

ಶ್ರೀನಿವಾಸಪುರ:ಗಡಿ ಭಾಗದಲ್ಲಿ ಕನ್ನಡ ಸಾಹಿತ್ಯ ಸಂಭ್ರಮ ಜೀವಂತವಾಗಿರುವಂತೆ ನೋಡಿಕೊಳ್ಳಬೇಕು. ಯುವ ಸಮುದಾಯ ಸಾಹಿತ್ಯ ಕೃತಿಗಳ ಓದಿಗೆ ಹಿಂದಿರುಗಬೇಕು ಎಂದು ಜಿಲ್ಲಾ ಜೆಡಿಎಸ್ ಘಟಕದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ತಾಲ್ಲೂಕಿನ ಯಲ್ದೂರಿನ ನ್ಯಾಷನಲ್ ಹೈಸ್ಕೂಲ್ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಕನ್ನಡ ಪ್ರೀತಿಗೆ ಕೊರತೆಯಿಲ್ಲ. ಆದರೆ ಜನರು ತಮ್ಮ ದಿನನಿತ್ಯದ ವ್ಯವಹಾರದಲ್ಲಿ ಕನ್ನಡ ಬಳಕೆ ಮಾಡದಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಸರ್ಕಾರ ಗಡಿ ಪ್ರದೇಶದ ಕನ್ನಡ ಶಾಲೆಗಳ ಅಭಿವೃದ್ಧಿಗೆ ವಿಶೇಷ ಗಮನ ನೀಡಬೇಕು. ಕನ್ನಡ ಶಾಲೆಗಳಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ವಿಶೇಷ ಸೌಲಭ್ಯ ಒದಗಿಸಬೇಕು. ಉನ್ನತ ಶಿಕ್ಷಣದಲ್ಲಿ ಆದ್ಯತೆ ನೀಡಬೇಕು. ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಸರ್ಕಾರಿ ಉದ್ಯೋಗದಲ್ಲಿ ವಿಶೇಷ ಆದ್ಯತೆ ನೀಡಬೇಕು ಎಂದು ಹೇಳಿದರು.
ಸಾಹಿತಿ ಪನಸಮಾಕನಹಳ್ಳಿ ಆರ್.ಚೌಡರೆಡ್ಡಿ ಸಮಾರೋಪ ಭಾಷಣ ಮಾಡಿ, ತಾಲ್ಲೂಕಿನಲ್ಲಿ ಕನ್ನಡ ಭಾಷೆ ಅರಳುತ್ತಿದೆ. ಹಿಂದಿನ ಪರಿಸ್ಥಿತಿ ಈಗಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಮಾತನಾಡುವುದು ಫ್ಯಾಷನ್ ಆಗುತ್ತಿದೆ. ಮಕ್ಕಳು ತಮ್ಮ ಅಜ್ಜ , ಅಜ್ಜಿಯೊಂದಿಗೆ ಕನ್ನಡದಲ್ಲಿ ಮಾತನಾಡುತ್ತಿದ್ದಾರೆ. ಇದರಿಂದಾಗಿ ಹಿರಿಯರಿಗೂ ಕನ್ನಡ ಭಾಷೆ ಆಪ್ತವಾಗುತ್ತಿದೆ ಎಂದು ಹೇಳಿದರು.
ಜನಪ್ರತಿನಿಧಿಗಳು ಸಾರ್ವಜನಿಕ ಸಮಾರಂಭಗಳು ಹಾಗೂ ಕಚೇರಿ ಸಭೆಗಲಲ್ಲಿ ಪೂರ್ಣ ಪ್ರಮಾಣದಲ್ಲಿ ಕನ್ನಡ ಭಾಷೆ ಬಳಸಬೇಕು. ಅನಗತ್ಯವಾಗಿ ಅನ್ಯ ಭಾಷೆ ಬಳಸುವುದನ್ನು ಬಿಡಬೇಕು. ಜೀವನದಲ್ಲಿ ಕನ್ನಡ ಭಾಷೆಗೆ ಮೊದಲ ಆಧ್ಯತೆ ನೀಡಬೇಕು ಎಂದು ಹೇಳಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಡೆಸಲಾದ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನೆರವೇರಿದೆ. ಕನ್ನಡ ಮನಸ್ಸುಗಳ ಹಾಗೂ ಸಹೃದಯರ ಸಹಕಾರ ಹೀಗೆಯೇ ಮುಂದುವರಿಯಬೇಕು. ಸಮ್ಮೇಳನದ ನೆನಪು ಉಳಿಯಬೇಕು ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್.ಬಿ.ಗೋಪಾಲಗೌಡ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಪಿ.ಎಸ್.ಮಂಜುಳ, ಪದಾಧಿಕಾರಿಗಳಾದ ಎಂ.ಬೈರೇಗೌಡ, ಲಕ್ಷ್ಮಣರೆಡ್ಡಿ, ಶಂಕರೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೂಪಲ್ಲಿ ಆರ್.ನಾರಾಯಣಸ್ವಾಮಿ, ಮುಖಂಡ ಮಣಿ, ಮುಖ್ಯ ಶಿಕ್ಷಕ ಎಚ್.ಸಿ.ಮೋಕ್ಷಗುರು ಲಿಂಗಾರಾಧ್ಯ ಮತ್ತಿತರರು ಇದ್ದರು.