ಶ್ರೀನಿವಾಸಪುರ: ಕೆಂಪೇಗೌಡರ ಆಡಳಿತ ಮಾದರಿಯಾಗಿದೆ.ಎಂದು ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಡಾ. ವೈ.ಎ.ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ಬಾಲಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ತಾಲ್ಲೂಕು ಆಡಳಿತ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ಸ್ಥಾಪನೆ ಪ್ರಯುಕ್ತ ಶನಿವಾರ ಏರ್ಪಡಿಸಿದ್ದ ಮೃತ್ತಿಕೆ ಸಂಗ್ರಹ ರಥಯಾತ್ರೆ ಉದ್ಘಾಟಿಸಿ ಮಾತನಾಡಿದ ಅವರು, ವಿಮಾನ ನಿಲ್ದಾಣದ ಸಮೀಪ ಕೆಂಪೇಗೌಡರ ಪುತ್ಥಳಿ ಸ್ಥಾಪನೆ ನಾಡಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
ಪುತ್ಥಳಿ ಅನಾವಣರಣ ಕಾರ್ಯಕ್ರಮ ನ.11 ರಂದು ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಂದ ಪುತ್ಥಳಿ ಅನಾವರಣಗೊಳ್ಳಲಿದೆ. ಕಾರ್ಯಕ್ರಮ ಜಾತ್ಯಾತೀತ ಹಾಗೂ ಪಕ್ಷಾತೀತವಾಗಿದ್ದು, ಸಮಾಜದ ಎಲ್ಲ ವರ್ಗದ ಜನರೂ ಸಮಾರಂಭದಲ್ಲಿ ಪಾಲ್ಗೊಳ್ಳಬೇಕು. ನಾಡಿನ ಘನತೆ ಎತ್ತಿಹಿಡಿಯಬೇಕು ಎಂದು ಹೇಳಿದರು.
ತಹಶೀಲ್ದಾರ್ ಶಿರಿನ್ ತಾಜ್, ಮಾಜಿ ಶಾಸಕ ಬಿ.ಬಿ.ವೆಂಕಟಮುನಿಯಪ್ಪ, ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಡಾ. ಕೆ.ಎನ್.ವೇಣುಗೋಪಾಲ್, ತಾಲ್ಲೂಕು ಒಕ್ಕಲಿಗರ ಸಂಘದ ಮುಖಂಡರಾದ ದಿಂಬಾಲ ಅಶೋಕ್, ಡಾ. ವೈ.ವಿ.ವೆಂಕಟಾಚಲ, ಎನ್.ಹನುಮೇಶ್ ವೇಣುಗೋಪಾಲರೆಡ್ಡಿ, ಸತ್ಯನಾರಾಯಣ, ಮುಖಂಡರಾದ ಕೆ.ಕೆ.ಮಂಜುನಾಥರೆಡ್ಡಿ, ಎಂ.ಲಕ್ಷ್ಮಣಗೌಡ, ಜೆಸಿಬಿ ಅಶೋಕ್ರೆಡ್ಡಿ, ವಾಸುದೇವ್, ಅಶೋಕ್ರೆಡ್ಡಿ, ವಿ.ನಿಶಾಂತ್ ಕುಮಾರ್ ಪುರಸಭೆ ಮುಖ್ಯಾಧಿಕಾರಿ ಎಂ.ಜಯರಾಂ ಮತ್ತಿತರರು ಇದ್ದರು.