ಕೆಸಿವ್ಯಾಲಿ ಪೂರ್ಣ 400 ಎಂಎಲ್‍ಡಿ ನೀರು ಹರಿಸಿ-ಡಾ.ವೈ.ಎಎನ್ ಆಗ್ರಹ ;2ನೇ ಹಂತದ ಯೋಜನೆಗೆ ಟೆಂಡರ್ ಪ್ರಕ್ರಿಯೆ- ಸಚಿವ ಮಾಧುಸ್ವಾಮಿ ಉತ್ತರ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ :- ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಗಳ ಅಂತರ್ಜಲ ಅಭಿವೃದ್ದಿಗಾಗಿ ಜಾರಿಗೆ ತಂದಿರುವ 257 ಕೆರೆಗಳನ್ನು ತುಂಬಿಸುವ ಕೆಸಿ ವ್ಯಾಲಿ 2ನೇ ಹಂತದ ಯೋಜನೆಯ 455 ಕೋಟಿ ರೂಗಳ ಕಾಮಗಾರಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ಸಣ್ಣನೀರಾವರಿ ಸಚಿವ ಜಿ.ಸಿ.ಮಾಧುಸ್ವಾಮಿ ಅವರು ಸದನದಲ್ಲಿ ವಿಧಾನಪರಿಷತ್ ಸದಸ್ಯ ಡಾ.ವೈ.ಎ.ನಾರಾಯಣಸ್ವಾಮಿ ಕೇಳಿದ ಪ್ರಶ್ನೆಗೆ ಮಾಹಿತಿ ನೀಡಿದರು.
ಅಂತರ್ಜಲ ವೃದ್ದಿಯ ಉದ್ದೇಶದಿಂದ ಜಿಲ್ಲೆಯಕೆರೆಗಳಿಗೆ ನೀರು ತುಂಬಿಸಲು ರೂಪಿಸಿರುವ ಕೆಸಿ ವ್ಯಾಲಿ ಯೋಜನೆಯಲ್ಲಿ ನೂರಾರು ಕೋಟಿ ರೂ ಖರ್ಚು ಮಾಡಿದ್ದರೂ, ನಿರೀಕ್ಷಕತ ಪ್ರಮಾಣದಲ್ಲಿ ಕೆರೆಗಳಿಗೆ ನೀರು ತುಂಬಿಸಲು ಆಗದಿರುವ ಕುರಿತು ಡಾ.ವೈ.ಎ.ಎನ್ ಸರ್ಕಾರದ ಗಮನ ಸೆಳೆದಿದ್ದರು.
ವಿಧಾನಪರಿಷತ್‍ನಲ್ಲಿ ಡಾ.ವೈ.ಎ.ಎನ್ ಕೇಳಿದ ಪ್ರಶ್ನೆಗೆ ಈ ಮಾಹಿತಿ ನೀಡಿದ ಸಚಿವರು, ಈಗಾಗಲೇ ಮೊದಲ ಹಂತದ ಕಾಮಗಾರಿ 1323.08 ಕೋಟಿ ರೂಗಳ ವೆಚ್ಚದಿಂದ ಮುಗಿಸಲಾಗಿದ್ದು, ಇದರಿಂದ 126 ಕೆರೆಗಳನ್ನು ತುಂಬಿಸುವ ಕಾರ್ಯ ಪ್ರಗತಿಯಲ್ಲಿದೆ, ಇದರಿಂದ ಈ ಭಾಗದ ಕೊಳವೆ ಬಾವಿಗಳಲ್ಲಿ ಅಂತರ್ಜಲ ವೃದ್ದಿಯಾಗಿದೆ ಎಂದು ತಿಳಿಸಿದರು.
ಇಲ್ಲಿಯವರೆಗೂ 7.10 ಟಿಎಂಸಿ ನೀರನ್ನು ಪಂಪ್ ಮಾಡಲಾಗಿದ್ದು, 82 ಕೆರೆಗಳಿಗೆ ಮತ್ತು 113 ಚೆಕ್‍ಡ್ಯಾಂಗಳಿಗೆ ನೀರು ತಂಬಿಸಲಾಗಿದೆ, ಬೆಂಗಳೂರು ನೀರು ಸರಬರಾಜು, ಒಳಚರಂಡಿ ಮಂಡಳಿಯಿಂದ 400 ಎಂಎಲ್‍ಡಿ ಸಂಸ್ಕರಿಸಿದ ತ್ಯಾಝ್ಯ ನೀರನ್ನು ಪೂರೈಸಲು ಕರಾರು ಮಾಡಿಕೊಳ್ಳಲಾಗಿದ್ದು, ಪ್ರಸ್ತುತ ಸಂಸ್ಕರಣ ಘಟಕಗಳಿಂದ ದಿನಂಪ್ರತಿ 300 ಎಂಎಲ್‍ಡಿ ನೀರನ್ನು ಕಳೆದ ಮೂರು ತಿಂಗಳಿಂದ ಪಂಪ್ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕೆಸಿ ವ್ಯಾಲಿ ಯೋಜನೆಯಡಿ 5 ಸಂಸ್ಕರಣಾ ಘಟಕಗಳಿಂದ 300 ಎಂಎಲ್‍ಡಿ ನೀರು ಹರಿದು ಬರುತ್ತಿದ್ದು, ಕರಾರಿನ ಪ್ರಕಾರ ಇನ್ನೂ 100 ಎಂಎಲ್‍ಸಿ ನೀರು ಶೀಘ್ರ ಹರಿಸುವಂತೆ ವೈ.ಎ.ಎನ್. ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಸಚಿವರು, ಕೋಲಾರ ಜಿಲ್ಲೆಯಲ್ಲಿ ಶೇ.50 ರಷ್ಟು ಪ್ರಮಾಣದಲ್ಲಿ ಕೆರೆಗಳಲ್ಲಿ ನೀರು ಸಂಗ್ರಹಿಸಲು ನಿರ್ಧರಿಸಲಾಗಿತ್ತು, ಆದರೆ ಕೆರೆ ಪೂರ್ಣ ತುಂಬಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ, ಈ ಹಿನ್ನೆಲೆಯಲ್ಲಿ ರೈತರು, ಜನರಜತೆ ನಡೆಸಿದ ಸಂಧಾನವೂ ಫಲ ನೀಡಿಲ್ಲ, ಶೇ.50 ರಷ್ಟು ಕೆರೆ ತುಂಬಿಸಿ ಮುಂದಿನ ಕೆರೆಗೆ ನೀರು ಹರಿಸಲು ಸಂಧಾನ ನಡೆಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಮಾರ್ಗದುದ್ದಕ್ಕೂ ಚೆಕ್ ಡ್ಯಾಂಗಳ ಸಾಮಥ್ರ್ಯವೂ ಹೆಚ್ಚಿರುವುದಿರಂದ ನೀರು ಬೇಗ ಮುಂದಿನ ಕೆರೆಗಳಿಗೆ ಹರಿಯುತ್ತಿಲ್ಲ, ಜತೆಗೆ ಶೇ.70 ರಷ್ಟು ನೀರನ್ನು ಗುರುತ್ವಾಕರ್ಷಣೆ ಮೂಲಕವೇ ಹರಿಸುತ್ತಿದ್ದು, ಈ ಮಾರ್ಗದಲ್ಲಿ ಮರಳುಗಾರಿಕೆಯೂ ಕೆರೆಯ ನೀರಿನ ಹಿಡಿತದ ಸಾಮಥ್ರ್ಯ ಕಡಿಮೆಯಾಗಲು ಕಾರಣವಾಗಿದೆ ಎಂದು ಉತ್ತರ ನೀಡಿದರು.
ನೀರು ಹರಿಯುವ ಮಾರ್ಗದಲ್ಲಿ ರೈತರು ಅನಧಿಕೃತವಾಗಿ ನೀರನ್ನು ಪಂಪ್ ಮಾಡುತ್ತಿದ್ದು, ಈಗಾಗಲೇ ಕಂದಾಯ ನಿರೀಕ್ಷಕರ ನೇತೃತ್ವದಲ್ಲಿ ದಾಳಿ ನಡೆಸಿ ಹಲವಾರು ಪ್ರಕರಣಗಳಲ್ಲಿ ಪಂಪ್ ವಶಕ್ಕೆ ಪಡೆದು ಕ್ರಮ ಜರುಗಿಸಲಾಗಿದೆ, ಜತೆಗೆ ಈ ಸಂಬಂಧ ಕಠಿಣ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಸಚಿವರು ತಿಳಿಸಿದರು.
ಮುಖ್ಯಮಂತ್ರಿಗಳು ಕಳೆದ 2019ರ ಡಿ.19 ರಂದು ನಡೆಸಿದ ಸಭೆಯಲ್ಲಿ ಪೂರ್ಣ ಪ್ರಮಾಣದ 400 ಎಂಎಲ್‍ಡಿ ನೀರನ್ನು 2020ರ ಏ.23 ರೊಳಗೆ ಹರಿಸುವುದಾಗಿ ತಿಳಿಸಿದ್ದರು. ನಂತರ 2020ರ ಜೂನ್‍ನಲ್ಲಿ ನಡೆದ ಸಭೆಯಲ್ಲಿ ಸಿಎಂ ಅವರು 2020ರ ಅಂತ್ಯದೊಳಗೆ 400 ಎಂಎಲ್‍ಡಿ ಹರಿಸುವ ಭರವಸೆ ನೀಡಿದ್ದರು ಎಂದು ಸದನದ ಗಮನಕ್ಕೆ ವೈಎ.ಎನ್ ತಂದರು.
ಆದ್ದರಿಂದ ಕೂಡಲೇ ಕರಾರಿನಂತೆ ಪೂರ್ಣ ಪ್ರಮಾಣದಲ್ಲಿನೀರು ಹರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ವಿಧಾನಪರಿಷತ್‍ನಲ್ಲಿ ಡಾ.ವೈ.ಎ.ನಾರಾಯಣಸ್ವಾಮಿ ಸಚಿವರನ್ನು ಒತ್ತಾಯಿಸಿದರು