ಶ್ರೀನಿವಾಸಪುರ : ಶ್ರೀನಿವಾಸಪುರ ತಾಲೂಕಿಗೆ ಬರುತ್ತಿದ್ದ ಕೆಸಿ ವ್ಯಾಲಿ ನೀರನ್ನು ಒಂದು ವರ್ಷದಿಂದ ನಿಲ್ಲಿಸಿರುತ್ತಾರೆ ಇದರಿಂದ ರೈತರಿಗೆ ತುಂಬಾ ಅನಾನುಕೂಲವಾಗಿದ್ದು, ಕೂಡಲೇ ತಾಲೂಕಿನ ಎಲ್ಲಾ ಕೆರೆಗಳಿಗೂ ನೀರನ್ನ ಹರಿಸಬೇಕೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ನಂಬಿಹಳ್ಳಿ ಎನ್.ಜಿ. ಶ್ರೀರಾಮರೆಡ್ಡಿ ಒತ್ತಾಯಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಭಾಗ ಗುರುವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಪೊಲೀಸ್ ನಿರೀಕ್ಷಕ ಎಂ.ಬಿ.ಗೊರವನಕೊಳ್ಳ ರವರಿಗೆ ಮನವಿ ಪ್ರತವನ್ನು ಸಲ್ಲಿಸಿ ಮಾತನಾಡಿದರು.
ತಾಲೂಕಿನಲ್ಲಿ ಕೆರೆ ಮತ್ತು ರಾಜಕಾಲುವೆಗಳು ಒತ್ತುವರಿಯಾಗಿದ್ದು, ಕೂಡಲೇ ತೆರವುಗೊಳಿಸಬೇಕು. ರಾಜ್ಯದಲ್ಲಿ ಬರಗಾಲ ಆವರಿಸಿಕೋಂಡಿದ್ದು, ರೈತರ ಸಾಲ ಮನ್ನಾ ಮಾಡಬೇಕು. ಅಲ್ಲದೆ ಬರಪರಿಹಾರವನ್ನು ಸಮಪರ್ಕವಾಗಿ ಎಲ್ಲಾ ರೈತರ ಖಾತೆಗಳಿಗೆ ಜಮಾ ಮಾಡಬೇಕು. ಸಹಕಾರ ಸಂಘಗಳಲ್ಲಿ ಅಸಲು ಕಟ್ಟಿದರೆ ಬಡ್ಡಿ ಮನ್ನಾ ಯೋಜನೆಯನ್ನ ಮುಂದುವರಿಸಬೇಕು ಎಂದರು.
ರೈತರಿಗೆ ಮಾರಕವಾಗಿರುವ ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ವಾಪಸ್ಸು ಪಡೆದರೂ ಸಹ
ರಾಜ್ಯ ಸರ್ಕಾರ ವಾಪಸ್ಸು ಪಡೆದಿಲ್ಲವೆಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರದಾನ ಕಾರ್ಯದರ್ಶಿ ಎಸ್.ಜಿ.ವೀರಭದ್ರಸ್ವಾಮಿ ಮಾತನಾಡಿ ಸರ್ಕಾರವು ಪೆಟ್ರೋಲ್, ಡೀಸಲ್ ಬೆಲೆ ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಿ, ರಾಜ್ಯ ಸರ್ಕಾರವು ಜನರ ಖಾತೆಗೆ ಬರಪರಿಹಾರ ಹಣವನ್ನ ಹಾಕಬೇಕು ಎಂದು ಒತ್ತಾಯಿಸಿದರು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚ ರಿಸಿದರು.
ಈ ಸಮಯದಲ್ಲಿ ಜಿಲ್ಲಾ ಉಪಾಧ್ಯಕ್ಷ ಎಂ.ಬೈರಾರೆಡ್ಡಿ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಬಿ.ನಾರಾಯಣಸ್ವಾಮಿ, ಜಿಲ್ಲಾ ಮುಖಂಡರಾದ ಜೆಸಿಬಿ ರಮೇಶ್, ಶ್ರೀನಿವಾಸಪುರ ತಾಲೂಕು ಗೌರವಾಧ್ಯಕ್ಷ ಈರಪ್ಪರೆಡ್ಡಿ, ಖಜಾಂಚಿ ಶ್ರೀಧರ್, ಪ್ರದಾಮಕಾರ್ಯದರ್ಶಿ ಅಸ್ಲಂಪಾಷ, ಉಪಾಧ್ಯಕ್ಷ ದೇವರಾಜಗೌಡ, ಕಾರ್ಯದರ್ಶಿಗಳಾದ ಹೆಬ್ಬಟ ರಮೇಶ್, ಅಶೋಕ್, ಮುಳಬಾಗಿಲು ತಾಲೂಕು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಗಂಗಾಧರ್ ಇತರರು ಇದ್ದರು.