ಕೆ.ಸಿ.ರೆಡ್ಡಿರವರ ಹುಟ್ಟೂರಿನಲ್ಲಿ ನಿವಾಸಿ ವೈದ್ಯರಿಲ್ಲ, ಆಂಬ್ಯುಲೆನ್ಸ್ ಸೇವೆಯಿಲ್ಲ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ ಮಾ. 22 : ರಾಜ್ಯದ ಮುಖ್ಯಮಂತ್ರಿ ಕೆ.ಸಿ.ರೆಡ್ಡಿರವರ ಹುಟ್ಟೂರಿನಲ್ಲಿ ನಿವಾಸಿ ವೈದ್ಯರಿಲ್ಲ, ಆಂಬ್ಯಲೆನ್ಸ್ ಸೇವೆ ಇಲ್ಲ. ನಿವಾಸಿ ವೈದ್ಯರನ್ನು ಕೂಡಲೇ ನೇಮಿಸಬೇಕು ಮತ್ತು ಅಂಬ್ಯುಲೆನ್ಸ್ ವ್ಯವಸ್ಥೆಯನ್ನು ಕಲ್ಪಿಸಲು, ಕ್ಯಾಸಂಬಳ್ಳಿ ಹೋಬಳಿಯ ಸುತ್ತಮುತ್ತಲಿನ 130 ಹಳ್ಳಿಗಳ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಿಂದ ಉನ್ನತ ವ್ಯಾಸಂಗಕ್ಕೆ ಒಂದೇ ಸೂರಿನಡಿ ವ್ಯವಸ್ಥೆ ಕಲ್ಪಿಸಿಕೊಡಲು ಸರ್ವೇ ನಂ.121ರಲ್ಲಿ 21ಎಕರೆ 30 ಗುಂಟಿಯನ್ನು ಕಾಯ್ದಿರಿಸಿ 50 ಕೋಟಿ ಅನುದಾನ ಬಿಡುಗಡೆ ಮಾಡಲು ಜಿಲ್ಲಾಡಳಿತವು ಸರ್ಕಾರಕ್ಕೆ ಶಿಫಾರರಸ್ಸು ಮಾಡಲು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ರೈತ ನಾಯಕ ಪ್ರೊ. ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರೈತ ಸಂಘ ಒತ್ತಾಯಿಸಿತು.
ಹಲವು ವಿಚಾರಗಳಲ್ಲಿ ರಾಜ್ಯಕ್ಕೆ ಬಹಳಷ್ಟು ಕೊಡುಗೆಯನ್ನು ನೀಡಿರುವ ಜಿಲ್ಲೆ. ಅದೇ ರೀತಿ ಕರ್ನಾಟಕ ರಾಜ್ಯಕ್ಕೆ ಮೊದಲ ಮುಖ್ಯಮಂತ್ರಿಯನ್ನು ಕೊಟ್ಟಂತಹ ಜಿಲ್ಲೆಯಾಗಿ ಹೆಸರುವಾಸಿಯಾಗಿದೆ. ಆದರೆ ಮೊದಲ ಮುಖ್ಯಮಂತ್ರಿ ಶ್ರೀ ಕೆ.ಸಿ.ರೆಡ್ಡಿರವರ ಹುಟ್ಟೂರಾದ ಕ್ಯಾಸಂಬಳ್ಳಿ ಹೋಬಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿವಾಸಿ ವೈದ್ಯರಿಲ್ಲದೆ ಸುತ್ತಮುತ್ತಲಿನ 130 ಹಳ್ಳಿಗಳ ಜನ ಪರದಾಡುವಂತಾಗಿದೆ. ಅಲ್ಲಿ ಇದ್ದಂತಹ ವೈದ್ಯಾಧಿಕಾರಿ ಕೆಜಿಎಫ್ ತಾಲ್ಲೂಕು ಆರೋಗ್ಯಾಧಿಕಾರಿಯಾಗಿ ಮುಂಬಡ್ತಿ ಪಡೆದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಇವರ ಖಾಲಿಯಾದ ಸ್ಥಾನಕ್ಕೆ ದಿನಕ್ಕೊಬ್ಬರಂತೆ ವೈದ್ಯಾಧಿಕಾರಿಗಳನ್ನು ನೇಮಿಸಿದ್ದಾರೆ.
ಇದು ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯಾಗಿದ್ದು, ರಾತ್ರಿ ಸಮಯದಲ್ಲಿ ಹೆಣ್ಣುಮಕ್ಕಳಿಗೆ ಹೆರಿಗೆ ಸಂದರ್ಭದಲ್ಲಿ ಹಾಗೂ ಗಡಿ ಭಾಗದಲ್ಲಿ ಹಲವು ಸಾರ್ವಜನಿಕರು ಹಲವಾರು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದು ಪ್ರಥಮ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಹೋದರೆ ಅಲ್ಲಿ ವೈದ್ಯಾಧಿಕಾರಿ ಇರುವುದಿಲ್ಲ. ಅಲ್ಲಿಂದ ತಾಲ್ಲೂಕು ಆಸ್ಪತ್ರೆಗೆ ಅಥವಾ ಜಿಲ್ಲಾಸ್ಪತ್ರೆಗೆ ಬರುವಷ್ಠರಲ್ಲಿ ಹಲವಾರು ಪ್ರಾಣವನ್ನು ಕಳೆದುಕೊಂಡಿರುವ ಉದಾಹರಣೆಗಳು ಇವೆ. ಹಾಗೆಯೇ ರಸ್ತೆ ಅಪಘಾತವಾದ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆಗೆ ಹತ್ತಿರದಲ್ಲಿ ವೈದ್ಯರ ಕೊರತೆಯಿಂದ ಬಹಳಷ್ಟು ನೋವು ಅನುಭವಿಸುತ್ತಿದ್ದಾರೆ.
ಅಲ್ಲಿ ಸರ್ಕಾರಿ ಅಂಬ್ಯೂಲೆನ್ಸ್ ವ್ಯವಸ್ಥೆಯೂ ಇರುವುದಿಲ್ಲ. ಯಾವುದೋ ಖಾಸಗಿಯವರು ನೀಡಿರುವ ಆಂಬ್ಯುಲೆನ್ಸ್ ಇದೆ. ಆ ಆಂಬ್ಯುಲೆನ್ಸ್‍ಗೆ ಸಾರ್ವಜನಿಕರು ಡೀಸೆಲ್ ತುಂಬಿಸಿದರೆ ಮಾತ್ರ ಅಂಬ್ಯುಲೆನ್ಸ್ ಸೇವೆ ಸಿಗುತ್ತದೆ. ಈ ರೀತಿಯ ತೊಂದರೆ ಸಾರ್ವಜನಿಕರಿಗೆ ಉಂಟಾಗುತ್ತಿದ್ದು, ಸರ್ಕಾರ ಆಂಬ್ಯುಲೆನ್ಸ್ ಸೇವೆ ಬಹಳಷ್ಟು ಹಣ ವ್ಯಯ ಮಾಡುತ್ತಿದ್ದರೂ ರಾಜ್ಯದ ಮೊದಲ ಮುಖ್ಯಮಂತ್ರಿ ಕೊಟ್ಟ ಕ್ಯಾಸಂಬಳ್ಳಿ ಹೋಬಳಿ ಆರೋಗ್ಯ ಕೇಂದ್ರವನ್ನು ಮರೆತಿರುವುದು ಜಿಲ್ಲಾ ಆರೋಗ್ಯ ಇಲಾಖೆಯ ಗಮನಕ್ಕೆ ಬಂದಿದ್ದರೂ ಸಹ ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕೂಡಲೇ ಜಿಲ್ಲಾ ಆರೋಗ್ಯಾಧಿಕಾರಿಯನ್ನು ಬದಲಾವಣೆ ಮಾಡಿ ಕ್ಯಾಸಂಬಳ್ಳಿ ಆರೋಗ್ಯ ಕೇಂದ್ರಕ್ಕೆ ನಿವಾಸಿ ವೈದ್ಯರನ್ನು ನೇಮಕ ಮಾಡಿ ಖಾಯಂ ಆಂಬ್ಯುಲೆನ್ಸ್‍ನ್ನು ವ್ಯವಸ್ಥೆ ಮಾಡಬೇಕೆಂದು ಜಿಲ್ಲಾಧಿಕಾರಿಗಳಲ್ಲಿ ಕೋರಿದ್ದಾರೆ.
ಕೋಲಾರ ಜಿಲ್ಲೆ ಹಲವು ವಿಚಾರಗಳಲ್ಲಿ ರಾಜ್ಯಕ್ಕೆ ಬಹಳಷ್ಟು ಕೊಡುಗೆಯನ್ನು ನೀಡಿರುವ ಜಿಲ್ಲೆ. ಅದೇ ರೀತಿ ಕರ್ನಾಟಕ ರಾಜ್ಯಕ್ಕೆ ಮೊದಲ ಮುಖ್ಯಮಂತ್ರಿಯನ್ನು ಕೊಟ್ಟಂತಹ ಜಿಲ್ಲೆಯಾಗಿ ಹೆಸರುವಾಸಿಯಾಗಿದೆ. ಆದರೆ ಮೊದಲ ಮುಖ್ಯಮಂತ್ರಿ ಶ್ರೀ ಕೆ.ಸಿ.ರೆಡ್ಡಿರವರ ಹುಟ್ಟೂರಾದ ಕ್ಯಾಸಂಬಳ್ಳಿ ಹೋಬಳಿಯ ಸುತ್ತಮುತ್ತಲು 130 ಹಳ್ಳಿಗಳನ್ನು ಒಳಗೊಂಡಿದ್ದು, ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಮೂಲಭೂತ ಸೌಕರ್ಯದ ಕೊರತೆ ಎದ್ದು ಕಾಣುತ್ತಿದೆ. ಅಲ್ಲದೆ ಸ್ಥಳದ ಕೊರತೆಯು ಇರುತ್ತದೆ.
ಸುತ್ತಮುತ್ತಲ ಹಳ್ಳಿಗಳ ವಿದ್ಯಾರ್ಥಿಗಳಿಗೆ ಅನುವಾಗುವಂತೆ ಸರ್ವೇ ನಂ 121ರಲ್ಲಿ 21 ಎಕರೆ 30 ಗುಂಟೆಯಲ್ಲಿ ಕೆಜಿಎಫ್ ತಹಸೀಲ್ದಾರ್ ರವರು 2 ಎಕರೆ ಮಾತ್ರ ಮಂಜೂರು ಮಾಡಿದ್ದು, ಉಳಿದ ಜಾಗವು ಬೇರೆಯವರು ಅನುಭವದಲ್ಲಿ ಇದ್ದಾರೆಂದು ಹೇಳುತ್ತಿದ್ದಾರೆ. ಆದರೆ 2 ಎಕರೆಯಲ್ಲಿ ಶಾಲಾ ಕಟ್ಟಡ, ಆಟದ ಮೈದಾನ, ಪಠ್ಯೇತರ ಚಟುವಟಿಕೆಗಳಿಗೆ 2 ಎಕರೆ ಜಾಗ ಸಾಕಾಗುವುದಿಲ್ಲ.
ಸರ್ವೇ ನಂ. 121ರಲ್ಲಿ 21 ಎಕರೆ 30 ಗುಂಟೆ ಜಮೀನಿದ್ದು, ಪ್ರಾಥಮಿಕ ಹಂತದಿಂದ ಉನ್ನತ ವ್ಯಾಸಂಗಕ್ಕೆ ಒಂದೇ ಸೂರಿನಡಿ ವ್ಯಾಸಂಗ ಮಾಡಲು ಒಟ್ಟು ವಿಸ್ತೀರ್ಣವನ್ನು ಜಿಲ್ಲಾಡಳಿತವು ಮಂಜೂರು ಮಾಡಿಕೊಡಬೇಕು. ಮಾದರಿ ಹೋಬಳಿಯ ಶಾಲಾ-ಕಾಲೇಜು ಆಗಿ ರೂಪಿಸಬೇಕು 50 ಕೋಟಿ ಅನುದಾನವನ್ನು ಬಿಡುಗಡೆ ಮಾಡಲು ಸರ್ಕಾರಕ್ಕೆ ಜಿಲ್ಲಾಡಳಿತದ ವತಿಯಿಂದ ಶಿಫಾರಸ್ಸು ಮಾಡಲು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು.
ರೈತ ನಾಯಕ ಪ್ರೊ. ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಯುವ ಘಟಕದ ರಾಜ್ಯಾಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ನಾರಾಯಣಸ್ವಮಿ, ಜಿಲ್ಲಾ ಗೌರವಾಧ್ಯಕ್ಷ ಕೊಲದೇವಿ ಗೋಪಾಕೃಷ್ಣಮೂರ್ತಿ, ಮುಳಬಾಗಿಲು ತಾಲ್ಲೂಕು ಅಧ್ಯಕ್ಷ ಎಲ್.ಎನ್.ಬಾಬು, ಕೋಲಾರ ತಾಲ್ಲೂಕು ಅಧ್ಯಕ್ಷ ಪಿ.ಎಂ.ಜಗನ್ನಾಥರೆಡ್ಡಿ, ಮುಳಬಾಗಿಲು ನಗರ ಅಧ್ಯಕ್ಷ ಹೆಚ್.ಎಂ.ಆರ್. ಸತೀಶ್, ಕೊಲದೇವಿ ಯಶ್ವಂತ್ ಹಾಜರಿದ್ದರು.