

ಕೆಜಿಎಫ್ :ದಾಸ ಶ್ರೇಷ್ಠ ಕವಿ ಕನಕದಾಸರು ನಿತ್ಯ ಸ್ಮರಣೀಯರೆಂದು, ಭಾರತೀಯ ದಾಸ ಸಾಹಿತ್ಯದ ಸಂಸ್ಕøತಿಯನ್ನು ಇಂದಿಗೂ ಉಳಿಸಿ ವಿಶ್ವಕ್ಕೆ ಮಾನವೀಯ ಮೌಲ್ಯಗಳನ್ನು ಸಾರಿದ ಮಹಾನ್‍ಚೇತನ ಕನಕದಾಸರೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೆ.ಧರಣೀದೇವಿ ಅವರು ನುಡಿದರು.
ಅವರು ಕೆಜಿಎಫ್‍ನ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಏರ್ಪಡಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಶ್ರದ್ದಾಭಕ್ತಿಯಿಂದ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಭಾವಪೂರ್ವ ಗೌರವವನ್ನು ಸಲ್ಲಿಸಿದ ಬಳಿಕ ಮಾತನಾಡಿ, ಕನಕದಾಸರು ನಮ್ಮ ನಡುವಿನ ಶಿಕ್ಷಾಗುರು ಮಾತ್ರವಲ್ಲ ಮೋಕ್ಷಾಗುರುವೂ ಹೌದು, ಮೋಕ್ಷವು ಸತ್ತಮೇಲೆ ಸಿಗುವಂತದ್ದಲ್ಲ, ಅದು ಬದುಕಿರುವಾಗಲೇ ಪಡೆಯುವ ಬಿಡುಗಡೆಯ ಉಪಾದಿ, ನಾನು ನೀನು ಎಂದು ಅಹಂ ತೋರದಿದ್ದರೆ ಅದೇ ಮೋಕ್ಷವೆಂದರು. ಕನಕದಾಸರ ಕನ್ನಡ ಪ್ರಜ್ಞೆ ಅಪಾರವಾದದ್ದು, ಅವರ ಕಾವ್ಯ ಸೂಕ್ಷ್ಮತೆಯನ್ನು ಅರ್ಥೈಸಿಕೊಳ್ಳಲು ಅವರ ಪದ ಪ್ರಯೋಗಗಳ ಜಾಡು ಕಂಡು ಹಿಡಿಯುವುದು ಅಷ್ಟು ಸುಲಭದ ಮಾತಲ್ಲವೆಂದು, ಕನ್ನಡ ಕೀರ್ತನಾ ಪರಂಪರೆಯನ್ನು ಬೆಳಗಿದ ಕನಕದಾಸರು ಆಧ್ಯಾತ್ಮ ಯಾತ್ರೆಯ ಮೂಲಕ ಈ ಜಗತ್ತಿನಲ್ಲಿ ನಿತ್ಯಸ್ಮರಣೀಯರಾಗಿದ್ದಾರೆಂದು ಜಿಲ್ಲಾ ರಕ್ಷಣಾಧಿಕಾರಿ ಡಾ|| ಕೆ.ಧರಣೀದೇವಿ ಅವರು ವಿವರಿಸಿದರು.
ಕನಕದಾಸರು ಈ ನಾಡು ಕಂಡ ಶ್ರೇಷ್ಠ ದಾಸರಲ್ಲಿ ಒಬ್ಬರಾಗಿದ್ದು, ಜೀವನಾನುಭವ, ಲೋಕಾನುಭವದ ಸತ್ಯಾಸತ್ಯತೆಗಳನ್ನು ಕಾವ್ಯದ ಮೂಲಕ ಜನಸಾಮಾನ್ಯರಿಗೆ ಸಮರ್ಪಿಸಿ, ಯಾರೂ ಜಾತಿಯ ಹೆಸರಲ್ಲಿ ಹೊಡೆದಾಡದಂತೆ ನೂರಾರು ವರ್ಷಗಳ ಹಿಂದೆಯೇ ಜಾತ್ಯ್ಯತೀತ ಸಮಾಜದ ನಿರ್ಮಾಣಕ್ಕಾಗಿ ಜನಜಾಗೃತಿ ಮೂಡಿಸಿದ ಮಹಾನ್ ವ್ಯಕ್ತಿಯೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕನಕದಾಸರ ಮೌಲ್ಯಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕೆಂದು ಎಸ್ಪಿ ಡಾ|| ಕೆ.ಧರಣೀದೇವಿ ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸರ್ಕಲ್ ಇನ್ಸ್‍ಪೆಕ್ಟರ್ ಕುಮಾರಸ್ವಾಮಿ, ನಿಸ್ತಂತು ಪಿಐ ನವೀನ್‍ಕುಮಾರ್, ಸಶಸ್ತ್ರ ಮೀಸಲು ಪಡೆಯ ಇನ್ಸ್‍ಪೆಕ್ಟರ್ ವಿ.ಸೋಮಶೇಖರ್, ಜಿಲ್ಲಾ ಪೊಲೀಸ್ ಕಛೇರಿಯ ಸಹಾಯಕ ಆಡಳಿತಾಧಿಕಾರಿ ಜಿ.ವಿಶ್ವನಾಥ, ಪಿ.ಎಸ್.ಐ. ಗಾಯತ್ರಿ, ಪ್ರಶಾಂತ್, ಆಪ್ತ ಸಹಾಯಕಿ ಜಿ.ಮಮತಾ, ಎಎಸ್‍ಐ ಸುಬ್ರಮಣಿ, ಕೃಷ್ಣಮೂರ್ತಿ, ಪಾರ್ಥಸಾರಥಿ, ರಾಮಚಂದ್ರರಾವ್ ಸೇರಿದಂತೆ ಜಿಲ್ಲಾ ಪೊಲೀಸ್ ಕಛೇರಿಯ ಅಧಿಕಾರಿ, ಲಿಪಿಕ ಸಿಬ್ಬಂದಿಗಳು ಹಾಜರಿದ್ದರು.


