ಕೆಜಿಎಫ್ : ಜಿಲ್ಲಾ ರಕ್ಷಣಾಧಿಕಾರಿ ಇಲಕ್ಕಿಯಾ ಕರುಣಾಕರನ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ದಲಿತರ ಕುಂದುಕೊರತೆಗಳ ಸಭೆ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೆ.ಜಿ.ಎಫ್., ಆ. 2 : ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ದಲಿತರ ಕುಂದುಕೊರತೆಗಳ ಸಭೆಯನ್ನು ಸೋಮವಾರದಂದು ಬೆಳಿಗ್ಗೆ ಜಿಲ್ಲಾ ರಕ್ಷಣಾಧಿಕಾರಿ ಇಲಕ್ಕಿಯಾ ಕರುಣಾಕರನ್ ಅವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿತ್ತು.
ಕೆಜಿಎಫ್ ಪೊಲೀಸ್ ಜಿಲ್ಲೆಯ ಬಂಗಾರಪೇಟೆ ಮತ್ತು ಕೆಜಿಎಫ್ ತಾಲ್ಲೂಕುಗಳ ದಲಿತ ಸಂಘ, ಸಂಸ್ಥೆಗಳ ಮುಖಂಡರುಗಳು ಸಭೆಯಲ್ಲಿ ಭಾಗವಹಿಸಿದ್ದರು. ಡಿವೈಎಸ್ಪಿ ಪಿ.ಮುರಳೀಧರ ಅವರು ಹಿಂದಿನ ಸಭೆಯ ನಡವಳಿಗಳನ್ನು ಓದಿ ಸಭೆಯಲ್ಲಿ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು.
ತಾಲ್ಲೂಕು ಮಟ್ಟದ ವಿವಿಧ ಇಲಾಖಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದು, ತಾಲ್ಲೂಕೀನಾದ್ಯಂತ ದಲಿತರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಕೈಗೊಂಡಿರುವ ಕ್ರಮಗಳನ್ನು ವಿವರವಾಗಿ ವಿವರಿಸಿದರು.
ದಲಿತ ಮುಖಂಡ ಸೂಲಿಕುಂಟೆ ಆನಂದ್ ಅವರು ಮಾತನಾಡಿ, ಪ್ರತಿ ತಿಂಗಳು ದಲಿತರ ಕುಂದುಕೊರತೆಗಳ ಸಭೆಯನ್ನು ಪ್ರತಿ ಠಾಣೆಯಲ್ಲೂ ಕಡ್ಡಾಯವಾಗಿ ನಡೆಸಿ, ಠಾಣಾ ಮಟ್ಟದಲ್ಲೇ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ಕೆಜಿಎಫ್‍ನಲ್ಲಿ ಎಲ್ಲಾ ಸಮುದಾಯದವರ ಸ್ಮಶಾನಕ್ಕೆ ಸ್ಥಳಾವಕಾಶ ಅವಶ್ಯಕತೆಯಿದ್ದು, ತಹಶೀಲ್ದಾರ್‍ರು ಈ ಸಂಬಂಧ ಅಗತ್ಯ ಕ್ರಮ ಕೈಗೊಂಡು ಗಣಿಗಾರಿಕೆ ಪ್ರದೇಶದಲ್ಲಿ ಸ್ಥಳಾವಕಾಶವಿದ್ದು, ಅವಶ್ಯಕ ಭೂಮಿ ಸ್ಮಶಾನಕ್ಕೆ ಒದಗಿಸಬೇಕೆಂದು ಕೋರಿದರು. ಕೆಜಿಎಫ್ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿಗಳ ಕಛೇರಿಯನ್ನು ಸ್ಥಳಾಂತರ ಮಾಡುವ ವದಂತಿಗಳು ವ್ಯಾಪಕವಾಗಿದ್ದು, ಯಾವುದೇ ಕಾರಣಕ್ಕೂ ಎಸ್‍ಪಿ ಕಛೇರಿಯನ್ನು ಸ್ಥಳಾಂತರ ಮಾಡಬಾರದೆಂದು ಸೂಲಿಕುಂಟೆ ಆನಂದ್ ಅವರು ಸರ್ಕಾರವನ್ನು ಒತ್ತಾಯಿಸಿದರು. ಒಂದುವೇಳೆ ಸ್ಥಳಾಂತರಕ್ಕೆ ಮುಂದಾದಲ್ಲಿ ಬೃಹತ್ ಪ್ರತಿಭಟನೆಗಳು ನಡೆಸುವುದಾಗಿ ತಿಳಿಸಿದರು.
ಹುಣಸನಹಳ್ಳಿ ವೆಂಕಟೇಶ್ ಅವರು ಮಾತನಾಡಿ, ಬಂಗಾರಪೇಟೆ ತಾಲ್ಲೂಕೀನಲ್ಲಿ ಸ್ಮಶಾನಗಳ ಭೂಮಿಯನ್ನು ಭೂಕಬಳಿಕೆದಾರರು ಒತ್ತುವರಿ ಮಾಡಿದ್ದು, ಒತ್ತುವರಿಯನ್ನು ತೆರವುಗೊಳಿಸಲು ತಾಲ್ಲೂಕು ಆಡಳಿತ ಕ್ರಮವಿಡಬೇಕೆಂದರು.
ಎ.ಪಿ.ಎಲ್. ರಂಗನಾಥ ಅವರು ಮಾತನಾಡಿ, ರಾಬರ್ಟ್‍ಸನ್‍ಪೇಟೆ ಸ್ವರ್ಣಕುಪ್ಪಂನಲ್ಲಿ 6 ಗುಂಟೆ ಸ್ಮಶಾನದ ಸ್ಥಳವನ್ನು ಒತ್ತುವರಿ ಮಾಡಿರುವುದನ್ನು ತೆರವುಗೊಳಿಸಬೇಕೆಂದರು. ನಗರಸಭೆಯ ದಿನಗೂಲಿ ನೌಕರ ಪ್ರಭು ಎಂಬುವರು ಮೃತಪಟ್ಟಿದ್ದು, ಅವರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರವನ್ನು ನೀಡುವಂತೆ ಕೋರಿದರು.
ಕಾಮಸಮುದ್ರದ ಕೃಷ್ಣ ಅವರು ಮಾತನಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರುಗಳಿಲ್ಲದೇ ಕಾಮಸಮುದ್ರ ಹೋಬಳಿಯ ಜನತೆಯು ತುಂಬಾ ಅನಾನುಕೂಲವನ್ನು ಎದುರಿಸುತ್ತಿದ್ದು, ವೈದ್ಯರ ನೇಮಕಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದರು.
ಮಹದೇವಪುರ ವೆಂಕಟೇಶ್ ಅವರು ಮಾತನಾಡಿ, ಅಸ್ಪಶ್ರ್ಯತೆ, ಸಾಮಾಜಿಕ ಶೋಷಣೆಯ ಕುರಿತು ಜನಜಾಗೃತಿ, ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ, ಎಲ್ಲಾ ಇಲಾಖಾಧಿಕಾರಿಗಳು ಸಹಕಾರ ನೀಡುವಂತೆ ಮನವಿ ಮಾಡಿದರು.
ದಲಿತ ಮುಖಂಡರಾದ ಸಂದೇಶ್, ಸಂದಾಮುನಿಸ್ವಾಮಿ, ಗಂಗಪ್ಪ, ಅಯ್ಯಪ್ಪ, ವೆಂಕಟರಾಂ, ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.
ಸಭೆಯಲ್ಲಿ ತಹಶೀಲ್ದಾರ್ ಸುಜಾತ, ನಗರಸಭೆಯ ಪೌರಾಯುಕ್ತ ನವೀನ್‍ಚಂದ್ರ, ಡಿವೈಎಸ್ಪಿ ಪಿ.ಮುರಳೀಧರ, ಕರಾರಸಾನಿ ಘಟಕ ವ್ಯವಸ್ಥಾಪಕ ವಿ.ಆರ್.ಭಾಸ್ಕರ್, ತಾಲ್ಲೂಕು ಸಮಾಜಕಲ್ಯಾಣಾಧಿಕಾರಿ ಮುನಿರಾಜು, ಎಆರ್‍ಟಿಓ ನಯಾಜ್‍ಪಾಷ, ಆಹಾರ ನಿರೀಕ್ಷಕ ನಾರಾಯಣಚಾರಿ, ತಾಪಂ ವ್ಯವಸ್ಥಾಪಕ ಎಸ್.ಮಂಜುನಾಥ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಭಾಗವಹಿಸಿದ್ದರು.