ಶ್ರೀನಿವಾಸಪುರ: ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಿಳೆಯರ ಪಾತ್ರ ಹಿರಿದು. ಅಂಥ ಮಹಿಳೆಯರಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಮುಂಚೂಣಿಯಲ್ಲಿದ್ದರು ಎಂದು ತಹಶೀಲ್ದಾರ್ ಶಿರಿನ್ ತಾಜ್ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸೋಮವಾರ ಏರ್ಪಡಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ದಿನಾಚರಣೆ ಸಮಾರಂಭದಲ್ಲಿ, ಕಿತ್ತೂರು ರಾಣಿ ಚೆನ್ನಮ್ಮ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಕಿತ್ತೂರು ರಾಣಿ ಚೆನ್ನಮ್ಮ ಅವರ ದೇಶ ಪ್ರೇಮ ಹಾಗೂ ಶೌರ್ಯ ಮಹಿಳಾ ಸಮುದಯಕ್ಕೆ ಮಾದರಿಯಾಗಿದೆ. ಹಾಗಾಗಿಯೇ ಅವರು ದೇಶದ ಜನರ ಮನದಲ್ಲಿ ಉಳಿದಿದ್ದಾರೆ. ಅವರ ಇತಿಹಾಸ ಯುವ ಸಮುದಾಯಕ್ಕೆ ಚೈತನ್ಯ ತುಂಬುತ್ತದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಮಹಿಳಾ ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆ ಓದಬೇಕು. ಅವರಿಂದ ಸ್ಫೂರ್ತಿ ಪಡೆದು ದೇಶ ಪ್ರೇಮ ಬೆಳೆಸಿಕೊಳ್ಳಬೇಕು. ಸಮಯ ಬಂದಾಗ ದೇಶದ ರಕ್ಷಣೆಗೆ ಮುಂದಾಗಬೇಕು. ದೇಶದ ಪ್ರಗತಿಯಿಂದ ಮಾತ್ರ ವೈಯಕ್ತಿಕ ಪ್ರಗತಿ ಸಾಧ್ಯ ಎಂಬುದನ್ನು ಮರೆಯಬಾರದು ಎಂದು ಹೇಳಿದರು.
ಶಿರಸ್ತೇದಾರ್ ಬಲರಾಮಚಂದ್ರೇಗೌಡ, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಗ್ರಾಮಲೆಕ್ಕಾದಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.