

ಕೋಲಾರ,ನ.25: ರಾಜ್ಯ ಸರ್ಕಾರದ ಮುಂದಿನ ಬಜೆಟ್ನಲ್ಲಿ ಎಲ್ಲಾ ಜಿಲ್ಲೆಗಳ ಕಾರ್ಯನಿರತ ಪತ್ರಕರ್ತರ ಸಂಘಗಳ ಕ್ಷೇಮಾಭಿವೃದ್ದಿ ನಿಧಿಗೆ ತಲಾ 10 ಲಕ್ಷರೂ ನೀಡಲು ಕ್ರಮ ವಹಿಸುವುದಾಗಿ ಮುಖ್ಯಮಂತ್ರಿಗಳ ಪತ್ರಿಕಾ ಕಾರ್ಯದರ್ಶಿ ಕೆ.ವಿ.ಪ್ರಭಾಕರ್ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ತುಮಕೂರಿನಲ್ಲಿ ನಡೆದ ಪತ್ರಕರ್ತರ ಕ್ರೀಡಾಕೂಟದಲ್ಲಿ ಗೆಲುವು ಸಾಧಿಸಿ ಜಿಲ್ಲೆಯ ಘನತೆ ಹೆಚ್ಚಿಸಿದ ಪತ್ರಕರ್ತರನ್ನು ಅಭಿನಂದಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಬ್ಬಡ್ಡಿಯಲ್ಲಿ ಚಾಂಫಿಯನ್ ಆಗಿ ಹೊರಹೊಮ್ಮಿದ ಜಿಲ್ಲಾ ತಂಡಕ್ಕೆ ವೈಯಕ್ತಿಕವಾಗಿ ಇಪ್ಪತ್ತೈದು ಸಾವಿರ ರೂ ಬಹುಮಾನ ಘೋಷಿಸಿ ಅವರು ಮಾತನಾಡುತ್ತಿದ್ದರು.
ರಾಜ್ಯದಲ್ಲೇ ಕೋಲಾರ ಜಿಲ್ಲಾ ಸಂಘವು ಮಾದರಿಯಾಗಿದೆ, ಪ್ರತಿಯೊಂದು ಚಟುವಟಿಕೆಗಳನ್ನು ಸಂಘವು ಯಶಸ್ವಿಯಾಗಿ ಮಾಡಿಕೊಂಡು ಬಂದಿದೆ. ಯಾವುದೇ ಕ್ರೀಡಾ ಕೂಟದಲ್ಲಿ ಭಾಗವಹಿಸಿದಾಗ ಇಡೀ ಜಿಲ್ಲೆಯ ಪತ್ರಕರ್ತರ ತಂಡವೇ ಭಾಗವಹಿಸಿದೆ ಎನ್ನುವ ದೃಢವಿಶ್ವಾಸದೊಂದಿಗೆ ಗೆಲುವು ಸಾಧಿಸಿಕೊಂಡು ಬಂದಿದ್ದೀರಿ ಎಂದು ಅಭಿನಂದಿಸಿದರು.
ರಾಜ್ಯಮಟ್ಟದ ಪತ್ರಕರ್ತರ ಕ್ರೀಡಾಕೂಟ ಎಲ್ಲೇ ನಡೆಯಲಿ ಕಪ್ ಮಾತ್ರ ಕೋಲಾರದ ಪತ್ರಕರ್ತರ ಸಂಘಕ್ಕೆ ಬರಬೇಕು ಎಂಬ ಬ್ರ್ಯಾಂಡ್ ಹೆಚ್ಚಬೇಕು, ಕೋಲಾರದವರು ಭಾಗವಹಿಸಿದ್ದಾರೆ ಎಂದರೆ ಅಲ್ಲಿ ಗೆಲುವು ನಮ್ಮದಾಗಿರಬೇಕು.
