ಬೆಂಗಳೂರು;ಸೇಂಟ್ ಜೋಸೆಫ್ ಶಾಲೆಯಲ್ಲಿ 69ನೇ ಕನ್ನಡ ರಾಜ್ಯೋತ್ಸವವನ್ನು ದಿ: 21.11. 2024 ರಂದು ಬಹಳ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ 2024ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಮತ್ತು ಸಾಹಿತಿಗಳಾದ ರೆವರೆಂಟ್ ಫಾದರ್ ಪ್ರಶಾಂತ್ ವಿ ಮಾಡ್ತ ರವರು ಆಗಮಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದವರಾದ ಇವರ ಮಾತೃಭಾಷೆ ಕೊಂಕಣಿ. ಬೆಂಗಳೂರಿನ ವಿಶ್ವವಿದ್ಯಾಲಯದಲ್ಲಿ ಮೂರು ಚಿನ್ನದ ಪದಕಗಳನ್ನು ಗಳಿಸಿರುವ ಇವರು ಎಂಎ ಪದವಿಯಲ್ಲಿ ಮೊದಲ ರ್ಯಾಂಕ್ ಪಡೆದಿದ್ದಾರೆ. ವಿದ್ಯಾರ್ಥಿಯಾಗಿದ್ದಾಗ ಸುಂದರ ಕನ್ನಡ ಭಾಷೆಯ ಸೊಗಡನ್ನು ಬಳಸಿಕೊಂಡು ‘ ‘ಕೊಡಗಿನ ಬೆಡಗು’ ಎಂಬ ಲೇಖನವನ್ನು ಬರೆಯುವ ಮೂಲಕ ಕನ್ನಡ ಸಾಹಿತ್ಯದಲ್ಲಿ ಅಭಿರುಚಿಯನ್ನ ಬೆಳೆಸಿಕೊಂಡರು.
20 ವರ್ಷಗಳ ಸುದೀರ್ಘ ಪರಿಶ್ರಮದೊಂದಿಗೆ “ಕನ್ನಡ ಪದನಿಧಿ” ಎಂಬ ಸಮಾನಾರ್ಥಕ ಪದ, ವಿರುದ್ಧ ಪದ, ಗಾದೆಗಳನ್ನೊಳಗೊಂಡ ಬೃಹತ್ ಪದಕೋಶಗಳ ನಿಘಂಟನ್ನು ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ.
2018ರಲ್ಲಿ ವೀರಪ್ಪ ಮೊಯ್ಲಿ ಮತ್ತು ರಾಷ್ಟ್ರ ಕವಿ ಜಿ. ಎಸ್ ಶಿವರುದ್ರಪ್ಪನವರ ಉಪಸ್ಥಿತಿಯಲ್ಲಿ ಈ ಪುಸ್ತಕವು ಬಿಡುಗಡೆಯಾಯಿತು. ಈ ಪುಸ್ತಕದಲ್ಲಿ ‘ಕೋಪವನ್ನು ವ್ಯಕ್ತ ಪಡಿಸುವ 2000 ಪದಗಳಿದ್ದು, ಮಲೆನಾಡಿನ ಮಳೆಯ ಬಗ್ಗೆ 100 ಪದಗಳಿದ್ದು, ಮರಣದ ಬಗ್ಗೆ 1500 ಪದಗಳಿದ್ದು ಕನ್ನಡ ಭಾಷೆಯ ಸಿರಿ ಸಂಪತ್ತನ್ನು ಹೆಚ್ಚಿಸಿದೆ. ತಮ್ಮ ವೃತ್ತಿ ಬದುಕಿನಲ್ಲಿ ಸೇಂಟ್ ಅಲೋಶಿಯಸ್ ಕಾಲೇಜ್, ಸೇಂಟ್ ಜೋಸೆಫ್ ಕಾಲೇಜ್, ಪಾಂಡಿಚೇರಿ, ಹಂಪಿ, ಮಂಗಳೂರು, ವಿಶ್ವವಿದ್ಯಾಲಯಗಳಲ್ಲಿ 16 ಪ್ರತಿಷ್ಠಿತ ಹುದ್ದೆಗಳನ್ನು ಅಲಂಕರಿಸಿರುತ್ತಾರೆ. 10 ಸಾವಿರ ಕೊಂಕಣಿ ಪಡೆ ನುಡಿಗಳ ಪದಕೋಶ ರಚನೆಗೊಂಡಿದ್ದು, ಕನ್ನಡ, ಕೊಂಕಣಿ, ಇಂಗ್ಲೀಷ್ ಭಾಷೆಗಳಲ್ಲಿ ಒಟ್ಟು 17 ಪುಸ್ತಕಗಳನ್ನು ಬರೆದಿದ್ದಾರೆ. ಹೆಸರಾಂತ ಕೊಂಕಣಿ ಮತ್ತು ಕನ್ನಡ ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿರುತ್ತದೆ. ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಇವರು ಭಾಜನರಾಗಿರುತ್ತಾರೆ.
ಕರ್ನಾಟಕ ರಾಜ್ಯ ಸರ್ಕಾರವು ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ 2024ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿರುವುದು ಸಂತಸ ತಂದಿದೆ.
ಕಾರ್ಯಕ್ರಮದಲ್ಲಿ ಫಾದರ್ ಪ್ರಶಾಂತ್ ಮಾಡ್ತ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ” ಮನುಷ್ಯನ ಜೀವನದಲ್ಲಿ ಜನ್ಮದಿನ ಮಾತ್ರ ಪ್ರಮುಖವಲ್ಲ ನಾವು ಈ ಜಗತ್ತಿನಲ್ಲಿ ಏಕೆ?ಹುಟ್ಟಿದ್ದೇವೆ ಎಂಬುದಕ್ಕೆ ಕಾರಣ ಹುಡುಕಬೇಕು, ಸಾಧನೆಯೆಡೆಗೆ ಮುಖ ಮಾಡಬೇಕು, ಮತ್ತು ನಮ್ಮೊಳಗಿನ ಆತ್ಮಜ್ಞಾನದ ಅರಿವು ನಮ್ಮಲ್ಲಿ ಯಾವಾಗ ಮೂಡುತ್ತದೆಯೋ ಆ ಸುದಿನವೇ ನಮ್ಮ ಬಾಳಿನಲ್ಲಿ ಮರೆಯಲಾಗದ ಪ್ರಮುಖ ದಿನವೆಂದು ಅರಿತುಕೊಳ್ಳಬೇಕು. ಎಂದು ಹೇಳಿದರು.
ಶಾಲೆಯ ಪ್ರಾಂಶುಪಾಲರಾದ ಫಾ. ರೋಹನ್ ಡಿ ಅಲ್ಮೇಡ ನಾಡಗೀತೆಯಲ್ಲಿ ಅಡಕವಾಗಿರುವ ಧರ್ಮ ಸಹಿಷ್ಣತೆ, ನಾಡು, ನುಡಿಯನ್ನು ಪ್ರಶಂಶಿಸಿದರು.
ಶಾಲೆಯು ಪ್ರತಿ ವರ್ಷ ಮಕ್ಕಳಲ್ಲಿನ ಕನ್ನಡ, ಕಲೆ, ಸಾಹಿತ್ಯ, ಸಾಧನೆಯನ್ನು ಗುರುತಿಸಿ ” ಕನ್ನಡ ಕಣ್ಮಣಿ” ಪ್ರಶಸ್ತಿಯನ್ನು ನೀಡುತ್ತಾ ಬಂದಿದ್ದು. ಈ ವರ್ಷವೂ ಸಾಧನೆಗೈದ ಮಕ್ಕಳಿಗೆ ಪ್ರಶಸ್ತಿಯನ್ನು ನೀಡಿ ಅಭಿನಂದಿಸಲಾಯಿತು.
ವಿದ್ಯಾರ್ಥಿಗಳು ನಾಡ ಭಕ್ತಿಯನ್ನು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಫಾ. ಪ್ರಶಾಂತ್ ವಿ.ಮಾಡ್ತಾ, ಸೇಂಟ್ ಜೋಸೆಫ್ ವಿದ್ಯಾಸಂಸ್ಥೆಗಳ ಮುಖ್ಯಸ್ಥರಾದ ಫಾ|| ಜೋಸೆಫ್ ಡಿಸೋಜ, ಹಣಕಾಸಿನ ಮುಖ್ಯಸ್ಥರಾದ ಫಾ|| ವಿಶಾಲ್ ಪಿಂಟೋ , ಉಪ ಪ್ರಾಂಶುಪಾಲರಾದ ಸಿಸ್ಟರ್ ಶೀನಾ ಜೋಸೆಫ್ ಹಾಗೂ ಶಾಲಾ ಸಂಯೋಜಕರು ಉಪಸ್ಥಿತರಿದ್ದರು.