ಕೋಲಾರ,ಮಾ.23: ದಿ.ಕರ್ನಾಟಕ ಪ್ರಿಂಟರ್ಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ ಬೆಂಗಳೂರು ಇದರ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕೋಲಾರ ಜಿಲ್ಲೆಯ ಹಿರಿಯ ಸಹಕಾರಿ ಅಬ್ಬಣಿ ಶಂಕರ್ ಹಾಗೂ ಉಪಾಧ್ಯಕ್ಷರಾಗಿ ಬೆಂಗಳೂರಿನ ಎಸ್.ಶಿವರಾಮ್ ಅವಿರೋಧವಾಗಿ ಆಯ್ಕೆಯಾದರು.
ಸಂಘದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಬ್ಬಣಿ ಶಂಕರ್ ಮತ್ತು ಶಿವರಾಮ್ ವಿರುದ್ಧ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವರ ಆಯ್ಕೆಯನ್ನು ಘೋಷಿಸಲಾಯಿತು.
ಅಬ್ಬಣಿ ಶಂಕರ್ ರವರು ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿದ್ದೋದ್ಧೇಶ ಸಹಕಾರ ಸಂಘದ ಉಪಾಧ್ಯಕ್ಷರಾಗಿ, ಜಿಲ್ಲಾ ಸರಬರಾಜು ಮತ್ತು ಮಾರಾಟ ಸಂಘದ ನಿರ್ದೇಶಕರಾಗಿ ಮತ್ತು ಹಲವಾರು ಸಂಘ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಉಳಿದಂತೆ ಸಂಘದ ನಿರ್ದೇಶಕ ಸ್ಥಾನಗಳಿಗೆ ಮರಿಯಪ್ಪ, ಎಲ್.ಮುರಳಿಕೃಷ್ಣ, ಜೆ.ಎಸ್.ವೀರಣ್ಣ, ಕೆ.ಶಂಕರ್, ಎಸ್.ಶಿವರಾಮ್, ಬಿ.ಸುನಿಲ್, ಮಂಜುಳಾ ಶಂಕರ್, ಅಬ್ಬಣಿ ಶಂಕರ್, ಶಂಕರಾಚಾರಿ, ಪಿ.ಸುಧಾಕರ್ ಹಾಗೂ ಪಿ.ಶ್ರೀನಿವಾಸಲು ಆಯ್ಕೆಯಾಗಿದ್ದರು.
ಮುಂದಿನ 5 ವರ್ಷಗಳ ಅವಧಿಗೆ ಈ ಆಯ್ಕೆ ನಡೆದಿದ್ದು, ಚುನಾವಣಾಧಿಕಾರಿಗಳಾಗಿ ಸಹಕಾರ ಸಂಘಗಳ ನಿಬಂಧಕರ ಕಚೇರಿಯ ಅಧಿಕಾರಿ ಕೆ.ಸವಿತಾ ಕಾರ್ಯನಿರ್ವಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ನೂತನ ಅಧ್ಯಕ್ಷ ಅಬ್ಬಣಿ ಶಂಕರ್, ಎಲ್ಲ ನಿರ್ದೇಶಕರ ಸಹಕಾರ ಪಡೆದು ಸಂಘವನ್ನು ಆರ್ಥಿಕವಾಗಿ ಬಲಗೊಳಿಸುವುದರ ಜೊತೆಗೆ ಸದಸ್ಯರ ಆರ್ಥಿಕ ಅಭಿವೃದ್ಧಿಗೆ ಅಗತ್ಯವಾದ ನೆರವು ಒದಗಿಸುವ ಶಕ್ತಿಯನ್ನು ಗಳಿಸಿಕೊಳ್ಳಲು ತಾವೆಲ್ಲಾ ಪ್ರಯತ್ನ ಹಾಕಲಿದ್ದು ಅದಕ್ಕೆ ಸಂಘದ ಎಲ್ಲ ನಿರ್ದೇಶಕರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಸಹಕಾರ ಸಂಘಗಳು ಪಾರದರ್ಶಕ ಆಡಳಿತದಿಂದ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ, ಈ ನಿಟ್ಟಿನಲ್ಲಿ ಸಂಘದಲ್ಲಿ ನಡೆಯುವ ಎಲ್ಲಾ ಆರ್ಥಿಕ ಚಟುವಟಿಕೆಗಳನ್ನು ಎಲ್ಲಾ ನಿರ್ದೇಶಕರ ಗಮನಕ್ಕೆ ತಂದು ಸಹಕಾರ ಪಡೆದು ನಡೆಸುವ ಮೂಲಕ ಸಂಘದಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ನುಸುಳದಂತೆ ಎಚ್ಚರವಹಿಸುವುದಾಗಿ ಭರವಸೆ ನೀಡಿದರು.
ಸೊಸೈಟಿಗೆ ಸಾಲ ವಿತರಣೆ ಜೊತೆಗೆ ಠೇವಣಿ ಹೆಚ್ಚಿಸುವ ಮೂಲಕ ಮತ್ತಷ್ಟು ಸದಸ್ಯರಿಗೆ ನೆರವಾಗಲು ಅವಕಾಶವಿದ್ದು, ಎಲ್ಲಾ ನಿರ್ದೇಶಕರು ಈ ಕಾರ್ಯದಲ್ಲಿ ಕೈಜೋಡಿಸಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಎಲ್ಲ ನಿರ್ದೇಶಕರು, ಪ್ರಭಾರ ಕಾರ್ಯದರ್ಶಿ ಜಿ.ವಿಜಯ, ಕಚೇರಿ ಸಹಾಯಕ ನವೀನ್ ಉಪಸ್ಥಿತರಿದ್ದರು.