ಶ್ರೀನಿವಾಸಪುರ: ಶ್ರೀನಿವಾಸಪುರ ತಾಲ್ಲೂಕಿನ ಯಲ್ದೂರು ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಉದ್ಘಾಟಿಸಿದರು. “ದಿನನಿತ್ಯದ ವ್ಯವಹಾರದಲ್ಲಿ ಕನ್ನಡ ಬಳಸಿ” ಗಡಿನಾಡಿನ ಜನರು ತಮ್ಮ ದಿನನಿತ್ಯದ ವ್ಯವಹಾರದಲ್ಲಿ ಕನ್ನಡ ಭಾಷೆ ಬಳಸುವುದರ ಮೂಲಕ ಭಾಷಾಭಿವೃದ್ಧಿಗೆ ಸಹಕರಿಸಬೇಕು. ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಟೊಂಕಕಟ್ಟಿ ನಿಲ್ಲಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ತಾಲ್ಲೂಕಿನ ಯಲ್ದೂರು ಗ್ರಾಮದಲ್ಲಿ ಯಲ್ದೂರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಭಾಷೆಯೊಂದಿಗೆ ಕನ್ನಡಿಗರ ಬದುಕು ಹಸನಾಗಬೇಕು. ಸರ್ಕಾರ ಅದಕ್ಕೆ ಪೂರಕವಾದ ಯೋಜನೆಗಳನ್ನು ರೂಪಿಸಿ ಜಾರಿಗೆ ತರಬೇಕು ಎಂದು ಹೇಳಿದರು.
ತಾಲ್ಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಸಂಕಲ್ಪ ಕೈಗೊಳ್ಳಲಾಗಿದೆ. ತಾಲ್ಲೂಕಿನ ಯುವ ಜನರಿಗೆ ಉದ್ಯೋಗ ಕಲ್ಪಿಸುವ ದೃಷ್ಟಿಯಿಂದ ಮುಳಗಾಗಿಲು ಮತ್ತು ಮತ್ತು ಮದನಪಲ್ಲಿ ರಸ್ತೆ ಸಮೀಪ ಸುಮಾರು 5 ಸಾವಿರ ಎಕರೆ ವಿಸ್ತೀರ್ಣದಲ್ಲಿ ಕೈಗಾರಿಕಾ ಪ್ರದೇಶ ನಿರ್ಮಿಸಲಾಗುತ್ತಿದೆ. ಅದಕ್ಕೆ ರೈತ ಸಮುದಾಯ ಹಾಗೂ ವಿವಿಧ ಪಕ್ಷಗಳ ಮುಖಂಡರು ಸಹಕಾರ ನೀಡಬೇಕು. ಅಭಿವೃದ್ಧಿಯಲ್ಲಿ ರಾಜಕೀಯ ಬೆರೆಸಲು ಹೋಗಬಾರದು ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್.ಬಿ.ಗೋಪಾಲಗೌಡ ಮಾತನಾಡಿ, ಕನ್ನಡ ಅತ್ಯಂತ ಪುರಾತನವಾದ ಭಾಷೆ. ಅತ್ಯಂತ ಸಂಪದ್ಭರಿತ ಭಾಷೆಯೂ ಹೌದು. ಹಾಗಾಗಿಯೇ ಕನ್ನಡ ಸಾಹಿತ್ಯಕ್ಕೆ 8 ಜ್ಞಾನಪೀಠ ಪ್ರಶಸ್ತಿಗಳು ಬಂದಿವೆ. ಬದುಕಿನೊಂದಿಗೆ ಭಾಷೆ ಬೆರೆತಿದೆ. ಹಾಗಾಗಿಯೇ ಅದು ಶತಮಾನಗಳಿಂದ ಉಳಿದುಬರಲು ಸಾಧ್ಯವಾಗಿದೆ ಎಂದು ಹೇಳಿದರು.
ಕನ್ನಡಿಗರನ್ನು ಒಟ್ಟುಗೂಡಿಸುವ ಹಾಗೂ ಕನ್ನಡಿಗರಿಗೆ ಭಾಷೆಯೊಂದಿಗೆ ಬದುಕು ಕಟ್ಟಿಕೊಡುವ ಉದ್ದೇಶದಿಂದ ಕರ್ನಾಟಕ ಏಕೀಕರಣಕ್ಕೆ ಹೋರಾಡಬೇಕಾಯಿತು. ಆ ಹೋರಾಟದಲ್ಲಿ ಹಲವು ಮಂದಿ ಸಾಹಿತಿ ಕಲಾವಿದರು ಹಾಗೂ ಕನ್ನಡಿಗರು ಭಾಗವಹಿಸಿದ್ದರು. ಅವರ ಕನಸು ನನಸಾಯಿತು. ಅವರನ್ನು ಸ್ಮರಿಸಬೇಕಾದುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ಯಲ್ದೂರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಅನಿಲ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎಚ್.ರೆಡ್ಡಪ್ಪ, ನಿಕಟಪೂರ್ವ ಅಧ್ಯಕ್ಷ ಕೆ.ಪ್ರಕಾಶಯ್ಯ,ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಆರ್.ಅಮರೇಶ್, ಕಾರ್ಯದರ್ಶಿ ಎಲ್.ಮುರಳಿ ಮೋಹನ್, ಸಮಾಜ ಸೇವಕ ಯಲ್ದೂರು ಮಣಿ, ಅಂಬರೀಶ್, ಎನ್.ಹರಿಕುಮಾರ್, ಮಂಜುನಾಥಗೌಡ, ಎನ್.ಹೇಮಾವತಿ, ಯಶೋದಮ್ಮ, ನಾಗರಾಜ, ನಾಗರತ್ನಮ್ಮ, ಜಿ.ಕೆ.ಮುರಳಿ, ಮಂಜುನಾಥಗೌಡ, ರೇಖಾ, ಎಚ್.ಆರ್.ರಾಧಾ, ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಜಯಕುಮಾರ್, ಸದಸ್ಯರಾದ ಕೆ.ಎನ್.ರಾಜೇಂದ್ರ, ಸೀತಮ್ಮ, ಪಿಡಿಒ ಜಿ.ಕೆ.ಮುರಳಿ, ಕೆ.ಕೆ.ಮಂಜುನಾಥ್, ನರಸಿಂಹ ಮಂಜುನಾಥಗೌಡ, ನಂಜಾರೆಡ್ಡಿ, ಕೆ.ಪಿ.ಶ್ರೀನಿವಾಸರೆಡ್ಡಿ ಮತ್ತಿತರರು ಇದ್ದರು.
ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಭುವನೇಶ್ವರಿ ಭಾವಚಿತ್ರ ಮೆರವಣಿಗೆ ಏರ್ಪಡಿಸಲಾಗಿತ್ತು. ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.