ಶ್ರೀನಿವಾಸಪುರ: ವಿಧಾನಸಭಾ ಕ್ಷೇತ್ರ ಗೌಡಹಳ್ಳಿ ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಜಿಲ್ಲಾ ಕನ್ನಡ ಸಾಹಿತ್ಯಪರಿಷತ್ತಿನ ಅಧ್ಯಕ್ಷ ಎನ್.ಬಿ.ಗೋಪಾಲಗೌಡ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಂಕರೇಗೌಡ, ಸಾಹಿತಿ ಆರ್.ಚೌಡರೆಡ್ಡಿ ಉದ್ಘಾಟಿಸಿದರು.
ನಾಡು ನುಡಿಯ ರಕ್ಷಣೆ ಎಲ್ಲರ ಹೊಣೆ -ಗೋಪಾಲಗೌಡ
ಶ್ರೀನಿವಾಸಪುರ ನಾಡು ನುಡಿಯ ರಕ್ಷಣೆ ನಾಡಿನ ಎಲ್ಲರ ಹೊಣೆ. ಕನ್ನಡ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಚರಿಸುವುದರ ಮೂಲಕ ಸಮಾಜದಲ್ಲಿ ಮೌಲ್ಯಗಳನ್ನು ಬಿತ್ತಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್.ಬಿ.ಗೋಪಾಲಗೌಡ ಹೇಳಿದರು.
ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರ ಗೌಡಹಳ್ಳಿ ಗ್ರಾಮದಲ್ಲಿ ಸ್ಥಳೀಯ ವಿನಾಯಕ ಗೆಳೆಯರ ಬಳಗದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಜನರ ನಡುವಿನ ದ್ವೇಷಾಸೂಯೆ ದೂರವಾಗಲು ಸಾಮೂಹಿಕ ಆಚರಣೆಗಳು ಸಹಕಾರಿ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಏಕೀಕರಣಕ್ಕೆ ಹಲವು ಸಾಹಿತಿ ಕಲಾವಿದರು ಹಾಗೂ ಮುಖಂಡರು ಶ್ರಮಿಸಿದ್ದಾರೆ. ಕೆಲವರು ಪ್ರಾಣಾರ್ಪಣೆ ಮಾಡಿರುವ ಉದಾಹರಣೆಗಳೂ ಇವೆ. ಅವರ ಶ್ರಮ ಹಾಗೂ ತ್ಯಾಗದ ಪ್ರತೀಕವಾಗಿ ಪಡೆದ ನಾಡಿನ ಅಭಿವೃದ್ಧಿಗೆ ಸಾಂಘಿಕ ಪ್ರಯತ್ನ ನಡೆಸಬೇಕು. ಕನ್ನಡ ಅತ್ಯಂತ ಪ್ರಾಚೀನ ಭಾಷೆಯಾಗಿದ್ದು, ಉತ್ಕøಷ್ಟ ಭಾಷೆಯೂ ಆಗಿದೆ. ಹಿಂದಿಯನ್ನು ಹೊರತುಪಡಿಸಿದರೆ, ಅತಿ ಹೆಚ್ಚು ಸಂಖ್ಯೆಯ ಜ್ಞಾನ ಪೀಠ ಪ್ರಶಸ್ತಿಗಳು ಕನ್ನಡ ಸಾಹಿತ್ಯಕ್ಕೆ ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
ಕೋಲಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಂಕರೇಗೌಡ ಮಾತನಾಡಿ, ಕನ್ನಡಿಗರು ಪರಸ್ಪರ ಪ್ರೀತಿ ವಿಶ್ವಾಸದಿಂದ ಬಾಳಬೇಕು. ಉತ್ತಮ ವಾತಾವರಣದಲ್ಲಿ ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ನಾಡು ನುಡಿಯ ರಕ್ಷಣೆಗಾಗಿ ಶ್ರಮಿಸಿರುವ ವ್ಯಕ್ತಿಗಳನ್ನು ಸ್ಮರಿಸಬೇಕು. ಅವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ಒಟ್ಟಾಗಿ ನಡೆಯಬೇಕು. ಕನ್ನಡ ಧ್ವಜದ ಆಯ್ಕೆ ಮತ್ತು ಹಾರಿಸುವುದರ ಹಿಂದೆ ದೊಡ್ಡ ಇತಿಹಾಸವಿದೆ ಎಂದು ಹೇಳಿದರು.
ಸಾಹಿತಿ ಆರ್.ಚೌಡರೆಡ್ಡಿ ಮಾತನಾಡಿ, ಭಾಷೆಗಿಂತ ಬದುಕು ದೊಡ್ಡದು. ಹಾಗಾಗಿಯೇ ಬದಲಾದ ಪರಿಸ್ಥಿತಿಯಲ್ಲಿ ಜನರು ಬದುಕು ಕಟ್ಟಿಕೊಳ್ಳಲು ಸಹಾಯಕವಾದ ಭಾಷೆಯ ಕಡೆ ವಾಲುತ್ತಿದ್ದಾರೆ. ಈ ಪರಿಸ್ಥಿತಿ ಬದಲಾಗಬೇಕಾದರೆ, ಸರ್ಕಾರ ಕನ್ನಡ ಭಾಷೆಯಿಂದ ಅನ್ನ ಸಿಗುವ ಯೋಜನೆಗಳ ಜಾರಿಗೆ ಒತ್ತು ನೀಡಬೇಕು. ನಗರಗಳಿಂದ ಕನ್ನಡ ಭಾಷೆ ಉಳಿದಿಲ್ಲ. ಗ್ರಾಮೀಣ ಜನರಿಂದ ಮಾತ್ರ ಭಾಷೆ ಬದುಕಲು ಸಾಧ್ಯ. ಗ್ರಾಮೀಣ ಪ್ರದೇಶದ ಜನರು ಜನಪದ ಸಾಹಿತ್ಯ ಹಾಗೂ ಕ್ರೀಡೆ ಹಾಗೂ ಸಂಸ್ಕøತಿಯ ಉಳಿವಿಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಚಿಕ್ಕಬಳ್ಳಾಪುರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್, ಗ್ರಾಮದ ಹಿರಿಯರಾದ ಗೋಪಾಲಪ್ಪ, ರೇಣುಕಮ್ಮ, ರವಿ, ಸೀನಪ್ಪ, ಶಂಕರಪ್ಪ, ಮುನೇಗೌಡ, ವೆಂಕಟೇಶಪ್ಪ, ಅಶ್ವತ್ಥನಾರಾಯಣಗೌಡ, ಶ್ರೀನಿವಾಸ್, ನಾಗರೆಡ್ಡಿ, ದಾಸಪ್ಪ, ಹರೀಶ್, ಮುನಿವೆಂಕಟಪ್ಪ ಸಮಾರಂಭದಲ್ಲಿ ಇದ್ದರು.