ಪತ್ರಿಕೋದ್ಯಮ ಸತ್ಯ, ನ್ಯಾಯ, ನೀತಿ ಹಾಗೂ ಸಂವಿಧಾನದ ಪರವಾಗಿರಬೇಕು: ದಿನೇಶ್ ಅಮೀನ್ ಮಟ್ಟು

JANANUDI.COM NETWORK

ಪತ್ರಿಕೋದ್ಯಮ ಶಾಂತಿ ಕಾಲದಲ್ಲೆ ಇರಲಿ ಅಥವಾ ಯುದ್ಧಕಾಲದಲ್ಲೇ ಇರಲಿ ಪಕ್ಷಪಾತಿ ಆಗಬಾರದು ಎಂಬ ಅಭಿಪ್ರಾಯ ಇದೆ. ನನ್ನ ಪ್ರಕಾರ ಹಾಗೆ ಪಕ್ಷಪಾತಿ ಆಗಿರುವುದರಲ್ಲಿ ಯಾವುದೇ ತಪ್ಪಿಲ್ಲ ಆದರೆ ಸಂವಿಧಾನದ ಪರ, ಸತ್ಯ ನ್ಯಾಯ, ಧರ್ಮದ ಪರ ಪಕ್ಷಪಾತಿ ಆಗಿರಬೇಕು, ಮಾನವತೆಯ ಪರ ಪಕ್ಷಪಾತಿ ಆಗಿರಬೇಕು. ಆಗ ಮಾತ್ರವೇ ಮಹಾತ್ಮ ಗಾಂಧಿಜೀಯವರ ರಾಮರಾಜ್ಯದ ಕನಸು ನನಸಾಗಲಿದೆ. ಅದುವೇ ನೈಜ ಪತ್ರಿಕಾಧರ್ಮ ಕೂಡ ಎಂದು ಹಿರಿಯ ಪತ್ರಕರ್ತ ಜನಪರ ಚಿಂತಕ ದಿನೇಶ್ ಅಮಿನ್ ಮಟ್ಟು ಹೇಳಿದ್ದಾರೆ.
ಅವರು ಆದಿತ್ಯವಾರ ಕುಂದಾಪುರದ ಕಲಾ ಮಂದಿರದಲ್ಲಿ ನಡೆದ ಕನ್ನಡ ಮೀಡಿಯಾ ಡಾಟ್ ಕಾಮ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕನ್ನಡ ಮೀಡಿಯಾ ಡಾಟ್ ಕಾಮ್ ವಡ್ಡರ್ಸೆ ರಘುರಾಮ ಶೆಟ್ಟಿಯವರ ಪರಂಪರೆಯನ್ನು ಮುಂದುವರಿಸುವಂತಾಗಲಿ ಎಂದು ಅವರು ಸುದ್ದಿಜಾಲತಾಣ ಉದ್ಘಾಟನೆಯ ಬಳಿಕ ಹೇಳಿದ್ದಾರೆ. ಇಂದು ಹೆಚ್ಚಿನ ಮುಖ್ಯವಾಹಿನಿ ಪತ್ರಿಕೆಗಳು ಹಾಗೂ ಚಾನಲ್ ಗಳು ಆಡಳಿತ ನಡೆಸುತ್ತಿರುವವರ ಪರ ಪಕ್ಷಪಾತದ ವರದಿ ಮಾಡುತ್ತಿವೆ. ಈ ಸಂಧರ್ಭದಲ್ಲಿ ಪರ್ಯಾಯ ಪತ್ರಿಕೋದ್ಯಮದ ಅಗತ್ಯ ಖಂಡಿತವಾಗಿಯೂ ಇದೆ. 110ದಿನಗಳನ್ನು ಸಮೀಪಿಸುತ್ತಿರುವ ದೆಹಲಿಯ ರೈತ ಚಳವಳಿ ಇಂದು ಜೀವಂತವಾಗಿರಲು ಈ ಪರ್ಯಾಯ ಪತ್ರಿಕೋಧ್ಯಮವೇ ಸಹಕಾರಿಯಾಗಿದೆಯೇ ಹೊರತೂ ಮುಖ್ಯವಾಹಿನಿ ಪತ್ರಿಕೋದ್ಯಮ ಅಲ್ಲ ಎಂಬುವುದನ್ನು ನಾವು ಒಪ್ಪಿಕೊಳ್ಳಲೇ ಬೇಕಿದೆ. ರೈತ ಚಳವಳಿಯನ್ನು ಬಿಜೆಪಿಯೇತರ ಪಕ್ಷಗಳು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದರೆ ಖಂಡಿತವಾಗಿಯೂ ಗ್ರಾಮಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಾಣುತ್ತಿತ್ತು ಆದರೆ ಅದು ಆಗದಿರುವುದು ವಿಪರ್ಯಾಸ. ಕನ್ನಡ ಮೀಡಿಯಾ ಡಾಟ್ ಕಾಮ್ ನಂತಹ ಸುದ್ದಿ ಜಾಲತಾಣಗಳ ಅಗತ್ಯತೆ ಇಂದಿನ ಸಮಾಜಕ್ಕೆ ಇದೆ. ಆ ಮೂಲಕ ದೇಶದ ನೈಜ ಸಮಸ್ಯೆಗಳಾದ ಹೊಸ ಶಿಕ್ಷಣ ನೀತಿ, ನೋಟು ನಿಷೇಧದ ದುಷ್ಪರಿಣಾಮ, ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮತ್ತದರ ದುಷ್ಪರಿಣಾಮ ಹಾಗೂ ರೈತ ವಿರೋಧಿ ಕೃಷಿ ಮಸೂದೆಗಳ ಕುರಿತು ಇಂತಹ ಸುದ್ದಿ ಜಾಲತಾಣಗಳು ಬೆಳಕು ಚೆಲ್ಲುವಂತಾಗಬೇಕು ಎಂದವರು ಹೇಳಿದರು.
ಈ ಸಂಧರ್ಭದಲ್ಲಿ ವೇದಿಕೆಯಲ್ಲಿ ಖ್ಯಾತ ನ್ಯಾಯವಾದಿ ಹಾಗೂ ಜನಪರ ಚಿಂತಕ ಸುದೀರ್ ಕುಮಾರ್ ಮುರೊಳ್ಳಿ, ಹೋರಾಟಗಾರ ಹಾಗೂ ವಾಗ್ಮಿ ನಿಕೇತ್ ರಾಜ್ ಮೌರ್ಯ ಹಾಗೂ ಕನ್ನಡ ಮೀಡಿಯಾ ಡಾಟ್ ಕಾಮ್ ನ ಪ್ರಧಾನ ಸಂಪಾದಕ ಚಂದ್ರಶೇಖರ ಶೆಟ್ಟಿ ಉಪಸ್ಥಿತರಿದ್ದರು.
ಚಂದ್ರಶೇಖರ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಹಿರಿಯ ಪತ್ರಕರ್ತ ಹಾಗೂ ಚಿಂತಕ ರಾಜರಾಂ ತಲ್ಲೂರು, ಖ್ಯಾತ ವ್ಯಂಗ್ಯಚಿತ್ರ ಕಾರರಾದ ಪಂಜು ಗಂಗೊಳ್ಳಿ ಹಾಗೂ ಜೇಮ್ಸ್‌ ವಾಜ್ ರವರು ಅತಿಥಿಗಳನ್ನು ಗೌರವಿಸಿದರು. ಉಪನ್ಯಾಸಕ ರಂಜಿತ್ ಕುಮಾರ್ ಶೆಟ್ಟಿ ವಕ್ವಾಡಿ ಇವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.