ಕಾರ್ಕಳ : ಅತ್ತೂರಿನ ಪ್ರತಿಷ್ಠಿತ ಸಂತ ಲಾರೆನ್ಸರ ಬಾಸಿಲಿಕದ ಆವರಣ ಮತ್ತು ಮುಂಭಾಗದಲ್ಲಿ ಐಸಿವೈಎಂ ಯುವಕರು ಹಣತೆ ಹಚ್ಚುವ ಮೂಲಕ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಹಿಂದೂ-ಮುಸ್ಲಿಂ- ಕ್ರೈಸ್ತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕ್ಯಾಂಡಲ್ ಹೊತ್ತಿಸಿ ಹರಕೆ ಹಾಕುವುದು ಇಲ್ಲಿ ಮಾಮೂಲು. ಆದರೆ ದೀಪಾವಳಿ ಹಬ್ಬದ ಈ ಸಂದರ್ಭದಲ್ಲಿ ಐಸಿವೈಎಂ ಯುವ ಸಂಘಟನೆಯ ಸದಸ್ಯರು ಮತ್ತು ಕ್ರೈಸ್ತ ಬಾಂಧವರು ಹಣತೆ ಹಚ್ಚುವ ಮೂಲಕ ದೀಪಾವಳಿ ಹಬ್ಬದ ಸೌಹಾರ್ದತೆಯ ಮಹತ್ವವನ್ನು ಸಮಾಜಕ್ಕೆ ಸಾರಿದರು.
ಅತ್ತೂರು ಬಾಸಿಲಿಕಾದ ನಿರ್ದೇಶಕರಾದ ವo. ಫಾ. ಆಲ್ಬನ್ ಡಿಸೋಜ ಮತ್ತು ವo. ಫಾ. ಲ್ಯಾರಿ ಇವರ ಮಾರ್ಗದರ್ಶನದಲ್ಲಿ ಐಸಿವೈಎಂ ಸದಸ್ಯರು ದೇವಾಲಯದ ಮುಂಭಾಗದಲ್ಲಿ ಮತ್ತು ಆವರಣದಲ್ಲಿ ಹಣತೆ ಹಚ್ಚಿ, ಸರ್ವಧರ್ಮದ ಅನ್ಯೋನತೆಗಾಗಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಪರಿಸರ ಸ್ನೇಹಿ ಸುಡುಮದ್ದು ಸಿಡಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಐಸಿವೈಎಂ ಸಚೇತಕ ರೋಷನ್, ಅಧ್ಯಕ್ಷ ಆರೋನ್ ಮತ್ತು ಯುವ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.