


ಕುಂದಾಪುರ: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಕೆ. ಪ್ರತಾಪಚಂದ್ರ ಶೆಟ್ಟಿ ಅವರು ಕೆಪಿಸಿಸಿ ಸದಸ್ಯತ್ವಕ್ಕೆ ಸಲ್ಲಿಸಿದ ರಾಜೀನಾಮೆಯನ್ನು ಅಂಗೀಕರಿಸದಿರಲು ಕುಂದಾಪುರ ಬ್ಲಾಕ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್. ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಅವರು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರಿಗೆ ಪತ್ರ ಬರೆದಿದ್ದಾರೆ
ಕೆ. ಪ್ರತಾಪಚಂದ್ರ ಶೆಟ್ಟಿಯವರು ಕುಂದಾಪುರ ಯುವ ಕಾಂಗ್ರೆಸ್, ಬ್ಲಾಕ್ ಕಾಂಗ್ರೆಸ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಕೆಪಿಸಿಸಿ ಕಾರ್ಯದರ್ಶಿ ಹಾಗೂ ಉಪಾಧ್ಯಕ್ಷರು, ಎಐಸಿಸಿ ಸದಸ್ಯರು, ಹೀಗೆ ಪಕ್ಷದ ವಿವಿಧ ಸ್ಥರಗಳಲ್ಲಿ ಕೆಲಸ ಮಾಡಿ ಪಕ್ಷದ ನಿಷ್ಟಾವಂತ ಕಾರ್ಯಕರ್ತ ಮತ್ತು ನಾಯಕರಾಗಿ ಗುರುತಿಸಿಕೊಂಡು 4 ಬಾರಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ, 3 ಬಾರಿ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ ಹಾಗೂ ಸಭಾಪತಿಯಾಗಿ ಸೇವೆ ಸಲ್ಲಿಸಿದವರು.
ಅವರು ತಮ್ಮ ರಾಜಕೀಯ ಜೀವನದಲ್ಲಿ ಸಜ್ಜನ, ಸಚ್ಚಾರಿತ್ರ್ಯ, ದಕ್ಷ ಕಳಂಕರಹಿತ, ಶುದ್ಧ ಹಸ್ತದ ರಾಜಕಾರಣಿಯಾಗಿ ತನ್ನ ಸುಧೀರ್ಘ 40 ವರ್ಷದ ರಾಜಕೀಯ ಜೀವನದಲ್ಲಿ ಶಕ್ತಿ ಮೀರಿ ಪಕ್ಷಕ್ಕಾಗಿ ದುಡಿದು ತನ್ನ ಕೆಲಸದಿಂದ ಮತ್ತು ವ್ಯಕ್ತಿತ್ವದಿಂದ ಗೌರವ ಹೆಚ್ಚಾಗುವಂತೆ ಕಾಂಗ್ರೆಸ್ ಪಕ್ಷಕ್ಕೂ ಕಾರ್ಯನಿರ್ವಹಿಸಿದ್ದಾರೆ. ತನ್ನ ನೇರನುಡಿ, ಸಾಮಾಜಿಕ ನ್ಯಾಯದ ಬದ್ಧತೆ, ಸಚ್ಚಾರಿತ್ಯದ ಬದುಕಿನಿಂದ ಕೆ ಪ್ರತಾಪಚಂದ್ರ ಶೆಟ್ಟಿಯವರು ಉಡುಪಿ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಬಹಳಷ್ಟು ಜನ ಅನುಯಾಯಿಗಳನ್ನು ಹೊಂದಿದ್ದು, ತನ್ನನ್ನು ನಂಬಿದವರನ್ನು ಹಾಗೂ ಪಕ್ಷದ ನಿಷ್ಟಾವಂತ ಕಾರ್ಯಕರ್ತರನ್ನು ಎಂದಿಗೂ ಕೈಬಿಡದವರೆಂದು ಜನಜನಿತವಾಗಿರುತ್ತದೆ. ಜಿಲ್ಲೆಯ ಜ್ವಲಂತ ಸಮಸ್ಯೆಗಳ ಹೋರಾಟಕ್ಕೆ ಯಾವುದೇ ಮುಲಾಜಿಲ್ಲದೇ ಹೋರಾಟ ಮಾಡುವ ವ್ಯಕ್ತಿತ್ವ ಹೊಂದಿರುವುದರಿಂದ ಜಿಲ್ಲೆಯಲ್ಲಿ ಜನಪ್ರಿಯ ಕಾಂಗ್ರೆಸ್ ನಾಯಕರಾಗಿರುತ್ತಾರೆ.
ಕೆ ಪ್ರತಾಪಚಂದ್ರ ಶೆಟ್ಟಿಯವರು ಪ್ರಚಲಿತ ರಾಜಕೀಯ ವಿದ್ಯಮಾನಗಳ ಹಿನ್ನಲೆಯಲ್ಲಿ ಮತ್ತು ಪಕ್ಷದಲ್ಲಿ ಬೇರೆಯವರಿಗೆ ಅವಕಾಶ ಮಾಡಿಕೊಡುವ ದೃಷ್ಟಿಯಿಂದ ಅವರು ನೀಡಿರುವ `ರಾಜೀನಾಮೆಯು ಅವರ ನಾಯಕತ್ವದಲ್ಲಿ ಕಳೆದ 30 ವರ್ಷಗಳಿಂದ ಇರುವ ನನಗೆ ವೈಯಕ್ತಿಕವಾಗಿ ನೋವನ್ನುಂಟು ಮಾಡಿದೆ. ಪಕ್ಷದ ಹಿತದೃಷ್ಟಿ ಮತ್ತು ಚುನಾವಣಾ ದೃಷ್ಟಿಯಿಂದ ಇವರ ರಾಜೀನಾಮೆಯು ಉಡುಪಿಯ ಜಿಲ್ಲೆಯಲ್ಲಿ ಬಹಳಷ್ಟು ಪರಿಣಾಮ ಬೀರಲಿರುವುದು ತಮ್ಮ ಗಮನಕ್ಕೂ ಬಂದಿರುತ್ತದೆ ಎಂದು ಭಾವಿಸುತ್ತೇನೆ. ಈ ಎಲ್ಲಾ ಹಿನ್ನಲೆಯಲ್ಲಿ ತಾವು ಶ್ರೀ ಕೆ ಪ್ರತಾಪಚಂದ್ರ ಶೆಟ್ಟಿಯವರು ನೀಡಿರುವ ರಾಜೀನಾಮೆಯ ಪತ್ರದ ಕುರಿತು ಸೂಕ್ತವಾದ ನಿರ್ಧಾರವನ್ನು ಕೈಗೊಳ್ಳುವಂತೆ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಅವರು ವಿನಂತಿಸಿಕೊಂಡಿದ್ದಾರೆ.