ಶ್ರೀನಿವಾಸಪುರ: ಪಟ್ಟಣದಲ್ಲಿ ನ.30 ರಂದು ಕನಕ ಜಯಂತಿಯನ್ನು ಅರ್ಥಪೂರ್ಣವಾಗಿ ಹಾಗೂ ವಿಜೃಂಭಣೆಯಿಂದ ಆಚರಿಸಬೇಕು. ಕಾರ್ಯಕ್ರಮದಲ್ಲಿ ತಾಲ್ಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಕನಕ ಜಯಂತಿ ಆಚಣೆ ಬಗ್ಗೆ ಚರ್ಚಿಸಲು ಮಂಗಳವಾರ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮಕ್ಕೆ ಅಧಿಕಾರಿಗಳ ಗೈರುಹಾಜರಿ ಸಹಿಸಲಾಗದು. ಅಂದು ನಾನೇ ಅಧಿಕಾರಿಗಳ ಹಾಜರಾತಿ ಪಡೆಯುತ್ತೇನೆ ಎಂದು ಎಚ್ಚರಿಸಿದರು.
ಈ ಬಾರಿ ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಕನಕ ಜಯಂತಿ ಆಚರಿಸಲಾಗುವುದು. ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯಿತಿಯಿಂದಲೂ ಕನಕದಾಸರ ಭಾವಚಿತ್ರ ಒಳಗೊಂಡ ಪಲ್ಲಕಿಗಳು ಮೆರವಣಿಗೆಯಲ್ಲಿ ಭಾಗವಹಿಸಬೇಕು. ಈ ವಿಷಯದಲ್ಲಿ ಪಿಡಿಒಗಳು ಹೆಚ್ಚು ಆಸಕ್ತಿ ವಹಿಸಬೇಕು. ಮೆರವಣಿಗೆಯಲ್ಲಿ ಕಲಾ ತಂಡಗಳು ಭಾಗವಹಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ತಹಶೀಲ್ದಾರ್ ಜಿ.ಎನ್.ಸುಧೀಂದ್ರ ಮಾತನಾಡಿ, ಕನಕದಾಸರ ಮೇರು ವ್ಯಕ್ತಿತ್ವಕ್ಕೆ ತಕ್ಕಂತೆ ಜಯಂತಿ ಆಚರಿಸಲಾಗುವುದು. ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ತಲಾ ಐವರು ಕುರುಬ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ವೇದಿಕೆ ಮೇಲೆ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಲಾಗುವುದು. ಎಲ್ಲ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು.
ವಿವಿಧ ಇಲಾಖೆಗಳ ಅಧಿಕಾರಿಗಳಾದ ಡಾ. ಮಂಜುನಾಥರೆಡ್ಡಿ, ಡಾ. ವಿಶ್ವನಾಥ್, ವೈ.ಎನ್.ಸತ್ಯನಾರಾಯಣ, ಬಿ.ವಿ.ಮುನಿರೆಡ್ಡಿ, ಎ.ಬೈರಾರೆಡ್ಡಿ, ಕೃಷ್ಣಪ್ಪ, ಕೆ.ಸಿ.ಮಂಜುನಾಥ್, ರಾಮತೀರ್ಥ, ಎಸ್.ರಮಾದೇವಿ, ಎಸ್.ಕುಮುದವಲ್ಲಿ, ಮಂಜುನಾಥ್, ಕೆ.ಜಿ.ರಮೇಶ್, ನರಸಿಂಹಮೂರ್ತಿ, ನವೀನ್, ಕೆ.ಆರ್.ಮಂಜುನಾಥ್, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಎಂ.ವೇಮಣ್ಣ, ಮಂಜುನಾಥ್ ಇದ್ದರು.