ಕೆಜಿಎಫ್., ಮೇ.29 : ಕೆಜಿಎಫ್ ಪೊಲೀಸ್ ಜಿಲ್ಲೆಯ ರಾಬರ್ಟ್ಸನ್ಪೇಟೆ ಪೊಲೀಸ್ ಠಾಣೆಯ ಪೊಲೀಸರು ಗಾಂಜಾ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿ, ಅವರಿಂದ ಸುಮಾರು ರೂ. 5,00,000/- ಮೌಲ್ಯದ 6 ಕೆಜಿ 340 ಗ್ರಾಂ ಒಣ ಗಾಂಜಾವನ್ನು ಹಾಗೂ ಕೃತ್ಯಕ್ಕೆ ಬಳಸಿದ ದ್ವಿಚಕ್ರವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಮೇ.29 ರಂದು ಬೆಳಿಗ್ಗೆ ರಾಬರ್ಟ್ಸನ್ನ್ಪೇಟೆ ಪೊಲೀಸ್ ಠಾಣಾ ಸರಹದ್ದು, ಪಾರಾಂಡಹಳ್ಳಿಯ ಹೊರವಲಯದ ಕ್ಯಾಸಂಬಳ್ಳಿ ರಸ್ತೆಯ ಬದಿಯಲ್ಲಿ ದ್ವಿಚಕ್ರವಾಹನದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ, ರಾಬರ್ಟ್ಸನ್ಪೇಟೆ ಪೊಲೀಸ್ ಸಬ್ಇನ್ಸ್ಪೆಕ್ಟರ್ ಯತೀಶ ಮತ್ತು ಸಿಬ್ಬಂದಿಗಳು ಕೂಡಲೆ ದಾಳಿ ನಡೆಸಿ, ಆಂದ್ರಪ್ರದೇಶ ಕುಪ್ಪಂ ತಾಲ್ಲೂಕಿನ ಅನಿಗಾನೂರು ಗ್ರಾಮದ ವಾಸಿ ವೆಂಕಟಾಚಲಪತಿ, ವಿಜಿಲಾಪುರ ಗ್ರಾಮದ ಹಂಸಗಿರಿ ಮತ್ತು ಕೆಂಚನಬಲ್ಲ ಗ್ರಾಮದ ನಿಖಿಲ್ ಎಂಬುವವರನ್ನು ಬಂಧಿಸಿ, ಅವರುಗಳಿಂದ ಸುಮಾರು ರೂ. 5,00,000/- ಮೌಲ್ಯದ 6 ಕೆಜಿ 340 ಗ್ರಾಂ ಒಣ ಗಾಂಜಾವನ್ನು ಮತ್ತು ಕೃತ್ಯಕ್ಕೆ ಬಳಸಿದ ಸುಮಾರು ರೂ. 1,00,000/- ಮೌಲ್ಯದ ದ್ವಿಚಕ್ರವಾಹನವನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ.
ಆರೋಪಿಗಳನ್ನು ಬಂಧಿಸಿ, ಗಾಂಜಾ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಪಿ.ಎಸ್.ಐ ಯತೀಶ ಸಿಬ್ಬಂದಿಗಳಾದ ಗೋಪಿನಾಥ್, ಮಂಜುನಾಥರೆಡ್ಡಿ, ಬಸವರಾಜ್ ಕಾಂಬ್ಳೆ, ರಘು, ಮುರಳಿ ಮತ್ತು ಚಾಲಕ ಮನೋಹರ್ ರವರುಗಳನ್ನೊಳಗೊಂಡ ತಂಡವು ಯಶಸ್ವಿಯಾಗಿದ್ದು, ತಂಡವನ್ನು ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಅವರು ಪ್ರಶಂಶಿಸಿದ್ದಾರೆ.