ಸಾಲ ಪಡೆಯಲು ಬಂದ ತಾಯಂದಿರ ಮುಡಿಯಲ್ಲಿ ರಾರಾಜಿಸಿದ ಕನಕಾಂಬರ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ತಾಲ್ಲೂಕಿನ ಅಣ್ಣಿಹಳ್ಳಿಯಲ್ಲಿ ಡಿಸಿಸಿ ಬ್ಯಾಂಕಿನಿಂದ ನಡೆದ ಸಾಲ ವಿತರಣಾ ಕಾರ್ಯಕ್ರಮದಲ್ಲಿ ಸಾಲ ಪಡೆಯಲು ಹಾಜರಿದ್ದ ಎಲ್ಲಾ ಮಹಿಳೆಯರ ಮುಡಿಯಲ್ಲಿ ಒಂದೇ ಮಾದರಿಯಲ್ಲಿ ಕನಕಾಂಬರ ರಾರಾಜಿಸುತ್ತಿದ್ದುದು ಕಂಡು ಬಂತು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡರು ಸಾಲ ವಿತರಿಸುವಾಗ ಪಾಲಿಸುವ ತಾಯಂದಿರಿಗೆ ಹರಿಸಿನ,ಕುಂಕುಮ,ಹೂ ನೀಡಿ ಮಡಿಲು ತುಂಬುವ ವಿಶಿಷ್ಟ ಸಂಪ್ರದಾಯದಿಂದಾಗಿ ಸಾಲ ಪಡೆಯಲು ಪಾಲ್ಗೊಂಡಿದ್ದ 600ಕ್ಕೂ ಹೆಚ್ಚು ಮಹಿಳೆಯರಲ್ಲಿ ಕನಕಾಂಬರ ಹೂ ರಾರಾಜಿಸಲು ಕಾರಣವಾಗಿತ್ತು.
ಮಹಿಳಾ ಸಂಘಗಳಿಗೆ ಇಡೀ ದೇಶದಲ್ಲೇ ಅತಿ ಹೆಚ್ಚು ಭದ್ರತೆ ರಹಿತ ಶೂನ್ಯ ಬಡ್ಡಿ ಸಾಲ ವಿತರಿಸುವ ಖ್ಯಾತಿಗೆ ಪಾತ್ರವಾಗಿರುವ ಕೋಲಾರ ಡಿಸಿಸಿ ಬ್ಯಾಂಕ್ ತಾಯಂದಿರು ತವರು ಮನೆ ಎಂದು ಭಾವಿಸಿದಂತೆಯೇ ಪ್ರತಿ ಬಾರಿ ಸಾಲ ವಿತರಿಸುವಾಗಲೂ ಹರಿಸಿನ,ಕುಂಕುಮ,ಹೂ ನೀಡಿ ಮಡಿಲು ತುಂಬುವ ಕೆಲಸ ಮಾಡುತ್ತದೆ.
ಅದೇ ಮಾದರಿಯಲ್ಲಿಯೇ ತಾಯಂದಿರೂ ಸಹಾ ಡಿಸಿಸಿ ಬ್ಯಾಂಕಿನಿಂದ ಪಡೆದ ಸಾಲವನ್ನು ಕಿಂಚಿತ್ತೂ ಚ್ಯೂತಿ ಬಾರದಂತೆ ಸಕಾಲಕ್ಕೆ ಮರುಪಾವತಿಸುವ ಮೂಲಕ ಬ್ಯಾಂಕಿನ ಹಿರಿಮೆಗೆ ಪಾತ್ರರಾಗಿದ್ದಾರೆ
.