

ಶ್ರೀನಿವಾಸಪುರ.ಏ.4. ಬೆಲೆ ಕುಸಿತದಿಂದ ಕಂಗಾಲಾಗಿರುವ ಟೊಮೇಟೊ ಆಲೂಗಡ್ಡೆ ಪ್ರತಿ ಕೆಜಿಗೆ 10 ರೂ ಬೆಂಬಲ ಬೆಲೆ ಘೋಷಣೆ ಮಾಡಿ ಸಂಕಷ್ಟದಲ್ಲಿರುವ ರೈತರ ರಕ್ಷಣೆ ಮಾಡಬೇಕೆಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಪತ್ರಿಕಾ ಹೇಳಿಕೆ ಮುಖಾಂತರ ತೋಟಗಾರಿಕೆ ಮಂತ್ರಿಗಳನ್ನು ಒತ್ತಾಯಿಸಿದರು.
ವ್ಯವಸಾಯ ಮನೆ ಮಕ್ಕಳೆಲ್ಲಾ ದುಡಿದು ದುಡಿದು ಉಪವಾಸ ಸಾಯ ಎಂಬ ಗಾಧೆಯಂತೆ ರೈತನ ಬದುಕು ನೀರಿನ ಮೇಲೆ ಗುಳ್ಳೆ ಇದ್ದಂತಾಗಿದೆ. ಬೆಳೆ ಇದ್ದರೆ ಬೆಲೆಯಿಲ್ಲ, ಬೆಲೆಯಿದ್ದರೆ ಬೆಳೆಯಿಲ್ಲದಂತಾಗಿದೆ. ಆದರೂ ಸರಕಾರ ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕೃಷಿ ಆಧಾರಿತ ಕೈಗಾರಿಕೆಗಳು ಸಂಸ್ಕರಣಾ ಘಟಕಗಳನ್ನು ಸ್ಥಾಪನೆ ಮಾಡುವಲ್ಲಿ ವಿಫಲವಾಗಿದೆ ಎಂದು ಸರಕಾರದ ರೈತ ವಿರೋಧಿ ಧೋರಣೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಲಕ್ಷಾತರ ರೂಪಾಯಿ ಬಂಡವಾಳ ಹಾಕಿ ಬೆಳೆದಿರುವ ಟೊಮೇಟೊ ಬೆಳೆಗೆ ಉತ್ತಮ ಬೆಲೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಶೇ.30ರಷ್ಟು ರೈತರಿಗೆ ಮಾರುಕಟ್ಟೆಯಲ್ಲಿ ಬೆಲೆ ಸಂಪೂರ್ಣವಾಗಿ ಕುಸಿದಿದ್ದು, ಕೂಲಿ ಜನರ ಹಣವೂ ಸಹ ಬರುತ್ತಿಲ್ಲ. ಟೆಂಪೋ ಬಾಡಿಗೆ ಮತ್ತಿತರರ ಖರ್ಚುಗಳನ್ನು ಕೈಯಿಂದ ನೀಡಬೇಕಾದ ಪರಿಸ್ಥಿತಿ ಇರುವುದರಿಂದ ಮಾನ್ಯ ಜಿಲ್ಲಾಧಿಕಾರಿಗಳು ಮಾರುಕಟ್ಟೆಯ ಟೊಮೇಟೊ ಬೆಲೆಯ ಪರಿಸ್ಥಿತಿಯ ವರದಿಯನ್ನು ತರಿಸಿಕೊಂಡು ಸರ್ಕಾರಕ್ಕೆ ಕಳುಹಿಸಿಕೊಟ್ಟು ಕನಿಷ್ಟ 10 ರೂ ಆದರೂ ಬೆಂಬಲ ಬೆಲೆ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.
ರಾಜ್ಯ ಮುಖಂಡ ಬಂಗವಾದಿ ನಾಗರಾಜಗೌಡ ಮಾತನಾಡಿ, ವಿದ್ಯುತ್ ಕಣ್ಣಾ ಮುಚ್ಚಾಲೆಯ ಜೊತೆಗೆ ನಕಲಿ ಬಿತ್ತನೆ ಬೀಜ ಕೀಟನಾಶಕಗಳ ಹಾವಳಿಯಲ್ಲೂ ರೈತರು 1 ಎಕರೆ ಕೃಷಿ ಮಾಡಲು 3 ಲಕ್ಷ ಬಂಡವಾಳ ಸುರಿದು 3 ತಿಂಗಳು ಭೂಮಿತಾಯಿಗೆ ಬೆವರ ಹನಿಯನ್ನು ಸುರಿಸುತ್ತಿರುವ ರೈತರಿಗೆ ಬೆವರಿಗೆ ತಕ್ಕ ಬೆಲೆ ಸಿಗುತ್ತಿಲ್ಲ. 90 ದಿನ ಕಷ್ಟಪಟ್ಟ ರೈತನ ಬದುಕನ್ನು ಒಂದೇ ನಿಮಿಷದಲ್ಲಿ ಮಾರುಕಟ್ಟೆಯ ಬೆಲೆಯನ್ನು ದಲ್ಲಾಳಿಗಳು ನಿಯಂತ್ರಣ ಮಾಡಿ ರೈತನನ್ನು ಬಡವನನ್ನಾಗಿ ಮಾಡಿ ದಲ್ಲಾಳರು ಶ್ರೀಮಂತರಾಗುತ್ತಿದ್ದಾರೆಂದು ಅಸಮಧಾನ ವ್ಯಕ್ತಪಡಿಸಿದರು.
ದುಬಾರಿಯಾಗಿರುವ ಬಿತ್ತನೆ ಆಲೂಗಡ್ಡೆ ರಸಗೊಬ್ಬರ, ಕೋಳಿಗೊಬ್ಬರ ಸೇರಿ ಎಕರೆಗೆ 4 ಲಕ್ಷ ಖರ್ಚು ಮಾಡಿ ಉತ್ತಮ ಬೆಳೆ ಬಂದಿದ್ದರೂ ಮಾರುಕಟ್ಟೆಯಲ್ಲಿ ಬೆಲೆಯನ್ನು ದಲ್ಲಾಳಿಗಳು ನಿಯಂತ್ರಣ ಮಾಡಿ ಬೆಲೆ ಕುಸಿಯುವಂತೆ ಮಾಡಿರುವುದರಿಂದ ರೈತನು ಬೆಳೆದಿರುವ ಆಲೂಗಡ್ಡೆ ಸಂಸ್ಕರಣಾ ಮಾಡಲು ಸರ್ಕಾರಿ ಶೀಥಿಲ ಕೇಂದ್ರಗಳು ಇಲ್ಲದೆ ತೋಟದಲ್ಲಿ ದಾಸ್ತಾನು ಮಾಡಲಾರದೆ ಕೊಳೆತು ಹೋಗುವ ಭೀತಿಯಲ್ಲಿರುವ ರೈತ ದಲ್ಲಾಳಿ ಕೇಳಿದ ಬೆಲೆಗೆ ಮಾರಾಟ ಮಾಡಿ ಹಾಕಿದ ಬಂಡವಾಳ ಕೈಗೆ ಸಿಗದೆ ನಷ್ಟದ ಹಾದಿಯಲ್ಲಿರುವ ಆಲೂಗಡ್ಡೆ ಹಾಗೂ ಟೊಮೇಟೊ ಬೆಳೆಗಾರರ ರಕ್ಷಣೆಗೆ ಪ್ರತಿ ಕೆಜಿಗೆ 10ರೂಪಾಯಿ ಬೆಂಬಲ ಬೆಲೆ ಘೋಷಣೆ ಮಾಡಿ ಪ್ರತಿ ತಾಲೂಕಿಗೆ ಶೀಥಿಲ ಘಟಕ ಹಾಗೂ ಸಂಸ್ಕರಣಾ ಘಟಕಗಳು ಕೃಷಿ ಆಧಾರಿತ ಕೈಗಾರಿಕೆಗಳನ್ನು ಸ್ಥಾಪನೆ ಮಾಡಬೇಕೆಂದು ಒತ್ತಾಯಿಸಿದರು.
ಪತ್ರಿಕಾ ಹೇಳಿಕೆ ನೀಡುವಾಗ ತಾಲೂಕು ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ, ಜಿಲ್ಲಾಧ್ಯಕ್ಷ ಮಂಜುನಾಥ, ಶಿವು, ರಾಜೇಂದ್ರ ಗೌಡ, ಸಹದೇವಣ್ಣ, ಮಂಗಸಂದ್ರ ನಾಗೇಶ್, ತಿಮ್ಮಣ್ಣ, ವೆಂಕಟೇಶಪ್ಪ, ಸುಪ್ರೀಂಚಲ, ನವೀನ್, ತೆರ್ನಹಳ್ಳಿ ವೆಂಕಿ ಮುಂತಾದವರಿದ್ದರು.

