ ಕಾವ್ಯ ಕಡಮೆಯವರ ಅನುಪಸ್ಥಿತಿಯಲ್ಲಿ ಅವರ ತಾಯಿ ತಂದೆ ಸುನಂದಾ ಕಡಮೆ ಮತ್ತು ಪ್ರಕಾಶ್ ಕಡಿಮೆ ಪ್ರಶಸ್ತಿ ಸ್ವೀಕರಿಸಿದರು.
ನಂತರ ಕಾವ್ಯ ಕಡಮೆಯವರು ಆನ್ಲೈನ್ ಮೂಲಕ ಪ್ರಶಸ್ತಿ ಪ್ರದಾನಕ್ಕೆ ಪೂರಕವಾಗಿ ಪ್ರತಿಕ್ರಿಯಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ವಿಶ್ವಸ್ಥ ಮಂಡಳಿಯ ಹಿರಿಯ ಸದಸ್ಯರಾದ ಕೆ.ಶಾಂತಾರಾಮ್ ಪ್ರಭು ವಹಿಸಿದ್ದರು.
ಈ ಸಂದರ್ಭದಲ್ಲಿ ನಿವೃತ್ತ ಪ್ರಾಧ್ಯಾಪಕರಾದ ಡಾ. ರೇಖಾ ಬನ್ನಾಡಿ ಮತ್ತು ಸಂಧ್ಯಾ .ಜಿ.ಕೆ. ಅವರನ್ನು ಸನ್ಮಾನಿಸಲಾಯಿತು. ರ್ಯಾಂಕ್ ವಿಜೇತರು.
, ಚಿನ್ನದ ಪದಕ ಪಡೆದ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ದೇವದಾಸ್ ಕಾಮತ್, ಪ್ರಕಾಶ್ ಸೋನ್ಸ್, ರಾಜೇಂದ್ರ ತೋಳಾರ್, ಸದಾನಂದ ಚಾತ್ರ ಮತ್ತು ಜಯಕರ ಶೆಟ್ಟಿ ಉಪಸ್ಥಿತರಿದ್ದರು.
ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಪಿ.ನಾರಾಯಣ ಶೆಟ್ಟಿ ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಂ.ಗೊಂಡ ವಂದಿಸಿದರು. ಉಪನ್ಯಾಸಕಿ ರೋಹಿಣಿ ಹೆಚ್.ಬಿ. ಕಾರ್ಯಕ್ರಮ ನಿರೂಪಿಸಿದರು.

