ಕೆಜಿಎಫ್ ಸಿನಿಮಾ ಖ್ಯಾತಿ ಅರ್ಚನಾ ಜೋಯಿಸ್‍ಗೆ ಸನ್ಮಾನ : ಕೋಲಾರದ ಕೀರ್ತಿ ಬೆಳಗಿದ ನಟಿ-ಮುರಳಿಗೌಡ ಪ್ರಶಂಸೆ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೆಜಿಎಫ್ ಚಾಫ್ಟರ್ 1 ಮತ್ತು ಚಾಫ್ಟರ್ 2 ಸಿನಿಮಾದಲ್ಲಿ ಕಥಾನಾಯಕ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿಯ ಪಾತ್ರದಲ್ಲಿ ಮಿಂಚಿದ ಕೋಲಾರ ಜಿಲ್ಲೆಯವರಾದ ಅರ್ಚನಾ ಜೋಯಿಸ್ ಅವರನ್ನು ಇಲ್ಲಿನ ಕೋಲಾರದ ಜಯನಗರದ ಸಫಲಮ್ಮ ದೇವಾಲಯದಲ್ಲಿ ನಗರಸಭಾ ಸದಸ್ಯ ಮುರಳಿಗೌಡ ಮತ್ತಿತರರು ಆತ್ಮೀಯವಾಗಿ ಸನ್ಮಾನಿಸಿದರು

ಕೋಲಾರ:- ಕೆಜಿಎಫ್ ಸಿನಿಮಾ ಮೂಲಕ ನಟಿ ಅರ್ಚನಾ ಜೋಯಿಸ್ ಅವರು ಇಡೀ ದೇಶಾದ್ಯಂತ ಮನೆ ಮಾತಾಗಿದ್ದಾರೆ. ಕೆಜಿಎಫ್ ಚಾಫ್ಟರ್ 1 ಮತ್ತು ಚಾಫ್ಟರ್ 2 ಸಿನಿಮಾದಲ್ಲಿ ಕಥಾನಾಯಕ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿಯ ಪಾತ್ರದಲ್ಲಿ ಮಿಂಚಿದ ಕೋಲಾರ ಜಿಲ್ಲೆಯವರಾದ ಅರ್ಚನಾ ಜೋಯಿಸ್ ಜಿಲ್ಲೆಯ ಕೀರ್ತಿಯನ್ನು ಬೆಳಗಿದ್ದಾರೆ ಎಂದು ನಗರಸಭಾ ಸದಸ್ಯ ಮುರಳಿಗೌಡ ಅಭಿನಂದಿಸಿದರು.
ನಗರದ ಜಯನಗರದ ಸಫಲಮ್ಮ ದೇವಾಲಯ ಸಮಿತಿ ವತಿಯಿಂದ ಅವರನ್ನು ಸನ್ಮಾನಿಸಿ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಮುರಳಿಗೌಡ, ಅರ್ಚನಾ ಜೋಯಿಸ್ ಅವರು ತೆರೆಮೇಲೆ ಅದ್ಭುತವಾಗಿ ಮಿಂಚಿದ್ದಾರೆ. ಈ ಮೂಲಕ ಅರ್ಚನಾಗೆ ಅಪಾರವಾದ ಅಭಿಮಾನಿ ಬಳಗವೇ ಹುಟ್ಟಿಕೊಂಡಿದೆ ಎಂದರು.
ಕೆಜಿಎಫ್ 2 ಸಿನಿಮಾ ಏಪ್ರಿಲ್14 ರಂದು ಬಿಡುಗಡೆಯಾಗಿ ಎಲ್ಲೆಡೆ ಯಶಸ್ವಿಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಹಾಗಾಗಿ ಕೋಲಾರದ ಜಯನಗರದಲ್ಲಿರುವ ಸಪಲಮ್ಮ ದೇವಾಲಯಕ್ಕೆ ಅರ್ಚನಾ ಜೋಯಿಸ್ ಅವರು ಭೇಟಿ ನೀಡಿ ಪೂಜೆ ಸಲ್ಲಿಸಿರುವುದು ಸಂತಸ ಎಂದರು.
ಈ ಸಂದರ್ಭದಲ್ಲಿ ಅರ್ಚನಾ ಜೋಯಿಸ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ಈ ವೇಳೆ ಪ್ರೀತಿಯಿಂದ ಅಭಿಮಾನಿಗಳ ಜೊತೆ ಅರ್ಚನಾ ಸೆಲ್ಫಿ ತೆಗೆಸಿಕೊಂಡರು.
ನಟಿ ಅರ್ಚನಾ ಜೋಯಿಸ್ ಅವರು ಕೋಲಾರ ಜಿಲ್ಲೆಯ ಬಂಗಾರಪೇಟೆ ಮೂಲದವರೇ ಆಗಿದ್ದು, ವಿದ್ಯಾಭ್ಯಾಸವನ್ನೂ ಸಹ ಇಲ್ಲಿ ಮಾಡಿದ್ದಾರೆ. ನನ್ನ ಬಹುತೇಕ ಸಂಬಂಧಿಕರು ಕೋಲಾರದಲ್ಲಿಯೇ ಇದ್ದಾರೆ. ಭರತನಾಟ್ಯ ಹಾಗೂ ಸಂಗೀತ ಅಭ್ಯಾಸವನ್ನು ಸಹ ನಾನು ಕೋಲಾರದಲ್ಲಿ ಮಾಡಿದ್ದೇನೆ. ಚಿತ್ರರಂಗದಲ್ಲಿ ಈ ಮಟ್ಟಕ್ಕೆ ತಲುಪಲು ನನ್ನ ಪರಿಶ್ರಮ ಹಾಗೂ ಜನತೆಯ ಆಶೀರ್ವಾದವೇ ಕಾರಣ ಎಂದು ತಿಳಿಸಿದರು.
ಸದ್ಯ ಚಿತ್ರರಂಗದಲ್ಲಿ ಅರ್ಚನಾ ಜೋಯಿಸ್ ಅವರು ಬಹುಬೇಡಿಕೆಯ ನಟಿಯಾಗಿ ಬೆಳೆದಿದ್ದಾರೆ. ಅರ್ಚನಾ ಅಭಿನಯಿಸಿರುವ ಮ್ಯೂಟ್ ಸಿನಿಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆ ಆಗಿ ಜನರಿಂದ ಮೆಚ್ಚುಗೆ ಪಡೆದುಕೊಂಡಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿದ್ಧವಾಗಿರುವ ಮ್ಯೂಟ್ ಚಿತ್ರದ ಟ್ರೇಲರ್ ಅನ್ನು ನಟಿ ರವೀನಾ ಟಂಡನ್ ಬಿಡುಗಡೆ ಮಾಡಿದ್ದು ವಿಶೇಷವಾಗಿದೆ.
ಈ ಸಂದರ್ಭದಲ್ಲಿ ಕಾರ್ತಿಕ್, ಅರ್ಚಕ ಸತ್ಯನಾರಾಯಣ, ರೇಣು, ನವೀನ್,ಬಾಬು, ವೇಣುಗೋಪಾಲ್, ರಾಜಣ್ಣ, ಬಾಲಪ್ಪ, ಗೋವಿಂದು, ಮಂಜುನಾಥ್, ಮಲ್ಲಿ, ಮನೋಜ್,ತಿಲಕ್,ಪುನೀತ್,ಸಂಜಯ್, ಉಪೇಂದ್ರ ಮತ್ತಿತರರಿದ್ದರು.

ಕೆಜಿಎಫ್ ಚಾಫ್ಟರ್ 1 ಮತ್ತು ಚಾಫ್ಟರ್ 2 ಸಿನಿಮಾದಲ್ಲಿ ಕಥಾನಾಯಕ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿಯ ಪಾತ್ರದಲ್ಲಿ ಮಿಂಚಿದ ಕೋಲಾರ ಜಿಲ್ಲೆಯವರಾದ ಅರ್ಚನಾ ಜೋಯಿಸ್ ಅವರನ್ನು ಇಲ್ಲಿನ ಕೋಲಾರದ ಜಯನಗರದ ಸಫಲಮ್ಮ ದೇವಾಲಯದಲ್ಲಿ ನಗರಸಭಾ ಸದಸ್ಯ ಮುರಳಿಗೌಡ ಮತ್ತಿತರರು ಆತ್ಮೀಯವಾಗಿ ಸನ್ಮಾನಿಸಿದರು.