ಶ್ರೀನಿವಾಸಪುರ: ಕನಕದಾಸರು ನಾಡು ಕಂಡ ಶ್ರೇಷ್ಠ ದಾರ್ಶನಿಕರು. ಓಬವ್ವನ ಶೌರ್ಯ ಮೆಚ್ಚುವಂಥದ್ದು ಎಂದು ತಹಶೀಲ್ದಾರ್ ಶಿರಿನ್ ತಾಜ್ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ಕುರುಬರ ಸಂಘದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಕನಕದಾಸ ಹಾಗೂ ಒನಕೆ ಓಬವ್ವ ಅವರ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕನಕದಾಸರು ತಮ್ಮ ಕೀರ್ತನೆಗಳು ಹಾಗೂ ಕೃತಿಗಳ ಮೂಲಕ ಸಮಾಜ ಸುಧಾರಣೆಗೆ ಪ್ರಯತ್ನಿಸಿದರು. ಸಂತ ಕವಿ ಕನಕದಾಸರ ಜೀವನ ಮಾನವ ಕುಲಕ್ಕೆ ದಾರಿದೀಪವಾಗಿದೆ. ಅವರ ಸಾಹಿತ್ಯ ಕೃತಿಗಳ ಓದು ಸಾಮಾಜಿಕ ಬದಲಾವಣೆಗೆ ದಾರಿಮಾಡಿಕೊಡುತ್ತದೆ. ಸಮಾಜದಲ್ಲಿ ಮೇಲು ಕೀಳು ಭಾವನೆ ಅಳಿಯಬೇಕು ಎಂಬ ಕನಕದಾಸರ ಆಶಯ ಸ್ವಾಗತಾರ್ಹ ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ, ವ್ಯವಸ್ಥಾಪಕ ಡಿ.ಆರ್.ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ, ಗ್ರೇಡ್ 2 ತಹಶೀಲ್ದಾರ್ ಕೆ.ಎಂ.ಜಯರಾಂ, ಶಿರಸ್ತೇದಾರ್ ಬಲರಾಮಚಂದ್ರೇಗೌಡ, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಪುರಸಭೆ ಮುಖ್ಯಾಧಿಕಾರಿ ಎಂ.ಜಯರಾಂ, ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಸಿ.ಎಂ.ವೆಂಕಟರವಣ, ಎಪಿಎಂಸಿ ಕಾರ್ಯದರ್ಶಿ ಉಮಾ, ಅಧಿಕಾರಿಗಳಾದ ಜನಾರ್ಧನ್, ವಿನೋದ್, ಮೂರ್ತಿ, ತಾಲ್ಲೂಕು ಕುರುಬರ ಸಂಘದ ಕಾರ್ಯದರ್ಶಿ ಎಂವೇಮಣ್ಣ, ಮುಖಂಡರಾದ ಶಿವರಾಮೇಗೌಡ, ಎಂ.ಮೂರ್ತಿ, ಕೆ.ವಿ.ಮಂಜುನಾಥ್, ಜಯರಾಮಪ್ಪ, ಗೋವಿಂದಗೌಡ, ಎಸ್.ಎಂ.ನಾರಾಯಣಸ್ವಾಮಿ, ಸುಜಾತಮ್ಮ, ಮೂರ್ತಿ ಇದ್ದರು.
ಮೆರವಣಿಗೆ: ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಕನಕದಾಸರು ಹಾಗೂ ಒನಕೆ ಓಬವ್ವ ಅವರ ಭಾವ ಚಿತ್ರಗಳ ಮೆರವಣಿಗೆ ಏರ್ಪಡಿಸಲಾಗಿತ್ತು. ತಾಲ್ಲೂಕಿನ ಬೇರೆ ಬೇರೆ ಕಡೆಗಳಿಂದ ಭಾವ ಚಿತ್ರಗಳೊಂದಿಗೆ ಬಂದಿದ್ದ 50ಕ್ಕೂ ಹೆಚ್ಚು ಬೆಳ್ಳಿ ರಥಗಳು, ಪಲ್ಲಕಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.