ಕೋಲಾರ:- ರಾಹುಲ್ ಗಾಂಧಿಯವರನ್ನು 5 ಲಕ್ಷಗಳಿಗೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿ ಪ್ರಧಾನ ಮಂತ್ರಿಯಾಗಿಸಲು ಸಹಕಾರ ನೀಡಬೇಕೆಂದು ರಾಜ್ಯ ಆಹಾರ ಮತ್ತು ನಾಗರೀಕ ಸಚಿವ ಕೆ.ಎಚ್. ಮುನಿಯಪ್ಪ ಕೇರಳ ರಾಜ್ಯದ ವಯನಾಡು ಮತದಾರರಿಗೆ ಮನವಿಮಾಡಿದ್ದಾರೆ.
ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಕೇರಳ ರಾಜ್ಯದಲ್ಲಿ 20 ಸ್ಥಾನಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದ ಅವರು, ರಾಹುಲ್ ಗಾಂಧಿ ಪ್ರಧಾನಿಯಾಗಲು ಸಹಕಾರಿಯಾಗಲಿದೆ ಎಂದು ಭವಿಷ್ಯ ನುಡಿದರು.
ಕರ್ನಾಟಕದಲ್ಲಿ ಐದು ಗ್ಯಾರೆಂಟಿ ಯೋಜನೆಗಳು ಸಂಪೂರ್ಣ ಯಶಸ್ಸಾಗಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷವು ಇಡೀ ದೇಶಕ್ಕೆ ಈ ಐದು ನ್ಯಾಯ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಕೊಟ್ಟಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರ್ನಾಟಕ ಮಾದರಿಯಲ್ಲಿ ಇಡೀ ದೇಶದಲ್ಲಿ ಜಾರಿಗೆ ತರಲಾಗುವುದು ಎಂದರು.
ಕೇರಳದಲ್ಲಿ ಮೋದಿ ಅಲೆ ಕಂಡು ಬರುತ್ತಿಲ್ಲ, ಕಾಂಗ್ರೆಸ್ ಪಕ್ಷವೂ ಕೇರಳ ಜನತೆಯ ಕಲ್ಯಾಣಕ್ಕಾಗಿ, ಹಿತ ಕಾಪಾಡಲು ಶ್ರಮಿಸುತ್ತಿದೆ ಎಂದ ಅವರು, ಇದೀಗ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಕೇರಳ ರಾಜ್ಯದ ಅಭಿವೃದ್ದಿಗೆ ಒತ್ತು ನೀಡಲಿದೆ ಎಂದು ತಿಳಿಸಿದರು.
ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಕೋಮುವಾದಿಯಾಗಿದ್ದ ಸಮುದಾಯದಲ್ಲಿ ವಿಷ ಬೀಜ ಬಿತ್ತುತ್ತಿದೆ, ಇದನ್ನು ಕಡೆಗಣಿಸಿ ಜಾತ್ಯಾತೀತ ಭಾರತ ನಿರ್ಮಿಸಲು ರಾಹುಲ್ ಗಾಂಧಿಗೆ ಅವಕಾಶ ನೀಡಬೇಕು ಎಂದು ಕೋರಿದರು.
ರಾಹುಲ್ ಗಾಂಧಿಯವರು ಪಾದಯಾತ್ರೆ ನಡೆಸುವ ಮೂಲಕ ದೇಶದ ಜನರ ಸಮಸ್ಯೆಗಳನ್ನು ಅರಿತಿದ್ದಾರೆ, ಜನಸಾಮಾನ್ಯರೊಂದಿಗೆ ಬೆರೆತು ಅವರ ಕಷ್ಟಗಳನ್ನು ಆಲಿಸಿದ್ದಾರೆ, ಅವರಲ್ಲಿ ಶೋಷಿತರಪರ ಪ್ರೀತಿ ಇದೆ, ಅವರು ಅಧಿಕಾರಕ್ಕೆ ಬಂದರೆ ದೇಶದ ಭವಿಷ್ಯ ಉತ್ತಮಗೊಳ್ಳಲಿದೆ ಎಲ್ಲರಿಗೂ ಸಮಾನ ನ್ಯಾಯ ಸಿಗಲಿದೆ ಎಂದರು.
ಮಾಜಿ ಸಂಸದ ತಂಗಬಾಲು, ರಾಜ್ಯ ಸಭಾ ಸದಸ್ಯ ಜೆ.ಬಿ.ಮಾಥರ್, ಯುಡಿಎಫ್ ಅಧ್ಯಕ್ಷ ಮೋಯಿದ್ದೀನ್, ಪ್ರಧಾನ ಸಂಚಾಲಕ ವರ್ಗೀಸ್ ಮತ್ತು ಕಾಂಗ್ರೆಸ್ ಪಕ್ಷದ ನಾಯಕರು,ಕಾರ್ಯಕರ್ತರು ಹಾಜರಿದ್ದರು.