ಶ್ರೀನಿವಾಸಪುರ: ಸಹಜ ಮಳೆ ಸುರಿದಾಗ ಮಾತ್ರ ಕೆಸಿ ವ್ಯಾಲಿ ನೀರಿನ ಅಪಾಯದಿಂದ ಪಾರಾಗಲು ಸಾಧ್ಯ ಎಂದು ಸಾಹಿತಿ ಹಾಗೂ ಕೃಷಿ ಸಂಸ್ಕøತಿ ಕೇಂದ್ರದ ಅಧ್ಯಕ್ಷ ಕೋಟಿಗಾನಹಳ್ಳಿ ಕೆ.ರಾಮಯ್ಯ ಹೇಳಿದರು.
ಪಟ್ಟಣದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಬುಧವಾರ ಏರ್ಪಡಿಸಿದ್ದ ಸೇನೆಯ ತಾಲ್ಲೂಕು ಘಟಕದ ಉದ್ಘಾಟನೆ ಹಾಗೂ ಕಚೇರಿ ಪ್ರಾರಂಭೋತ್ಸವ ಸಮಾರಂಭದಲ್ಲಿ, ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈಗ ಸುರಿಯುತ್ತಿರುವ ಭಾರಿ ಮಳೆಯಿಂದ, ಜಿಲ್ಲೆ ಮಲೆನಾಡು ಆಗುತ್ತದೆ ಎಂದು ಕೆಲವರು ಹೇಳುತ್ತಿರುವುದು ಪೂರ್ಣ ಸತ್ಯವಲ್ಲ. ಜಾಗತಿಕ ತಾಪಮಾನ ಹೆಚ್ಚಳದ ಪರಿಣಾಮವಾಗಿ ಮುಂದಿನ 50 ವರ್ಷಗಳಲ್ಲಿ ಭೂಮಿ ಬೆಂಗಾಡಾಗುವ ಸಂಭವ ಇದೆ ಎಂದು ಅಭಿಪ್ರಾಯಪಟ್ಟರು.
ರಾಗಿ ಮಹತ್ವ ಕುರಿತಂತೆ ಪ್ರಾಥಮಿಕ ಶಿಕ್ಷಣದ ಪಠ್ಯದಲ್ಲಿ ಒಂದು ಪಾಠ ಇಡಬೇಕು. ಗ್ರಾಮೀಣ ಸೊಗಡಿನ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕು. ಈ ನೆಲದ ಸಾಂಸ್ಕøತಿಕ ಪರಂಪರೆ ತಿಳಿಯದ ಮಕ್ಕಳಿಂದ ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಶಿಕ್ಷಣ ನೀತಿಯನ್ನು ಹಿಂಪಡೆಯಬೇಕು. ಪ್ರಧಾನಿ ಮೋದಿ ಅವರು ಬಂಡವಾಳ ಶಾಹಿಗಳ ಪರ ನಿಲ್ಲದೆ, ಬಡವರ ಉದ್ಧಾರಕ್ಕೆ ಅಗತ್ಯವಾದ ಯೋಜನೆಗಳನ್ನು ರೂಪಿಸಿ ಜಾರಿಗೆ ತರಬೇಕು. ಸಾರ್ವಜನಿಕ ಉದ್ದಿಮೆಗಳ ಖಾಸಗಿ ಕರಣ ಪ್ರಕ್ರಿಯೆ ಕೈ ಬಿಡಬೇಕು. ದುಡಿಯವ ವರ್ಗಕ್ಕೆ ಮಾರಕವಾಗುವ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ಹೇಳಿದರು.
ರೋಟರಿ ಶ್ರೀನಿವಾಸಪುರ ಸೆಂಟ್ರಲ್ ಅಧ್ಯಕ್ಷ ಡಾ. ವೈ.ವಿ.ವೆಂಕಟಾಚಲ ಮಾತನಾಡಿ, ಕೆಲವು ದಶಕಗಳ ಬಳಿಕ ಕೋಲಾರ ಜಿಲ್ಲೆಯ ಕೆರೆಗಳು ತುಂಬಿವೆ. ಆದರೆ ರೈತರು ಗದ್ದೆ ಬಯಲಲ್ಲಿ ಕೃಷಿ ಮಾಡುವ ಉತ್ಸಾಹ ಕಳೆದುಕೊಂಡಿದ್ದಾರೆ. ವ್ಯವಸಾಯಕ್ಕೆ ಬೇಕಾದ ಉಪಕರಣಗಳು ನೇಪಥ್ಯಕ್ಕೆ ಸರಿದಿವೆ. ದುಡಿಯುವ ಎತ್ತುಗಳ ಸಾಕಾಣಿಕೆ ನಿಂತಿದೆ. ತುಂಡು ಹಿಡುವಳಿಯಲ್ಲಿ ಯಾಂತ್ರಿಕ ಬೇಸಾಯ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಕೆರೆ ತುಂಬಿದರೂ ಭತ್ತ ಬೆಳೆಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಕೃಷಿ ಅಧಿಕಾರಿ ಈಶ್ವರ್, ರೇಷ್ಮೆ ಇಲಾಖೆ ಅಧಿಕಾರಿ ಶ್ರೀನಿವಾಸ್ ಮಾತನಾಡಿ ತಮ್ಮ ಇಲಾಖೆಗಳಿಂದ ರೈತರಿಗೆ ಸಿಗುವ ಸೌಲಭ್ಯಗಳ ಮಾಹಿತಿ ನೀಡಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರಾದ ಬಿಸನಹಳ್ಳಿ ಬೈಚೇಗೌಡ, ರಮೇಶ್, ನಾಗರಾಜಗೌಡ, ಕೆ.ಕೆ.ಮಂಜು, ನಾಗಭೂಷಣ್, ರಾಧಮ್ಮ, ಶ್ರೀರಾಮರೆಡ್ಡಿ, ಶಿರಸ್ತೇದಾರ್ ಮಹೋಹರ ಮಾನೆ, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ ಇದ್ದರು.